
ಚಿಕ್ಕಮಗಳೂರು, ಜುಲೈ 29: ರಂಭಾಪುರಿ ಶ್ರೀ (rambhapuri swamiji) ಅವರ ಜಾತಿ ಮಠಗಳಿಂದ ಸಮಾಜ ಕಲುಷಿತ ಎಂಬ ಹೇಳಿಕೆ ಸದ್ಯ ಕರ್ನಾಟಕದಲ್ಲಿ (Karnataka) ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕನಕ, ವಾಲ್ಮೀಕಿ, ಮಾದರ, ಭೋವಿ ಹೀಗೆ ಹತ್ತಾರು ಗುರುಪೀಠಗಳ ಸ್ವಾಮೀಜಿಗಳು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ರಂಭಾಪುರಿ ಶ್ರೀಗಳು ವಿಷಾದ ವ್ಯಕ್ತಪಡಿಸಿದ್ದು, ಇದು ನೋವಿನ ಸಂಗತಿ ಎಂದು ಹೇಳಿದ್ದಾರೆ.
ಸದ್ಯ ಈ ಕುರಿತಾಗಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಸುದ್ದಿಗೋಷ್ಠಿ ನಡೆಸಿದ್ದಕ್ಕೆ ವಿಷಾದಿಸುತ್ತೇನೆ, ಇದು ನೋವಿನ ಸಂಗತಿ. ಅವರವರ ಸಮುದಾಯದ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ. ಭದ್ರಾವತಿಯ ವೀರಶೈವ ಲಿಂಗಾಯತ ಕಾರ್ಯಕ್ರಮದಲ್ಲಿ ನಾವು ಧರ್ಮ ಪರಂಪರೆ, ಸಂಸ್ಕೃತಿ ಬಗ್ಗೆ ಮಾತನಾಡಿದ್ದೇನೆ. ಅನ್ಯ ಬೇರೆ ಯಾವುದೇ ಜಾತಿ ಕುರಿತು ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ದಲಿತ ಹಿಂದುಳಿದ ಮಠಾಧೀಶರು ಸುದ್ದಿಗೋಷ್ಠಿ ಮಾಡಿ ಕೆಲವು ಪತ್ರಿಕೆಗಳಲ್ಲಿ ಬಂದಿರುವ ವರದಿಯನ್ನು ಆಧರಿಸಿ ಭದ್ರಾವತಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದ್ದಾರೆಂಬ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಈ ಕೆಳಗಿನಂತೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಮತ್ತೆ ಭುಗಿಲೆದ್ದ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ: ಪಂಚಪೀಠಾಧ್ಯಕ್ಷರ ನಿರ್ಣಯಕ್ಕೆ ಲಿಂಗಾಯತ ಮಠಾಧಿಪತಿಗಳ ಸೆಡ್ಡು
ಭದ್ರಾವತಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭದ್ರಾವತಿ ತಾಲೂಕಾ ಘಟಕದಿಂದ ಜರುಗಿದ ಸಮಾರಂಭದಲ್ಲಿ ಜಾತಿಯ ಮಠಗಳಿಂದ ಕಲುಷಿತ ವಾತಾವರಣ ಈ ಹೇಳಿಕೆ ಹಿನ್ನೆಲೆಯಲ್ಲಿ ದಲಿತ ಹಿಂದುಳಿದ ಮಠಾಧೀಶರು ಸುದ್ದಿಗೋಷ್ಠಿ ಮಾಡಿರುವುದು ನೋವಿನ ಸಂಗತಿ. ವೀರಶೈವ ಲಿಂಗಾಯತ ಸಮುದಾಯದ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಕೃತಿ ಪರಂಪರೆ ಆದರ್ಶಗಳ ಬಗೆಗೆ ಮಾತನಾಡಿದ್ದೇವೆ ಹೊರತು ಅನ್ಯ ಬೇರೆ ಯಾವುದೇ ಜಾತಿ ಕುರಿತು ಯಾವುದೇ ಹೇಳಿಕೆ ಕೊಟ್ಟಿರುವುದಿಲ್ಲ.
ಇದನ್ನೂ ಓದಿ: 3 ದಶಕಗಳ ನಂತರ ನಡೆದ ವೀರಶೈವ ಶಿವಾಚಾರ್ಯರ ಶೃಂಗಸಭೆಯಲ್ಲಿ 12 ನಿರ್ಣಯಗಳು ಅಂಗೀಕಾರ
ದಲಿತ ಹಿಂದುಳಿದ ಮಠಾಧೀಶರು ತಪ್ಪು ಗ್ರಹಿಕೆ ಮಾಡಿಕೊಂಡು ಗೋಷ್ಠಿ ನಡೆಸಿರುವುದಕ್ಕೆ ವಿಷಾಧಿಸುತ್ತೇವೆ. ಅವರವರ ಸಮುದಾಯದ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪವಾಗಲಿ ಅಲ್ಲ ಸಲ್ಲದ ಮಾತುಗಳಿಲ್ಲವೆಂಬುದನ್ನು ಸ್ಪಷ್ಟಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:30 am, Tue, 29 July 25