ಶೃಂಗೇರಿ ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ ಪ್ರಕರಣ; ಶಿರಸ್ತೇದಾರ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದ ಪೊಲೀಸರು
ತಹಶೀಲ್ದಾರ್ ಕಾರು ಚಾಲಕ, ಶೃಂಗೇರಿ ತಾಲೂಕಿನ ಹೆಗ್ತೂರು ಗ್ರಾಮದ ವಿಜೇತ್ ನಿನ್ನೆ ಸಂಜೆ ತನ್ನ ಮನೆಯ ಅಡಿಕೆ ತೋಟದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಚಿಕ್ಕಮಗಳೂರು: ಕಳೆದ ಎರಡು ವರ್ಷಗಳಿಂದ ಶೃಂಗೇರಿಯಲ್ಲೇ ಠಿಕಾಣಿ ಹೂಡಿದ ತಹಶೀಲ್ದಾರ್(Tahsildar) ಅಧಿಕಾರಿಯೊಬ್ಬರು, ಬೋಗಸ್ ಹಕ್ಕು ಪತ್ರಗಳನ್ನು ನೀಡಿ ಜೈಲು ಸೇರಿದ್ದಾರೆ. ಈ ಬೆಳವಣಿಗೆ ನಡೆಯುತ್ತಿರುವ ಮಧ್ಯೆದಲ್ಲೇ ತಹಶೀಲ್ದಾರ್ ಕಾರು ಚಾಲಕ ಏಕಾಏಕಿ ಆತ್ಮಹತ್ಯೆ(Suicide) ಮಾಡಿಕೊಳ್ಳುವ ಮೂಲಕ ಜನರನ್ನ ಮತ್ತಷ್ಟು ಆತಂಕಕ್ಕೆ ದೂಡಿದ್ದಾನೆ. ನಿನ್ನೆ (ಜನವರಿ 29) ಸಂಜೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹೆಗ್ತೂರಿನಲ್ಲಿ ಕಾರು ಚಾಲಕ(Car Driver) ವಿಜೇತ್(26) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಶಿರಸ್ತೇದಾರ್ ಸೇರಿದಂತೆ ಮೂವರನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆಗೆ ಮುಂದಾಗಿದ್ದಾರೆ.
ಈ ಹಿಂದೆ ಇಲ್ಲಿ ತಹಶೀಲ್ದಾರ್ ಆಗಿದ್ದ ಅಂಬುಜಾ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಮಾಡಿದ್ದು, ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ತಂಡದಲ್ಲಿ ಕೆಲ ಕಚೇರಿ ಸಿಬ್ಬಂದಿಗಳು, ಪಿಡಿಓಗಳು, ಆರ್ಐಗಳು ಸೇರಿದಂತೆ ದೊಡ್ಡದಾದ ಒಂದು ಧೂರ್ತಕೂಟವೇ ಇದೆ. ಈ ತಂಡ ಕಳೆದ ಕೆಲ ತಿಂಗಳಿನಿಂದ ಆಡಿದ ಆಟ, ಬಾಚಿದ ಹಣ ಲೆಕ್ಕಕ್ಕೆ ಇಲ್ಲ. ಬೋಗಸ್ ಹಕ್ಕುಪತ್ರಗಳನ್ನು ಸೃಷ್ಠಿ ಮಾಡಿ, ಕೇಳಿ ಕೇಳಿದವರಿಗೆ ಆ ಹಕ್ಕುಪತ್ರಗಳನ್ನು ಕೊಟ್ಟು ಒಬ್ಬೊಬ್ಬರಿಂದಲೂ 1ಲಕ್ಷ, 2 ಲಕ್ಷ, 3 ಲಕ್ಷ ರೂಪಾಯಿ ಹೀಗೆ ಮನಸ್ಸಿಗೆ ಬಂದಷ್ಟು ಹಣವನ್ನು ಪಡೆದಿದ್ದಾರೆ.
ಒಂದು ಮೂಲಗಳ ಪ್ರಕಾರ 671ಕ್ಕೂ ಹೆಚ್ಚು ಬೋಗಸ್ ಹಕ್ಕುಪತ್ರಗಳನ್ನು ಮುಗ್ಧ ಜನರಿಗೆ ನೀಡಿ ವಂಚಿಸಿದ್ದಾರೆ. ಈ ಸಂಬಂಧ ಇದೇ ಜನವರಿ 6ರಂದು ಎಸಿಬಿ ದಾಳಿ ಮಾಡಿ ತಹಶೀಲ್ದಾರ್ ಅಂಬುಜಾ ಸೇರಿದಂತೆ ಗ್ರಾಮ ಲೆಕ್ಕಿಗನೊಬ್ಬನನ್ನು ಬಲೆಗೆ ಕೆಡವಿತು. ಈ ಬೆಳವಣಿಗೆಗಳು ನಡೆಯುತ್ತಿರುವ ಮಧ್ಯೆದಲ್ಲಿ ತಹಶೀಲ್ದಾರ್ ಕಾರು ಚಾಲಕ, ಶೃಂಗೇರಿ ತಾಲೂಕಿನ ಹೆಗ್ತೂರು ಗ್ರಾಮದ ವಿಜೇತ್ ನಿನ್ನೆ ಸಂಜೆ ತನ್ನ ಮನೆಯ ಅಡಿಕೆ ತೋಟದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಿನ್ನೆಯಷ್ಟೇ ತಹಶೀಲ್ದಾರ್ ಮತ್ತು ತಂಡದ ಅಕ್ರಮ ಕುರಿತು ಎಸಿ ತನಿಖೆ ಶುರುಮಾಡಿದ್ದರು. ಹೀಗಿರುವಾಗಲೇ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಈ ಮಧ್ಯೆ ತಹಶೀಲ್ದಾರ್ ಅಂಬುಜಾ, ಜೈಲಿಗೆ ಹೋಗಿ ಇದೀಗ ಬೇಲು ತೆಗೆದುಕೊಂಡು ಆರಾಮವಾಗಿ ಮನೆಯಲ್ಲಿದ್ದಾರೆ. ಆದರೀಗ ತಹಶೀಲ್ದಾರ್ ಕಾರು ಚಾಲಕ ವಿಜೇತ್ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ತಹಶೀಲ್ದಾರ್ ಸೇರಿದಂತೆ ಶೃಂಗೇರಿಯ ಕಚೇರಿಯಲ್ಲಿ ದೊಡ್ಡದಾಗಿ ಬೇರೂರಿರುವ ಬ್ರೋಕರ್ಗಳಿಗೆ ವಿಜೇತ್ಗೂ ಮೋಸವಾಗಿದ್ಯಾ ಎನ್ನುವ ಪ್ರಶ್ನೆ ಮೂಡಿದೆ. ಹೀಗಾಗಿ ಮೃತರ ಸಂಬಂಧಿರಕರು, ಜನಸಾಮಾನ್ಯರು ವಿಜೇತ್ ಸಾವಿಗೆ ಸೂಕ್ತ ಪರಿಹಾರ ನೀಡುವಂತೆ ನಿನ್ನೆ ರಾತ್ರಿ ಪ್ರತಿಭಟನೆ ನಡೆಸಿದ್ದರು.
ಮೃತ ಚಾಲಕ ವಿಜೇತ್ ಸಂಬಂಧಿಕರು, ಜನರಿಂದ ಪ್ರತಿಭಟನೆ
ಶೃಂಗೇರಿಯಲ್ಲಿ ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಚಾಲಕ ವಿಜೇತ್ ಸಂಬಂಧಿಕರು ಹಾಗೂ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಚಿಕ್ಕಮಗಳೂರು ಡಿಸಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಡೆತ್‌ನೋಟ್‌ನಲ್ಲಿ ವಿಜೇತ್ ಮೂವರ ಹೆಸರು ಉಲ್ಲೇಖಿಸಿದ್ದಾನೆ. ಹೀಗಾಗಿ ವಿಜೇತ್ ಸಾವಿಗೆ ಕಾರಣರಾದವರನ್ನು ಬಂಧಿಸಲು ಹಾಗೂ ವಿಜೇತ್ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡುವಂತೆ ಧರಣಿನಿರತರು ಆಗ್ರಹಿಸಿದ್ದಾರೆ.
ವರದಿ: ಪ್ರಶಾಂತ್
ಇದನ್ನೂ ಓದಿ: ಶೃಂಗೇರಿ: ತಹಶೀಲ್ದಾರ್ ಕಾರು ಚಾಲಕ ಆತ್ಮಹತ್ಯೆ; ಪ್ರಕರಣ ತನಿಖೆಗೆ ಆಗ್ರಹಿಸಿ ಕುಟುಂಬಸ್ಥರು, ಸ್ಥಳಿಯರ ಧರಣಿ
ಮೊಮ್ಮಗಳು ಆತ್ಮಹತ್ಯೆ ಹಿನ್ನೆಲೆ: ಬಿಎಸ್ ಯಡಿಯೂರಪ್ಪಗೆ ಸಾಂತ್ವನ ಹೇಳಿದ ಪ್ರಧಾನಿ ಮೋದಿ, ಹೆಚ್ಡಿ ದೇವೇಗೌಡ
Published On - 9:17 am, Sun, 30 January 22