ಪ್ರವೀಣ್ ನೆಟ್ಟಾರು ಹತ್ಯೆ: “ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ಕಲ್ಲು ಹೊಡೆಯಬಹುದಿತ್ತು”; ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ ವೈರಲ್
ರಾಜೀನಾಮೆ ವಿಚಾರ ಕಿವಿಗೆ ಬೀಳುತ್ತಿದ್ದಂತೆ ತೇಜಸ್ವಿ ಸೂರ್ಯ ಸಂದೀಪ್ಗೆ ಕರೆ ಮಾಡಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಹತ್ಯೆಯಾಗಿದ್ರೆ ಕಲ್ಲು ಹೊಡೆಯಬಹುದಿತ್ತು ಎಂದಿರುವ ತೇಜಸ್ವಿ ಸೂರ್ಯ ಹೇಳಿಕೆ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.

ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು (Praveen Nettaru) ಬರ್ಬರ ಹತ್ಯೆಯಿಂದಾಗಿ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ. ಈ ವಿಚಾರವಾಗಿ ರಾಜೀನಾಮೆ ವಾಪಸ್ ಪಡೆಯುವಂತೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ಗೆ ತೇಜಸ್ವಿ ಸೂರ್ಯ ಕರೆ ಮಾಡಿದ್ದಾರೆ. ಸರ್ಕಾರ ನಮ್ಮದೆ ಇದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರದಲ್ಲಿ ಹತ್ಯೆಯಾಗಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ಸಂದೀಪ್ ಜೊತೆ ಫೋನ್ನಲ್ಲಿ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ ಎನ್ನಲಾಗುವ ಆಡಿಯೋ ವೈರಲ್ ಆಗಿದೆ. ಪ್ರವೀಣ್ ಹತ್ಯೆ ಖಂಡಿಸಿ ನಿನ್ನೆ ಬೆಳಗ್ಗೆಯೇ ಬಿಜೆಪಿ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದು, ಜಿಲ್ಲೆಯ ಯುವ ಮೋರ್ಚಾದ ನಿರ್ಧಾರಕ್ಕೆ ತೇಜಸ್ವಿ ಸೂರ್ಯ ತಬ್ಬಿಬ್ಬಾಗಿದ್ದಾರೆ. ರಾಜೀನಾಮೆ ವಿಚಾರ ಕಿವಿಗೆ ಬೀಳುತ್ತಿದ್ದಂತೆ ತೇಜಸ್ವಿ ಸೂರ್ಯ ಸಂದೀಪ್ಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಹತ್ಯೆಯಾಗಿದ್ರೆ ಕಲ್ಲು ಹೊಡೆಯಬಹುದಿತ್ತು ಎಂದಿರುವ ತೇಜಸ್ವಿ ಸೂರ್ಯ ಹೇಳಿಕೆ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ: ಪ್ರತಿಯೊಬ್ಬರಿಗೂ ರಕ್ಷಣೆ ನೀಡಲು ಸಾಧ್ಯವಾ..? ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ
21 ಶಂಕಿತರನ್ನು ವಶಕ್ಕೆ ಪಡೆದ ಪೊಲೀಸ್
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ಈವರೆಗೆ ಒಟ್ಟು 21 ಮಂದಿಯನ್ನು ವಶಕ್ಕೆ ಪಡೆದು ತೀವ್ರಿ ವಿಚಾರಣೆ ನಡೆಸುತ್ತಿದ್ದಾರೆ. ವಶಕ್ಕೆ ಪಡೆದವರ ಪೈಕಿ ಕೋಮು ಅಹಿತಕರ ಘಟನೆಗಳು ನಡೆದಾಗ ಸಾಮಾನ್ಯವಾಗಿ ಹೆಸರು ಕೇಳಿಬರುವ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳಿಗೆ ಸೇರಿದವರು ಕೂಡ ಒಳಗೊಂಡಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಪ್ರಕರಣದಲ್ಲಿ ಭಾಗಿಯಾದವರನ್ನ ಯಾರನ್ನ ಬಿಡುವುದಿಲ್ಲ ಎಂದರು.
ಇದನ್ನೂ ಓದಿ: 144 ಸೆಕ್ಷನ್ ಜಾರಿಯಲ್ಲಿದ್ದರೂ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಹೋಗುತ್ತಿದ್ದೇನೆ: ಬಿ.ವೈ.ವಿಜಯೇಂದ್ರ
ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ಪ್ರವೀಣ್ ಪತ್ನಿ ಒತ್ತಾಯ
ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ಮೃತ ಪ್ರವೀಣ್ ಪತ್ನಿ ನೂತನಾ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಟಿವಿ9 ಜೊತೆ ಮಾತನಾಡಿದ ಅವರು, ನನ್ನ ಪತಿ ಯಾರಿಗೂ ಅನ್ಯಾಯ ಮಾಡಲಿಲ್ಲ. ಇಡೀ ಸಮಾಜಕ್ಕಾಗಿ ಅವರು ಬದುಕಿದ್ದರು. ನನ್ನ ಪತಿಯ ಕೊಲೆ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕು. ಎನ್ಐಎ ತನಿಖೆಯಿಂದ ಮಾತ್ರ ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.
Published On - 1:05 pm, Thu, 28 July 22




