ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು: ದೇಗುಲಗಳ ಹಣ ಬಳಕೆ ಕುರಿತು ಸಿಟಿ ರವಿ ಪ್ರತಿಕ್ರಿಯೆ
ಹಿಂದೂಗಳ ದೇವಾಲಯಕ್ಕೆ ಮಾತ್ರ ಏಕೆ ಸರ್ಕಾರದ ಹಸ್ತಕ್ಷೇಪ ಇರಬೇಕು. ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಚಿಕ್ಕಮಗಳೂರು: ಹಿಂದೂ ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ದೇವಾಲಯಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಾತ್ರವೇ ಬಳಕೆ ಮಾಡುವ ವಿಚಾರವನ್ನು ಬಿಜೆಪಿ ಶಾಸಕ ಸಿ.ಟಿ.ರವಿ ಬೆಂಬಲಿಸಿದ್ದಾರೆ. ಮುಸ್ಲಿಮರಿಗೆ ವಕ್ಫ್ ಮಂಡಳಿಯಿದೆ. ಕ್ರಿಶ್ಚಿಯನ್ನರಿಗೆ ಅವರದೇ ಆದ ನಿಯಂತ್ರಣ ವ್ಯವಸ್ಥೆಯಿದೆ. ಈ ಧರ್ಮಗಳ ಧಾರ್ಮಿಕ ಕ್ಷೇತ್ರಗಳಲ್ಲಿ ಸಂಗ್ರಹವಾಗುವ ಹಣದ ನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ. ಹಿಂದೂಗಳ ದೇವಾಲಯಕ್ಕೆ ಮಾತ್ರ ಏಕೆ ಸರ್ಕಾರದ ಹಸ್ತಕ್ಷೇಪ ಇರಬೇಕು. ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು ಎಂದು ಅವರು ಅಭಿಪ್ರಾಯಪಟ್ಟರು.
ವಿದ್ಯುತ್ ಬಿಲ್ ವಿಚಾರದಲ್ಲಿಯೂ ಮಸೀದಿ ಮತ್ತು ದೇಗುಲಗಳಿಗೆ ಪ್ರತ್ಯೇಕ ದರಪಟ್ಟಿ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ತಿಳಿದುಕೊಂಡು ಪ್ರತಿಕ್ರಿಯಿಸುತ್ತೇನೆ. ಈ ಕುರಿತು ತಿಳಿದುಕೊಳ್ಳಲು ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ಫೋನ್ ಮಾಡಿದೆ. ಅವರ ಫೋನ್ ನಾಟ್ ರೀಚಬಲ್ ಆಗಿದೆ. ವಿದ್ಯುತ್ ಧಾರಣೆ ಒಂದೇ ರೀತಿ ಇರಬೇಕಾದ್ದು ನ್ಯಾಯ ಎಂದು ನುಡಿದರು.
ದೇವಸ್ಥಾನಗಳು ಸಮಾಜದ ಸ್ವತ್ತು, ದೇಗುಲಗಳನ್ನು ಸರ್ಕಾರದ ಹಿಡಿತದಿಂದ ಬಿಡಿಸಿ ಸಮಾಜಕ್ಕೆ ವಾಪಸ್ ಕೊಡುವ ಕೆಲಸವಾಗಬೇಕು. ಭಕ್ತರು ನೀಡಿರುವ ದಾನ-ದತ್ತಿಗಳಲ್ಲಿ ಜನರ ಭಾವನೆಗಳು ಇರುತ್ತವೆ. ಬ್ರಿಟಿಷರು ಹಿಂದೂ ದೇವಾಲಯಗಳ ಆದಾಯವನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಹಿಂದೂ ಧಾರ್ಮಿಕ ಸಂಸ್ಥೆಗಳು ಸರ್ಕಾರದ ಕಪಿಮುಷ್ಠಿಗೆ ಬಂತು ಎಂದು ವಿವರಿಸಿದರು.
ರಾಜಕೀಯಕ್ಕಾಗಿ ಪಾದಯಾತ್ರೆ: ಅಶೋಕ್ ಮೇಕೆದಾಟು ಯೋಜನೆಯನ್ನು ಶೀಘ್ರ ಆರಂಭಿಸಲು ಪಾದಯಾತ್ರೆ ನಡೆಸುವ ಕಾಂಗ್ರೆಸ್ ನಿರ್ಧಾರವನ್ನು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಐದೂ ವರ್ಷವೂ ಹಣಕಾಸು ಇಲಾಖೆ ಅವರ ಸುಪರ್ದಿಯಲ್ಲಿಯೇ ಇತ್ತು. ಡಿಪಿಆರ್ ಮಾಡೋದಕ್ಕೆ ಹೆಚ್ಚೆಂದರೆ ಮೂರು ತಿಂಗಳು ಆಗಬಹುದು. ಡಿಪಿಆರ್ ಮಾಡುವುದಕ್ಕೆ ಅವರೇಕೆ ಆರು ತಿಂಗಳು ತೆಗೆದುಕೊಂಡರು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಂತರ ಬಂದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಅವರೇ ನೀರಾವರಿ ಸಚಿವರಾಗಿದ್ದರು. ಆಗ ಸುಮ್ಮನಿದ್ದ ಅವರು ಈಗ ಮೇಕೆಮಾಂಸ ಸಿಗುತ್ತೆ ಎಂದು ಮೇಕೆದಾಟಿಗಿ ಹೋಗಿದ್ದಾರೆ. ಅಲ್ಲಿ ಮೇಕೆಯೂ ಸಿಗಲ್ಲ, ಮಾಂಸವೂ ಸಿಗಲ್ಲ. ಇವೆಲ್ಲಾ ದೊಂಬರಾಟ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ನಿಮ್ಮದೂ ಡಬಲ್ ಎಂಜಿನ್ ಸರ್ಕಾರವೇ ಆಗಿತ್ತಲ್ಲವೇ. ರಾಜ್ಯದಲ್ಲೂ ಕಾಂಗ್ರೆಸ್ ಆರು ವರ್ಷ ಅಧಿಕಾರದಲ್ಲಿ ಇತ್ತಲ್ಲವೇ, ಆಗೇನು ಇವರು ಕಳ್ಳೆಕಾಯಿ ತಿನ್ನುತ್ತಿದ್ದರಾ ಎಂದು ಟೀಕಿಸಿದರು.ಇದನ್ನೂ ಓದಿ: ಮತಾಂತರ ಕಾಯ್ದೆ ಜಾರಿಗೆ ವಿಶೇಷ ಟಾಸ್ಕ್ ಫೋರ್ಸ್, ಹಿಂದೂ ದೇಗುಲಗಳನ್ನು ಸ್ವತಂತ್ರ ಮಾಡುತ್ತೇವೆ: ಬಸವರಾಜ ಬೊಮ್ಮಾಯಿ ಇದನ್ನೂ ಓದಿ: ಬೆಂಗಳೂರು: ಹೆಬ್ಬಗೋಡಿ ನಗರಸಭೆ ಬಿಜೆಪಿ ಪಾಲಿಗೆ, ಕಾಂಗ್ರೆಸ್ಗೆ ಜಿಗಣಿ, ಬಿಜೆಪಿಗೆ ಚಂದಾಪುರ ಪುರಸಭೆ