
ಚಿಕ್ಕಮಗಳೂರು, ನವೆಂಬರ್ 22: ಕಾಫಿ ಕೊಯ್ಲಿನ ಸಮಯದಲ್ಲೇ ಕಾಡಾನೆಗಳ ಆತಂಕ ಎದುರಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ವ್ಯಾಪ್ತಿಯ ಕಾಫಿ ಬೆಳೆಗಾರರು ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ. ಗೋಣಿಬೀಡು ಸಮೀಪದ ಕಾರ್‌ಬೈಲ್ ಬಳಿ ಕಾಡಾನೆಗಳ ಹಿಂಡು ಚದುರಿಕೊಂಡಿದ್ದು, ಸುತ್ತಮುತ್ತಲಿನ ಹಲವು ಗ್ರಾಮಗಳು ಹಾಗೂ ಕಾಫಿ ತೋಟಗಳ ಪ್ರದೇಶಗಳಲ್ಲಿ ಓಡಾಟ ನಡೆಸುತ್ತಿದೆ. ಹೀಗಾಗಿ ಸದ್ಯಕ್ಕೆ ಕಾಫಿ ತೋಟಗಳಿಗೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಕಾರ್‌ಬೈಲ್, ವಾಟೆಗಂಡಿ, ಚಟ್ನಳ್ಳಿ, ಹುಲಿಹಡ್ಲು, ಕಮ್ಮಾರಗೋಡು ಮತ್ತು ಕಲ್ಲುಗುಡ್ಡ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆಗಳು ಸಂಚರಿಸುತ್ತಿವೆ. ಭುವನೇಶ್ವರಿ ಮತ್ತು ಓಲ್ಡ್ ಬೆಲ್ಟ್ ಗುಂಪುಗಳು ಚದುರಿದ್ದು, ಭೀಮ ಎಂಬ ಕಾಡಾನೆಯೂ ಈ ಭಾಗದಲ್ಲಿ ಓಡಾಟ ನಡೆಸುತ್ತಿದೆ.
ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಗೋಣಿಬೀಡು ಕಡೆಗೆ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರಿ ಇಡೀ ನಡೆಸಿದ್ದಾರೆ. ಆದರೆ, ಈ ಕಾರ್ಯಾಚರಣೆಯ ಬಳಿಕ ಆನೆಗಳ ಹಿಂಡು ಒಂದೇ ಕಡೆ ಉಳಿಯದೆ ವಿವಿಧ ಪ್ರದೇಶಗಳಿಗೆ ಚದುರಿಕೊಂಡಿದೆ. ರಸ್ತೆಗಳಲ್ಲಿ ಹಾಗೂ ಕಾಫಿ ತೋಟಗಳ ಆಸುಪಾಸಿನಲ್ಲಿ ಆನೆಗಳು ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಕಾಡಾನೆಗಳ ಚಲನವಲನದಿಂದಾಗಿ ಕಾಫಿ ಕೊಯ್ಲಿಗೆ ತೆರಳುವ ಬೆಳೆಗಾರರು ಮತ್ತು ತೋಟದ ಕಾರ್ಮಿಕರಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಅರಣ್ಯ ಇಲಾಖೆಯ ಸೂಚನೆಯನ್ನು ಪಾಲಿಸಿ, ಸದ್ಯಕ್ಕೆ ತೋಟಗಳತ್ತ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
ಕಳೆದ ಕೆಲವು ದಿನಗಳಿಂದ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿ ಭಾಗಗಳಲ್ಲಿ ಕಾಡಾನೆ-ಮಾನವ ಸಂಘರ್ಷ ತೀವ್ರಗೊಂಡಿದೆ. ಹಾಸನ ಜಿಲ್ಲೆಯಲ್ಲಿ ಇಬ್ಬರು ಹಾಗೂ ಚಿಕ್ಕಮಗಳೂರಿನಲ್ಲಿ ಒಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಘಟನೆಗಳ ಬಳಿಕ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗೃಹ ಪ್ರವೇಶದ ಸಂಭ್ರಮ ಮಾಸುವ ಮುನ್ನವೇ ಕುಟುಂಬಕ್ಕೆ ಆಘಾತ: ಆನೆ ದಾಳಿಗೆ ರೈತ ಬಲಿ; ರಸ್ತೆ ತಡೆದು ಪ್ರತಿಭಟನೆ
ಈ ನಡುವೆ ನವೆಂಬರ್ 25ರವರೆಗೆ ಯಾವುದೇ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿತ್ತು. ಆದರೆ, ಇದೀಗ ಬೇಲೂರು ಭಾಗದಿಂದ ಗೋಣಿಬೀಡು ಕಡೆಗೆ ಆನೆಗಳನ್ನು ಓಡಿಸಿರುವುದರಿಂದ ಹೊಸದಾಗಿ ಆತಂಕ ಸೃಷ್ಟಿಯಾಗಿದೆ. ಕಾಫಿ ಕೊಯ್ಲಿನ ನಿರ್ಣಾಯಕ ಸಮಯದಲ್ಲಿ ಆನೆಗಳ ಹಿಂಡು ತೋಟಗಳ ಸುತ್ತಮುತ್ತ ಓಡಾಡುತ್ತಿರುವುದರಿಂದ ಬೆಳೆಗಾರರು ಮತ್ತು ಕಾರ್ಮಿಕರು ಹೆಚ್ಚಿನ ಜಾಗ್ರತೆ ವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ