ಕಣ್ಣು ದೃಷ್ಟಿ ತೆಗೆಯುವ ಕೆಸವಳಲು ಕೂಡಿಗೆ: ಈ ಸ್ಥಳದ ವಿಶೇಷತೆ ತಿಳಿದರೇ ಅಚ್ಚರಿ ಪಡುತ್ತೀರಿ!
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಸವಳಲು ಕೂಡಿಗೆಯ ಹೇಮಾವತಿ ನದಿ ತಟ. ಹೇಮಾವತಿ ನದಿ ಜೊತೆ ಜಪವತಿ ನದಿ ಸಂಗಮವಾಗುವ ಈ ಸ್ಥಳ ವಿಶೇಷತೆಯನ್ನ ನೀವು ಕೇಳಿದರೆ ಅಚ್ಚರಿ ಪಡುತ್ತೀರಾ.
ಚಿಕ್ಕಮಗಳೂರು: ಅಲ್ಲಿ ನೆಲೆ ನಿಂತಿದ್ದಾರೆ ರಾಮ, ಲಕ್ಷ್ಮಣ, ಸೀತೆಯೊಂದಿಗೆ ಆಂಜನೇಯ. ದಲಿತರ ಪೂಜೆ ಅಂದರೆ ಈ ಪುರಾಣ ಪ್ರಸಿದ್ಧರಿಗೆ ಎಲ್ಲಿಲ್ಲದ ಪ್ರೀತಿ. ಇವರನ್ನೆ ನಂಬಿರೋ ಇಲ್ಲಿನ 30ಕ್ಕೂ ಹೆಚ್ಚು ದಲಿತ ಕುಟುಂಬಗಳು ಮಾಟ, ಮಂತ್ರಕ್ಕೆ ವಿಭಿನ್ನವಾಗಿ ಬ್ರೇಕ್ ಹಾಕುತ್ತಿದ್ದಾರೆ. ಜನರ ಕಣ್ಣು ಬಿದ್ದು ಹಾಳಾಗಿರೋರ ಕಣ್ಣಾಸರಕ್ಕೂ ಇಲ್ಲಿನ ದಲಿತರ ಪೂಜೆ ರಾಮಬಾಣ. ಹೌದು, ರಾಜ್ಯದ ಹತ್ತಾರು ಜಿಲ್ಲೆಯ, ದೇಶದ ಹತ್ತಾರು ರಾಜ್ಯದ ಸಾವಿರಾರು ಜನ ಗುರುವಾರ, ಭಾನುವಾರ ಬಂದರೆ ಸಾಕು ಚಿಕ್ಕಮಗಳೂರಿನ ಹೇಮಾವತಿ ನದಿ ತಟದಲ್ಲಿ ಕೈಮುಗಿದು ನಿಲ್ಲುತ್ತಾರೆ. ಇದು ಮಲೆನಾಡಿನ ವಿಶೇಷ! ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಸವಳಲು ಕೂಡಿಗೆಯ ಹೇಮಾವತಿ ನದಿ ತಟ. ಹೇಮಾವತಿ ನದಿ ಜೊತೆ ಜಪವತಿ ನದಿ ಸಂಗಮವಾಗುವ ಈ ಸ್ಥಳ ವಿಶೇಷತೆಯನ್ನ ನೀವು ಕೇಳಿದರೆ ಅಚ್ಚರಿ ಪಡುತ್ತೀರಾ. ದುಷ್ಟ ಹಾಗೂ ದೈವಿ ಶಕ್ತಿಯ ಕೆಲಸಕ್ಕೆ ಹರಿಯೋ ನೀರಿಗಿಂತ ಸೂಕ್ತವಾದ ಸ್ಥಳ ಬೇರಿಲ್ಲ. ಹರಿಯೋ ನೀರಿನ ಬಳಿ ಮಾಡೋ ಪೂಜೆ , ಕೆಟ್ಟದರ ವಿರುದ್ಧ ವಿಶೇಷವಾದ ಫಲ ನೀಡುತ್ತೆ ಅನ್ನೋದು ಇಲ್ಲಿನ ಸಾಂಪ್ರಾದಾಯಿಕ ನಂಬಿಕೆ.
ರಾಜ್ಯ ಹಾಗೂ ದೇಶದ ಸಾವಿರಾರು ಜನರಿಗೆ ಕೆಸವಳಲು-ಕೂಡಿಗೆ ಅಂದರೆ ಭಯ ಹಾಗೂ ಗೌರವ. ಎಂತಹ ಮಾಟ-ಮಂತ್ರ, ಕಣ್ಣಾಸರಕ್ಕೂ ಇಲ್ಲಿ ಬ್ರೇಕ್ ಹಾಕಲಾಗುತ್ತದೆ. ಗಾಡಿಗಳಿಗೆ ಪೂಜೆ ಮಾಡಿದರೆ ಅಪಾಯವಿಲ್ಲ. ಮದುವೆಯ ಬಳಿಕ ವಧು-ವರರು ದೃಷ್ಟಿ ತೆಗಿಸಿಕೊಂಡರೆ ಒಳ್ಳೆದು. ಕಟ್ಟಿದ ಹರಕೆ ಮಿಸ್ ಆಗಲ್ಲ. ಹೇಮಾವತಿ ನದಿ ತಟದಲ್ಲಿ ದಲಿತರೇ ಮಾಡೋ ಪೂಜೆಗೆ ಜನರಲ್ಲಿ ಒಂದು ನಂಬಿಕೆ ಇದೆ. ಇಲ್ಲಿಗೆ ಬರೋರ ಸಂಖ್ಯೆಯಲ್ಲಿ ನವ ವಿವಾಹಿತರೇ ಜಾಸ್ತಿ. ಬಂದೋರಲ್ಲಿ ಸಮೃದ್ಧ ಜೀವನ ಕಂಡವರೇ ಹೆಚ್ಚು.
ನದಿ ತಟದಲ್ಲಿ ಪೂಜೆ ಮಾಡುವಾಗ ಹೇಳುವ ಮಂತ್ರಕ್ಕೆ ಯಾವುದೇ ನಕರಾತ್ಮಕ ಶಕ್ತಿ ನಮ್ಮಲ್ಲಿ ಇದರು ಓಡಿ ಹೋಗುತ್ತೆ ಅನ್ನೋ ನಂಬಿಕೆ ಇದೆ. ಇಲ್ಲಿಗೆ ಬಂದು ಪೂಜೆ ಮಾಡಿಸಿ ಕರ್ಪೂರ ಹಚ್ಚಿ ಕೈಮುಗಿದ್ರೆ ಕಷ್ಟಗಳು ಕರ್ಪೂರದಂತೆಯೇ ಕರಗುತ್ತವೆ. ನದಿ ದಡದಲ್ಲೇ ಮರಳಿನ ಗುಡ್ಡೆ ಮಾಡಿ, ಪತ್ರೆ ಹಾಗೂ ಕಾಡು ಜಾತಿಯ ಹೂಗಳು, ಮೊಟ್ಟೆ, ನಿಂಬೆಹಣ್ಣು, ಅರಿಶಿನ ಕುಂಕುಮ, ಅರಿಶಿನ-ಕುಂಕುಮದ ಅಕ್ಕಿ, ಮಣ್ಣಿನ ಮಡಕೆ, ಬಣ್ಣದ ಮಂಡಕ್ಕಿ, ವಿಳ್ಳೆದೆಲೆ, ಬಾಳೆಹಣ್ಣು, ಅಡಿಕೆ, ತೆಂಗಿನ ಕಾಯಿಗಳಿಂದ ವಿಶೇಷವಾದ ಪೂಜೆ ಮಾಡುತ್ತಾರೆ. ಪೂಜೆಯ ಮುನ್ನ ಮೊಟ್ಟೆ, ಅಕ್ಕಿ ತುಂಬಿದ ಮಡಕೆ, ನಿಂಬೆಹಣ್ಣನ್ನ ಬಂದವರಿಗೆ ಮಂತ್ರಿಸಿ ಅದೇ ತಟದಲ್ಲಿ ಒಡೆದು ಹಾಕುತ್ತಾರೆ. ಇಲ್ಲಿನ ಪೂಜೆಗೆ ರಾಜ್ಯ, ಹೊರ ರಾಜ್ಯದಲ್ಲೂ ವಿಶೇಷ ಸ್ಥಾನವಿದೆ. ಹರಕೆ ಕಟ್ಟಿದ ಭಕ್ತರು ಮುಂದಿನ ವರ್ಷ ಬಂದು ತಮ್ಮ ಹರಕೆ ತೀರಿಸಿ ಹೋಗುತ್ತಾರೆ. ರಾಜ್ಯದ ಎಲ್ಲಾ ಭಾಗದ ಜನ ಹಾಗೂ ಕೇರಳ, ಆಂಧ್ರ, ತಮಿಳುನಾಡು ಸೇರಿದಂತೆ ಹೊರ ರಾಜ್ಯದ ಸಾಕಷ್ಟು ಜನ ಇಲ್ಲಿಗೆ ಭಕ್ತರು.
ಕೇವಲ ನವವಿವಾಹಿತರು ಮಾತ್ರವಲ್ಲದೇ ಕೌಟುಂಬಿಕ, ಆಸ್ತಿ ವ್ಯಾಜ್ಯ ಸೇರಿದಂತೆ ಏನೇ ಸಮಸ್ಯೆ ಇದ್ದರು ಜನ ಕೂಡಿಗೆಗೆ ಜಾತಿ-ಧರ್ಮವನ್ನ ಲೆಕ್ಕಿಸದೇ ಎಲ್ಲರೂ ಮುಖ ಮಾಡೋದು ಹಿಂದಿನಿಂದಲೂ ಕಾಫಿನಾಡಿನಲ್ಲಿ ನಡೆದುಕೊಂಡು ಬಂದಿದೆ. ಒಟ್ಟಾರೆ, ಆಧುನಿಕತೆ ಎಷ್ಟೇ ಮುಂದುವರೆದರು ಜನ ಮಾತ್ರ ಮಾಟ ಮಂತ್ರದಂತಹ ದುಷ್ಕೃತ್ಯಗಳಿಗೆ ಹೆದರಿ ಎಲ್ಲೆಲ್ಲಿಂದಲೋ ಬಂದು ತಮ್ಮ ಕಷ್ಟವನ್ನ ಕಡಿಮೆ ಮಾಡಿಕೊಳುತ್ತಿದ್ದಾರೆ. ಮಾಟ, ಮಂತ್ರ, ವಾಮಾಚಾರದಂತಹ ದುಷ್ಟಶಕ್ತಿಗಳು ಇದೆಯಾ ಇಲ್ಲವೋ ಗೊತ್ತಿಲ್ಲ. ಆದರೆ ಗುಡ್ಡದ ಒಡಲಿಂದ ಹರಿಯೋ ಜಪವತಿ ಹಳ್ಳ, ಹೇಮಾವತಿ ನದಿಯೊಂದಿಗೆ ಸೇರಿ ಜನರ ಕಷ್ಟ-ನೋವುಗಳಿಗೆ ಮುಕ್ತಿ ಹಾಡುತ್ತಿರುವುದು ಮಾತ್ರ ಅಚ್ಚರಿಯೇ ಸರಿ.
ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು
Published On - 11:02 pm, Fri, 21 October 22