ಚಿಕ್ಕಮಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಬಡಿದಾಟ: ಯುವ ಕಾಂಗ್ರೆಸ್​ ಅಧ್ಯಕ್ಷ- ಕಾರ್ಯದರ್ಶಿ ಬೆಂಬಲಿಗರ ಘರ್ಷಣೆ

ಕಾರ್ಯದರ್ಶಿ ಹುದ್ದೆಯಿಂದ ನಿತೀಶ್ ಅವರನ್ನು ತೆಗೆದುಹಾಕಿದ್ದೇ ಘರ್ಷಣೆಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಎದುರಿನಲ್ಲೇ ಗಲಾಟೆ ನಡೆಯಿತು.

ಚಿಕ್ಕಮಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಬಡಿದಾಟ: ಯುವ ಕಾಂಗ್ರೆಸ್​ ಅಧ್ಯಕ್ಷ- ಕಾರ್ಯದರ್ಶಿ ಬೆಂಬಲಿಗರ ಘರ್ಷಣೆ
ಚಿಕ್ಕಮಗಳೂರು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂತೋಷ್ ಮತ್ತು ಕಾರ್ಯದರ್ಶಿ ನಿತೇಶ್.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 24, 2022 | 2:36 PM

ಚಿಕ್ಕಮಗಳೂರು: ನಗರ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಯುವ ಕಾಂಗ್ರೆಸ್ ಕಾರ್ಯಕರ್ತರ (Youth Congress) ನಡುವೆ ಘರ್ಷಣೆ ನಡೆದಿದೆ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಬೆಂಬಲಿಗರು ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ನಿತೀಶ್ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕಾರ್ಯದರ್ಶಿ ಹುದ್ದೆಯಿಂದ ನಿತೀಶ್ ಅವರನ್ನು ತೆಗೆದುಹಾಕಿದ್ದೇ ಘರ್ಷಣೆಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಎದುರಿನಲ್ಲೇ ಗಲಾಟೆ ನಡೆಯಿತು. ಯುವಕರ ವರ್ತನೆಯಿಂದ ಬೇಸತ್ತ ಮಂಜೇಗೌಡ ರಾಜೀನಾಮೆ ನೀಡಲು ಮುಂದಾದರು.

ಗಲಾಟೆಯ ನಂತರ ನಿತೇಶ್ ವಿರುದ್ಧ ಪೊಲೀಸರಿಗೆ ಸಂತೋಷ್ ದೂರು ನೀಡಿದರು. ‘ನಿತೀಶ್ ಅವರನ್ನು ಅವರ ಜವಾಬ್ದಾರಿಯಿಂದ ನಾನು ತೆಗೆದು ಹಾಕಿಲ್ಲ. ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಮೊಹಮದ್ ನಲಪಾಡ್ ಅವರ ಒಪ್ಪಿಗೆ ಮೇರೆಗೆ ಅವರನ್ನು ತೆಗೆಯಲಾಗಿದೆ. ನಲಪಾಡ್ ಅವರ ಲೆಟರ್ ಹೆಡ್​ನಲ್ಲಿಯೇ ಅಮಾನತು ಪತ್ರ ರವಾನೆಯಾಗಿದೆ. ನಿತೀಶ್ ಯಾರು ಅಂತಾನೆ ನನಗೆ ಗೊತ್ತಿಲ್ಲ, ಅವನ ಮುಖವನ್ನೇ ನಾನು ನೋಡಿಲ್ಲ’ ಎಂದು ಸಂತೋಷ್ ‘ಟಿವಿ9’ ಪ್ರತಿನಿಧಿಗೆ ಪ್ರತಿಕ್ರಿಯಿಸಿದರು.

‘ಗಲಾಟೆ ಮಾಡಲೆಂದು ಗಾಂಜಾ ಹೊಡೆದು ಬಂದ ಹುಡುಗರನ್ನು ಕರೆಸಿ ಗಲಾಟೆ ಮಾಡಿಸಿದ್ದಾರೆ. ನಾನು ವೀರಶೈವ ಸಮಾಜದ ಯುವ ಘಟಕದ ಜಿಲ್ಲಾಧ್ಯಕ್ಷ ಕೂಡ ಆಗಿದ್ದೇನೆ. ವೀರಶೈವ ಸಮಾಜಕ್ಕೆ ಸೇರಿದವರು ರಾಜಕೀಯವಾಗಿ ಮುಂದೆ ಬರಬಾರದು ಎನ್ನುವ ಚಿತಾವಣೆಯಿಂದ ಹೀಗೆ ಮಾಡುತ್ತಿದ್ದಾರೆ ಎನಿಸುತ್ತದೆ. ಪೊಲೀಸರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಸತ್ಯ ಹೊರಬರುತ್ತದೆ’ ಎಂದು ಅವರು ಹೇಳಿದರು.

ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಜಿಲ್ಲಾ ಕಾಂಗ್ರೆಸ್ ಬಗ್ಗೆ ಗರಂ ಆಗಿದ್ದರು. ಕಾರ್ಯಕರ್ತರ ನೊಂದಣಿ ಮಾಡಿಸುವಲ್ಲಿ ತುಂಬಾ ಹಿಂದುಳಿದಿದ್ದೀರಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಮಂತ್ ಸೇರಿದಂತೆ ಎಲ್ಲಾ ಮುಖಂಡರ ವಿರುದ್ಧ ಬಹಿರಂಗವಾಗಿ ಬೇಸರ ಹೊರಹಾಕಿದ್ದರು. ಕಾಂಗ್ರೆಸ್​ನ ಜಿಲ್ಲಾ ಘಟಕದಲ್ಲಿ ಒಂದಲ್ಲ ಒಂದು ಅಹಿತಕರ ಬೆಳವಣಿಗೆಗಳು ನಡೆಯುತ್ತಿರುವಾಗಲೇ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಹೊಡೆದಾಡಿಕೊಂಡಿದ್ದಾರೆ

Published On - 2:36 pm, Sun, 24 July 22