ನಗರಸಭೆ ಅಧ್ಯಕ್ಷನ ದುರ್ನಡತೆ ಖಂಡಿಸಿ, ನಿಪ್ಪಾಣಿ ಆರೋಗ್ಯ ಕೇಂದ್ರದ 44 ಸಿಬ್ಬಂದಿ ಸಾಮೂಹಿಕ ರಾಜೀನಾಮೆ
Nippani Community Health Center: ರಾಜೀನಾಮೆ ನೀಡಿರುವ ನಿಪ್ಪಾಣಿ ಆರೋಗ್ಯ ಕೇಂದ್ರದ ಸಿಬ್ಬಂದಿ ಓಪಿಡಿ ಬಂದ್ ಮಾಡಿ, ಬರೀ ತುರ್ತು ಚಿಕಿತ್ಸೆ ಮಾತ್ರ ನೀಡ್ತಿದ್ದಾರೆ. 5 ಜನ ವೈದ್ಯರು, 12 ಜನ ನರ್ಸ್, 6 ಜನ ಡಿ ಗ್ರೂಪ್ ನೌಕರರು, 26 ಆಶಾ ಕಾರ್ಯಕರ್ತೆಯರು ಸೇರಿ ಒಟ್ಟು 44 ಸಬ್ಬಂದಿ ರಾಜೀನಾಮೆ ನೀಡಿದ್ದಾರೆ.
ಬೆಳಗಾವಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಸಮುದಾಯ ಆರೋಗ್ಯ ಕೇಂದ್ರದ 44 ಸಿಬ್ಬಂದಿ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ನಿಪ್ಪಾಣಿ ನಗರಸಭೆ ಅಧ್ಯಕ್ಷ ಪ್ರವೀಣ್ ಬಾಟ್ಲೆ ಮುಖ್ಯ ವೈದ್ಯೆ ಸೀಮಾ ಗುಂಜಾಳಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಧ್ಯಕ್ಷನ ಈ ನಡೆಯನ್ನು ವಿರೋಧಿಸಿ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದೇವೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಸಹಾಯಕ ಆರೋಗ್ಯ ಜಿಲ್ಲಾ ಅಧಿಕಾರಿಗೆ ರಾಜೀನಾಮೆ ಪತ್ರಗಳನ್ನು ರವಾನೆ ಮಾಡಿ, 44 ಸಿಬ್ಬಂದಿಯೂ ಆಸ್ಪತ್ರೆಗೆ ಹಾಜರಾಗಿದ್ದಾರೆ. ಮುಖ್ಯ ವೈದ್ಯಾಧಿಕಾರಿ ಸೀಮಾ ಗುಂಜಾಳ ಮಾತ್ರ ಗೈರು ಹಾಜರಾಗಿದ್ದಾರೆ.
ನಿಪ್ಪಾಣಿ ನಗರ ಸಭೆ ಅಧ್ಯಕ್ಷ ಪ್ರವೀಣ್ ಬಾಟ್ಲೆ ಮುಖ್ಯ ವೈದ್ಯೆ ಸೀಮಾ ಗುಂಜಾಳಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸೀಮಾ ಗುಂಜಾಳ ಜತೆಗೆ ವೈದ್ಯರು ಸೇರಿದಂತೆ ಎಲ್ಲ ಸಿಬ್ಬಂದಿ ಸಹಾಯಕ ಆರೋಗ್ಯ ಜಿಲ್ಲಾ ಅಧಿಕಾರಿಗೆ ರಾಜೀನಾಮೆ ಪತ್ರಗಳನ್ನು ರವಾನೆ ಮಾಡಿದ್ದಾರೆ. ಆದರೂ ಇಂದು ಆಸ್ಪತ್ರೆಗೆ ಹಾಜರಾಗಿ ಎಂದಿನಂತೆ ಸಿಬ್ಬಂದಿ ತಮ್ಮ ಸೇವೆ ಮುಂದುವರಿಸಿದ್ದಾರೆ.
ರಾಜೀನಾಮೆ ನೀಡಿರುವ ಸಿಬ್ಬಂದಿ ಓಪಿಡಿ ಬಂದ್ ಮಾಡಿ, ಬರೀ ತುರ್ತು ಚಿಕಿತ್ಸೆ ಮಾತ್ರ ನೀಡ್ತಿದ್ದಾರೆ. 5 ಜನ ವೈದ್ಯರು, 12 ಜನ ನರ್ಸ್, 6 ಜನ ಡಿ ಗ್ರೂಪ್ ನೌಕರರು, 26 ಆಶಾ ಕಾರ್ಯಕರ್ತೆಯರು ಸೇರಿ ಒಟ್ಟು 44 ಸಬ್ಬಂದಿ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಕುರಿತು ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ; ಆದರೆ ಪದೇ ಪದೇ ರಾಜಕೀಯ ಹಸ್ತಕ್ಷೇಪಕ್ಕೆ ಬೇಸತ್ತು ಮತ್ತು ನಿನ್ನೆ ವ್ಯಾಕ್ಸಿನ್ ವಿಷಯವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
(Chikodi Nippani CHC Community Health Center 44 staff members resign en masse protesting muncipal president highhandedness)