ಕೊರೊನಾದಿಂದ ಬಾಲ ಕಾರ್ಮಿಕ ಸಂಖ್ಯೆ ಹೆಚ್ಚಳ: ಅಧಿಕಾರಿಗಳು ಪತ್ತೆ ಹಚ್ಚಿದ ಬಾಲಕರ ಸಂಖ್ಯೆ ಎಷ್ಟು ಗೊತ್ತಾ?
ನಗರದ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ 15 ವರ್ಷದ ನಾಲ್ವರು ಬಾಲಕರನ್ನು ಅಧಿಕಾರಿಗಳು ಸುರಕ್ಷಿತವಾಗಿ ಅವರವರ ಮನೆಗಳಿಗೆ ತಲುಪಿಸಿದರು. ಮಕ್ಕಳು ಮತ್ತು ಅವರ ಪೋಷಕರಿಗೆ ಬುದ್ಧಿವಾದ ಹೇಳಿ ಅಕ್ಷರ ಕಲಿತು ವಿದ್ಯಾವಂತರಾಗುವಂತೆ ಸೂಚಿಸಿದರು. ಪೋಷಕರಿಗೂ ಪುಟ್ಟ ಮಕ್ಕಳನ್ನು ಕೆಲಸಕ್ಕೆ ಕಳಿಸದಂತೆ ತಿಳಿಸಿದರು.

ಹಾವೇರಿ: ಬಾಲ ಕಾರ್ಮಿಕ ಪದ್ಧತಿ ಎಂಬುವುದು ಸಾಕಷ್ಟು ಕಡೆಗಳಲ್ಲಿ ಜೀವಂತವಾಗಿದೆ. ಅದೆಷ್ಟೋ ಮಕ್ಕಳು ಇಂದಿಗೂ ಶಾಲೆಗೆ ಹೋಗದೆ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಕೊರೊನಾ ಆರ್ಭಟದಿಂದ ಬಂದ್ ಆಗಿದ್ದ ಶಾಲೆಗಳು ಹೊಸ ವರ್ಷದ ಆರಂಭದಿಂದ ವಿದ್ಯಾಗಮ ಮತ್ತು ಶಾಲೆ ಪುನರಾರಂಭ ಎಂಬ 2 ಹೆಸರಿನಲ್ಲಿ ಆರಂಭವಾಗಿವೆ. ಸದ್ಯ 6 ರಿಂದ 9ರ ತರಗತಿವರೆಗೆ ಮಕ್ಕಳಿಗೆ ಪಾಠಗಳು ನಡೆಯುತಿವೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಅದೆಷ್ಟೋ ಮಕ್ಕಳು ಶಾಲೆಗೆ ಹೋಗದೆ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.
ಕಿರಾಣಿ ಅಂಗಡಿ, ಬೇಕರಿ, ಚಿಕನ್ ಕಾರ್ನರ್, ಹೊಟೇಲ್ ಹೀಗೆ ಅನೇಕ ಕಡೆಗಳಲ್ಲಿ 15 ರಿಂದ 16 ವರ್ಷದ ಬಾಲಕರು ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿನ ಬಡತನ, ಕೌಟುಂಬಿಕ ಸಮಸ್ಯೆಗಳು ಹೀಗೆ ವಿವಿಧ ಕಾರಣಗಳಿಗೆ ಬಾಲಕರು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಬಂದು ಹೊಟ್ಟೆ ಪಾಡು, ಕುಟುಂಬ ನಿರ್ವಹಣೆಗಾಗಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಈ ನಿಟ್ಟಿನಲ್ಲಿ ಹಾವೇರಿ ಉಪವಿಭಾಗಾಧಿಕಾರಿ ಡಾ. ದಿಲೀಷ್ ಶಶಿ ನೇತೃತ್ವದ ಅಧಿಕಾರಿಗಳ ತಂಡ ನಗರದಲ್ಲಿ ಸಂಚಾರ ನಡೆಸಿದ್ದು, ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಕೃಷಿ ಉತ್ಪನ್ನ ಮಾರುಕಟ್ಟೆ ಮಾರ್ಗದಲ್ಲಿ ವಿವಿಧ ಅಂಗಡಿಗಳು, ಬಾರ್, ಹೋಟೆಲ್‍ಗಳನ್ನು ತಪಾಸಣೆ ನಡೆಸಿದರು. ಆಗ ಚಿಕನ್ ಕಾರ್ನರ್, ಹೊಟೇಲ್, ಬೇಕರಿ, ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 15 ವರ್ಷದ ನಾಲ್ವರು ಬಾಲ ಕಾರ್ಮಿಕರು ಕಂಡುಬಂದರು.
ಕಿರಾಣಿ ಅಂಗಡಿಯಲ್ಲಿ ದಿನಸಿ ಕಟ್ಟುವುದು, ಹೊಟೇಲ್ನಲ್ಲಿ ಸಪ್ಲೈಯರ್ ಕೆಲಸ, ಚಿಕನ್ ಕಾರ್ನರ್ನಲ್ಲಿ ಚಿಕನ್ ಕಟ್ ಮಾಡುವುದು, ಬೇಕರಿಯಲ್ಲಿ ಗ್ರಾಹಕರಿಗೆ ಬೇಕರಿ ಐಟಮ್ಗಳನ್ನು ಕೊಡುವುದು ಹೀಗೆ ಬಾಲಕರು ವಿವಿಧ ಕೆಲಸ ಮಾಡುತ್ತಿದ್ದ ನಾಲ್ವರು ಬಾಲ ಕಾರ್ಮಿಕರನ್ನು ಕೂಡಲೆ ಅಧಿಕಾರಿಗಳ ತಂಡ ವಶಕ್ಕೆ ಪಡೆದರು.

ಅಧಿಕಾರಿಗಲ ಪರಿಶೀಲನೆ ವೇಳೆ ಸಿಕ್ಕ ಬಾಲ ಕಾರ್ಮಿಕ
ಮಕ್ಕಳನ್ನು ಶಾಲೆಗೆ ಕರೆತರುವಂತೆ ಸೂಚನೆ : ಅಧಿಕಾರಿಗಳ ನಗರ ಸಂಚಾರದ ವೇಳೆ ಪತ್ತೆಯಾದ ನಾಲ್ವರು ಬಾಲ ಕಾರ್ಮಿಕರ ಮಾಹಿತಿ ಪಡೆದ ಹಾವೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ಬಾಲಕರ ಊರು, ವಿಳಾಸ, ಪಾಲಕರ ಬಗ್ಗೆ ಮಾಹಿತಿ ಕಲೆ ಹಾಕಿದರು. ಬಾಲಕರು ವ್ಯಾಸಂಗ ಮಾಡುತ್ತಿರುವ ಮಾಹಿತಿ ಪಡೆದುಕೊಂಡ ಅಧಿಕಾರಿಗಳು, ಬಾಲಕರು ನೀಡಿದ ಮಾಹಿತಿ ಆಧರಿಸಿ ಸ್ಥಳದಲ್ಲೇ ಬಾಲಕರು ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಯ ಮುಖ್ಯೋಪಾಧ್ಯಾಯರಿಗೆ ದೂರವಾಣಿ ಕರೆ ಮಾಡಿದರು.
ಬಾಲಕರ ಮನೆಗಳಿಗೆ ತೆರಳಿ ಪಾಲಕರನ್ನು ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರುವಂತೆ ಖಡಕ್ ಸೂಚನೆ ನೀಡಿದರು. ಅಲ್ಲದೆ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರದ ಜೊತೆಗೆ ಅಗತ್ಯವಿದ್ದರೆ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶಾವಕಾಶ ಕಲ್ಪಿಸುವುದು ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಸೂಚನೆ ನೀಡಿದರು.

ಬಾಲ ಕಾರ್ಮಿಕನಿಗೆ ಬುದ್ಧಿವಾದ ಹೇಳಿದ ಅಧಿಕಾರಿಗಳು
ನಗರದ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ 15 ವರ್ಷದ ನಾಲ್ವರು ಬಾಲಕರನ್ನು ಅಧಿಕಾರಿಗಳು ಸುರಕ್ಷಿತವಾಗಿ ಅವರವರ ಮನೆಗಳಿಗೆ ತಲುಪಿಸಿದರು. ಮಕ್ಕಳು ಮತ್ತು ಅವರ ಪೋಷಕರಿಗೆ ಬುದ್ಧಿವಾದ ಹೇಳಿ ಅಕ್ಷರ ಕಲಿತು ವಿದ್ಯಾವಂತರಾಗುವಂತೆ ಸೂಚಿಸಿದರು. ಪೋಷಕರಿಗೂ ಪುಟ್ಟ ಮಕ್ಕಳನ್ನು ಕೆಲಸಕ್ಕೆ ಕಳಿಸದಂತೆ ತಿಳಿಸಿದರು.
ಇನ್ನು ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ನಾಲ್ಕು ಅಂಗಡಿಗಳ ಮಾಲೀಕರಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಬಾಲಕರನ್ನು ಕೆಲಸಕ್ಕೆ ಸೇರಿಸಿಕೊಳ್ಳದಂತೆ ಎಚ್ಚರಿಕೆ ನೀಡಿದರು.

ಪರಿಶೀಲನೆಯಲ್ಲಿ ತೊಡಗಿರುವ ಅಧಿಕಾರಿಗಳು
ನಗರದಲ್ಲಿ ಬಾಲ ಕಾರ್ಮಿಕರಾಗಿ ಮಕ್ಕಳು ದುಡಿಯುತ್ತಿರುವುದು ಕಂಡು ಬಂದಿತ್ತು. ಹೀಗಾಗಿ ಕಾರ್ಯಾಚರಣೆ ನಡೆಸಿ ನಾಲ್ವರು ಮಕ್ಕಳನ್ನು ವಶಕ್ಕೆ ಪಡೆದು ಅವರವರ ಮನೆಗೆ ಸೇರಿಸಲಾಯಿತು. ಬಾಲ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡ ಅಂಗಡಿಗಳ ಮಾಲೀಕರಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳ ಮೂಲಕ ಎಚ್ಚರಿಕೆ ನೀಡಲಾಗಿದೆ.
ಅಂಗಡಿಗಳಲ್ಲಿ ಮತ್ತೊಮ್ಮೆ ಬಾಲ ಕಾರ್ಮಿಕರು ಕಂಡು ಬಂದರೆ ಅಂತಹ ಅಂಗಡಿಗಳ ಮಾಲೀಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹಾವೇರಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ ಹೇಳಿದರು.

ಅಧಿಕಾರಿಗಳ ಸಂಚಾರ



