ಆಕರ್ಷಣೆ, ಪ್ರೀತಿ ಹೆಸರಲ್ಲಿ ಕಾಮದ ಅಮಲು: ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ

ಕರ್ನಾಟಕದಲ್ಲಿ ಟೀನೇಜ್ ಪ್ರೆಗ್ನೆನ್ಸಿ ಸಂಖ್ಯೆ ದಾಖಲೆಯ ಏರಿಕೆ ಕಂಡಿದೆ. ಕೇವಲ 10 ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಇಲಾಖೆಯೇ ನೀಡಿರುವ ಅಂಕಿ-ಸಂಖ್ಯೆಗಳು ಸದ್ಯ ಬೆಚ್ಚಿಬೀಳುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಲೈಂಗಿಕ ಶಿಕ್ಷಣದ ಅರಿವು ಮೂಡಿಸಲು ಸರ್ಕಾರ ಮುಂದಾಗಿದೆ.

ಆಕರ್ಷಣೆ, ಪ್ರೀತಿ ಹೆಸರಲ್ಲಿ ಕಾಮದ ಅಮಲು: ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Nov 03, 2025 | 10:14 PM

ಬೆಂಗಳೂರು, ನವೆಂಬರ್​ 03: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ (Karnataka) ಬಾಲ ಗರ್ಭಿಣಿಯರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ತಿಳವಳಿಕೆ ತಾಯ್ತನದ ವಯಸ್ಸಿಗೂ ಮೊದಲೇ ಬಾಲ ಗರ್ಭಿಣಿಯರ (Teenage Pregnancy) ಸಂಖೆಯಲ್ಲಿ ಏರಿಕೆ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ 3,37,000ಕ್ಕೂ ಹೆಚ್ಚು ಟೀನೇಜ್ ಪ್ರೆಗ್ನೆನ್ಸಿ ದಾಖಲಾಗಿರುವ ಬಗ್ಗೆ ಆತಂಕಕಾರಿ ಸುದ್ದಿ ಇದೀಗ ಬಯಲಾಗಿದೆ.

10 ತಿಂಗಳಲ್ಲೇ 10 ಸಾವಿರ ಗಡಿದಾಟಿದ ಟೀನೇಜ್ ಪ್ರೆಗ್ನೆನ್ಸಿ!

ಕೆಲವು ಪೋಷಕರಿಗೆ ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಆದಷ್ಟು ಬೇಗ ಮದುವೆ ಮಾಡಿ ಜವಾಬ್ದಾರಿಯಿಂದ ಮುಕ್ತವಾಗಬೇಕು ಅನ್ನೋ ಭಾವನೆ ಇರುತ್ತೆ. ಇನ್ನು ಕೆಲವರಿಗೆ ಶಿಕ್ಷಣದ ಕೊರತೆ, ಮೂಢನಂಬಿಕೆಗಳಿಂದಲೂ ಕೆಲವು ಪೋಷಕರು ಬಾಲ್ಯ ವಿವಾಹಕ್ಕೆ ಮುಂದಾಗುತ್ತಿದ್ದಾರೆ. ಇನ್ನು ಕೆಲವು ದೌರ್ಜನ್ಯ ಹಾಗೂ ಪ್ರೇಮ ಪ್ರಕರಣಗಳ ಕಾರಣದಿಂದಲೂ ಬಾಲ ಗರ್ಭಿಣಿಯರ ಸಂಖ್ಯೆ ಏರಿಕೆಗೆ ಕಾರಣವಾಗುತ್ತಿದ್ದು, ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ 18 ವರ್ಷ ತುಂಬುವುದಕ್ಕಿಂತ ಮೊದಲು ಗರ್ಭಿಣಿಯರಾಗುತ್ತಿದ್ದು, ಬಾಲಕಿಯರು ಹಲವು ದೈಹಿಕ, ಮಾನಸಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಎಲ್ಲಾ ಇಲಾಖೆಗಳಿಗೂ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಮಹಿಳೆಯ ಖಾಸಗಿ ಅಂಗಕ್ಕೆ ಪೊಲೀಸರಿಂದ ಹಲ್ಲೆ: ಟಾಯ್ಲೆಟ್​ಗೂ ಹೋಗಲಾಗದೆ ನರಕಯಾತನೆ

ಕಳೆದ 10 ತಿಂಗಳಲ್ಲೇ 10 ಸಾವಿರ ಗಡಿದಾಟಿದೆ ಹದಿಹರೆಯದ ಗರ್ಭಧಾರಣೆ. ರಾಜಧಾನಿಯಲ್ಲಿಯೂ ವರ್ಷದಿಂದ ವರ್ಷಕ್ಕೆ ಟೀನೇಜ್ ಪ್ರೆಗ್ನೆನ್ಸಿ ಏರಿಕೆ ಕಂಡುಬರುತ್ತಿದೆ. ಬೆಂಗಳೂರು ಅರ್ಬನ್​ನಲ್ಲಿ ಕಳೆದ ಮೂರು ವರ್ಷದಲ್ಲಿ 9000ಕ್ಕೂ ಹೆಚ್ಚು ಹದಿಹರೆಯದ ಪ್ರೆಗ್ನೆನ್ಸಿ ದಾಖಲಾಗಿದೆ.

ಟೀನೇಜ್ ಪ್ರೆಗ್ನೆನ್ಸಿಗೆ ಕಾರಣವೇನು?

ಟೀನೇಜ್ ಪ್ರೆಗ್ನೆನ್ಸಿಗೆ ಬಾಲ್ಯ ವಿವಾಹ, ಹದಿಹರೆಯದ ಆಕರ್ಷಣೆ ಲೈಂಗಿಕ ಶೋಷಣೆ ಪ್ರಮುಖ ಕಾರಣವಾಗಿದೆ. ಆಟ, ಪಾಠಗಳಲ್ಲಿ ತೊಡಗಿ ಭವಿಷ್ಯ ರೂಪಿಸುವತ್ತ ಹೆಜ್ಜೆ ಹಾಕಬೇಕಿರುವ ಹದಿಹರೆಯದ ಅಪ್ರಾಪ್ತೆಯರು ತಾಯ್ತನದ ಭಾರ ಹೊರುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಮಿತಿ ಮೀರುತ್ತಿವೆ. ಕಳೆದ 10 ತಿಂಗಳಲ್ಲಿ ಕರ್ನಾಟಕದಲ್ಲಿ ಇಂತಹ ಪ್ರಕರಣಗಳು 10 ಸಾವಿರ ಗಡಿ ದಾಟಿರುವುದು ಅಚ್ಚರಿ ಮೂಡಿಸಿದೆ.

10 ತಿಂಗಳಲ್ಲಿ 10,091ಕ್ಕೂ ಹೆಚ್ಚಿನ ಹೆಣ್ಣು ಮಕ್ಕಳು ಗರ್ಭಧಾರಣೆ

ರಾಜ್ಯದಲ್ಲಿ14 ರಿಂದ 19 ವಯೋಮಾನದ 10,091ಕ್ಕೂ ಹೆಚ್ಚಿನ ಹೆಣ್ಣು ಮಕ್ಕಳು ಅರಿವಿದ್ದೋ, ಅರಿವಿಲ್ಲದೆಯೋ ಕಳೆದ 10 ತಿಂಗಳಲ್ಲಿ ಗರ್ಭಧಾರಣೆಗೆ ಒಳಗಾಗಿರುವುದು ಹುಬ್ಬೇರಿಸುವಂತೆ ಮಾಡಿದೆ. ಈ ಪೈಕಿ ಶೇ.60ರಷ್ಟು ಹೆಣ್ಣು ಮಕ್ಕಳು ಬಾಲ್ಯ ವಿವಾಹ, ಹದಿಹರೆಯದ ಆಕರ್ಷಣೆ, ಪ್ರೀತಿಯ ಹೆಸರಿನಲ್ಲಿ ನಡೆಯುವ ಶೋಷಣೆ, ಲೈಂಗಿಕ ಜಾಲಕ್ಕೆ ಸಿಲುಕಿ ಕಗ್ಗಿ ಹೋಗಿದ್ದಾರೆ. ಲೈಂಗಿಕ ಶಿಕ್ಷಣದ ಕೊರತೆ ಹಾಗೂ ಹದಿಹರೆಯದ ಹೆಣ್ಣುಮಕ್ಕಳಿಗೆ ಲೈಂಗಿಕ ಆರೋಗ್ಯದ ಬಗ್ಗೆ ಸೂಕ್ತ ತಿಳುವಳಿಕೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಹೀಗಾಗಿ ಶಿಕ್ಷಣ ಇಲಾಖೆಯೂ ಮುಂದಿನ ವರ್ಷದಿಂದ ನೈತಿಕ ಶಿಕ್ಷಣದ ಅಡಿಯಲ್ಲಿ ಲೈಂಗಿಕ ಶಿಕ್ಷಣದ ಅರಿವು ಮೂಡಿಸಲು ಮುಂದಾಗಿದೆ. ಸಿಎಂ ಈ ಬಗ್ಗೆ ನವೆಂಬರ್ 14 ರಂದು ಕೆಲವು ಕಾರ್ಯಕ್ರಮಗಳನ್ನ ಘೋಷಣೆ ಮಾಡಲಿದ್ದಾರೆ ಎಂದು ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ರಾಜಧಾನಿಯಲ್ಲಿಯೂ ವರ್ಷದಿಂದ ವರ್ಷಕ್ಕೆ ಟೀನೇಜ್ ಪ್ರೆಗ್ನೆನ್ಸಿ ಏರಿಕೆ ಆಗುತ್ತಿದೆ. ಕಳೆದ ಮೂರು ವರ್ಷದಲ್ಲಿ ಬೆಂಗಳೂರು ಅರ್ಬನ್​ನಲ್ಲಿ 8900 ಪ್ರಕರಣಗಳು ಕಂಡುಬಂದಿವೆ. ಬಾಲ ತಾಯಂದಿರ ಬಗ್ಗೆ ಆರೋಗ್ಯ ಇಲಾಖೆಯೇ ನೀಡಿರುವ ಅಂಕಿ-ಸಂಖ್ಯೆಗಳು ಸದ್ಯ ಬೆಚ್ಚಿಬೀಳಿಸುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ನಾನಾ ಪ್ಲಾನ್ ರೂಪಿಸಲು ಮುಂದಾಗಿದೆ.

ಅಂಕಿ-ಅಂಶಗಳು ಹೀಗಿವೆ

ಬೆಂಗಳೂರು- 1,113, ಉಡುಪಿ- 26, ದಕ್ಷಣಿ ಕನ್ನಡ- 69, ಉತ್ತರ ಕನ್ನಡ- 86, ಬೆಳಗಾವಿ- 963, ಧಾರವಾಡ- 216, ದಾವಣಗೆರೆ- 240, ಬಾಗಲಕೋಟೆ- 393, ವಿಜಯಪುರ- 714, ರಾಯಚೂರು- 562, ತುಮಕೂರು- 690, ಚಿತ್ರದುರ್ಗ- 401, ಮೈಸೂರು- 558, ಹಾಸನ- 341, ಬಳ್ಳಾರಿ- 271, ಕಲಬುರಗಿ- 415, ಶಿವಮೊಗ್ಗ- 220, ವಿಜಯಪುರ- 714, ಚಿಕ್ಕಬಳ್ಳಾಪುರ- 259, ಚಿಕ್ಕಮಗಳೂರು- 169, ಕೋಲಾರ- 296.

ಇದನ್ನೂ ಓದಿ: ಪೊಲೀಸರ ಟಾರ್ಚರ್​​ನಿಂದ ಆತ್ಮಹತ್ಯೆಗೆ ಯತ್ನಿಸಿದ ಮಗ: ಠಾಣೆಗೆ ನುಗ್ಗಿ ಪೊಲೀಸ​​ರ ಚಳಿಬಿಡಿಸಿದ ತಾಯಿ

ಇನ್ನು ಬಾಲ ಗರ್ಭಿಣಿಯಾಗುವುದು ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಗು ಜನನದ ಬಳಿಕ ಬಾಲ ಬಾಣಂತಿಯರು ರಕ್ತ ಹೀನತೆ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಭೀತಿ ಇದ್ದು, ಸರ್ಕಾರ ಈ ಬಗ್ಗೆ ತ್ವರಿತವಾಗಿ ಕ್ರಮಕ್ಕೆ ಮುಂದಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:10 pm, Mon, 3 November 25