ಪೊಲೀಸರ ಟಾರ್ಚರ್ನಿಂದ ಆತ್ಮಹತ್ಯೆಗೆ ಯತ್ನಿಸಿದ ಮಗ: ಠಾಣೆಗೆ ನುಗ್ಗಿ ಪೊಲೀಸರ ಚಳಿಬಿಡಿಸಿದ ತಾಯಿ
ದಾವಣಗೆರೆಯಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ್ನು ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರು ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬಂದಿದೆ. ಇದರಿಂದ ಬೇಸತ್ತು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಿತಿ ಗಂಭೀರವಾಗಿದೆ. ಮಗನ ಪರಿಸ್ಥಿತಿ ಕಂಡು ಆಕ್ರೋಶಗೊಂಡ ತಾಯಿ, ಠಾಣೆಗೆ ನುಗ್ಗಿ ಪೊಲೀಸ್ ಚಳಿ ಬಿಡಿಸಿದ್ದಾರೆ. ಘಟನೆಯ ಗಂಭೀರತೆ ಅರಿತ ಸಚಿವರು ತನಿಖೆಗೆ ಆದೇಶಿಸಿದ್ದಾರೆ.

ದಾವಣಗೆರೆ, ನವೆಂಬರ್ 02: ಅಲ್ಲೊಂದು ದರೋಡೆ ನಡೆದಿತ್ತು. ಅದಕ್ಕೆ ಸಂಬಂಧಿಸಿದಂತೆ ಹತ್ತಾರು ಜನರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಓರ್ವ ಯುವಕನನ್ನು ಮೂರು ದಿನ ಇಟ್ಟುಕೊಂಡು ಕೊಡಬಾರದ ಹಿಂಸೆ ಕೊಟ್ಟು ಬಿಟ್ಟುಕಳುಹಿಸಿದ್ದಾರೆ. ಇದಕ್ಕೆ ಬೇಸತ್ತು ಆತ ಆತ್ಯಹತ್ಯೆಗೆ (suicide) ಯತ್ನಿಸಿದ್ದು, ಸದ್ಯ ಸಾವು-ಬದುಕಿನೊಂದಿಗೆ ಹೋರಾಟ ಮಾಡುತ್ತಿದ್ದಾನೆ. ಮಗನ ಪರಿಸ್ಥಿತಿ ತಾಯಿಯ (mother) ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸ್ ಠಾಣೆಗೆ ನುಗ್ಗಿ ಖಾಕಿ ಪಡೆಯ ಚಳಿ ಬಿಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ಕಿರಣ್ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ. ಮನೆಗೆ ಆಧಾರವಾಗಿದ್ದ ಕಿರಣ್, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಯತ್ನಿಸಿದ್ದು, ಸದ್ಯ ಆತನ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ತಾಯಿ ಬದುಕಿದ್ದಾಗ ಸಾಕಲಿಲ್ಲ, ಈಗ ಮೃತದೇಹಕ್ಕಾಗಿ ಬಡಿದಾಡಿಕೊಂಡ ಮಕ್ಕಳು
ಏಳು ತಿಂಗಳ ಹಿಂದಷ್ಟೇ ಮದುವೆ ಮಾಡಿದ್ದ ತಾಯಿಗೆ ಇದ್ದ ಒಬ್ಬ ಮಗನ ಸ್ಥಿತಿ ಕಂಡು ಆಕಾಶವೇ ಕಳಚಿ ಬಿದ್ದಂತಾಗಿದೆ. ಇಂದು ಆ ತಾಯಿ ಪೊಲೀಸ್ ಠಾಣೆಗೆ ನುಗ್ಗಿದ್ದಾರೆ. ಸಂತೆಬೆನ್ನೂರಿ ಸಿಪಿಎಂ ಲಿಂಗನಗೌಡನ ಚಳಿ ಬಿಡಿಸಿದ್ದಾರೆ. ಸ್ಥಳೀಯರು ಮಧ್ಯೆ ಬರದಿದ್ದರೆ ಪೊಲೀಸ್ ಅಧಿಕಾರಿಗೆ ಹೊಡೆಯುವಷ್ಟು ಆಕ್ರೋಶದಲ್ಲಿದ್ದರು.
ಸಂತೆಬೆನ್ನೂರು ಠಾಣೆ ಪೊಲೀಸರೇ ಕಾರಣ?
ಅಷ್ಟಕ್ಕೂ ಇದಕ್ಕೆಲ್ಲಾ ಸಂತೆಬೆನ್ನೂರು ಠಾಣೆ ಪೊಲೀಸರೇ ಕಾರಣವಂತೆ. ಸಂತೆಬೆನ್ನೂರು ಠಾಣೆ ವ್ಯಾಪ್ತಿಯ ಕಾಕನೂರು ಗ್ರಾಮದಲ್ಲಿ ಕಳೆದ ಒಂದು ತಿಂಗಳ ಹಿಂದೆ ಒಂಟಿ ಮನೆಯಲ್ಲಿ ಕಳ್ಳತನವಾಗಿತ್ತು. ಆ ಕಳ್ಳತನ ಕಿರಣ್ ಮಾಡಿದ್ದಾನೆ ಎಂದು ಆರೋಪಿಸಿ ಅ.27 ರಂದು ಮಪ್ತಿಯಲ್ಲಿ ಬಂದ ಪೊಲೀಸರು ಆತನನ್ನು ಕರೆದೊಯ್ದಿದ್ದರು.
ಈ ವೇಳೆ ಠಾಣೆ ಮುಂದೆ ಪೆಟ್ರೋಲ್ ಹಾಕಿಕೊಂಡು ಸಾಯುತ್ತೇವೆ ಎಂದು ಕಿರಣ್ ಕುಟುಂಬಸ್ಥರು ಹಠಹಿಡಿದಿದ್ದರು. ವಿಚಾರಣೆಗೆ ಕರೆತಂದಿದ್ದೇವೆ ಎಂದು ಒಪ್ಪಿಕೊಂಡಿದ್ದ ಪೊಲೀಸರು, ಅಲ್ಲದೆ ಕಳ್ಳತನ ಮಾಡಿದವರು ಯಾರು ಎಂದು ಹೇಳಬೇಕು. ಇಲ್ಲ ನೀನೇ ಒಪ್ಪಿಕೊಳ್ಳಬೇಕು ಎಂದು ಹೇಳಿ ಕಳಿಸಿದ್ದರಂತೆ. ಮತ್ತೆ ಪೊಲೀಸ್ ಠಾಣೆಗೆ ಹೋಗಬೇಕು ಎಂದು ಹೆದರಿ ನೇಣುಬಿಗಿದುಕೊಂಡು ಕಿರಣ್ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನು ರಕ್ಷಣೆ ಮಾಡಿದ್ದ ಕುಟುಂಬಸ್ಥರು, ಎಸ್ಎಸ್ ಆಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ: ಮಂಡ್ಯ: ಪ್ರವಾಸಕ್ಕೆ ಬಂದಿದ್ದ ವೇಳೆ ಭಾರೀ ದುರಂತ; ನಾಲ್ವರು ಮಕ್ಕಳು ಸಾವು, ಓರ್ವ ಬಾಲಕನ ರಕ್ಷಣೆ
ಯುವಕನಿಗೆ ಟಾರ್ಚರ್ ನೀಡಿದ್ದಾರೆ ಎಂದು ಕುಟುಂಬಸ್ಥರ ಆರೋಪವಾಗಿದೆ. ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಎಸ್ಪಿ ಅವರಿಗೆ ಸೂಕ್ತ ತನಿಖೆ ಮಾಡುವಂತೆ ಆದೇಶ ಮಾಡಿದ್ದಾರೆ.
ಒಂಟಿ ಮನೆಯಲ್ಲಿ ದರೋಡೆ
ಸೆಪ್ಟಂಬರ್ 7 ರಂದು ಚನ್ನಗಿರಿ ತಾಲೂಕಿನ ಕಾಕನೂರಿನಲ್ಲಿ ವೃದ್ಧ ದಂಪತಿಗಳ ಮೇಲೆ ಹಲ್ಲೆ ಮಾಡಿ ಒಂಟಿ ಮನೆಯಲ್ಲಿ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತಾರು ಯುವಕರನ್ನ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ಕಳ್ಳತನ ಒಪ್ಪಿಕೊಳ್ಳುವಂತೆ ಪೊಲೀಸರು ಟಾರ್ಚರ್ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಕಿರಣ್ ಆತ್ಮಹತ್ಯೆಗೆ ಯತ್ನಿಸುವ ಮುನ್ನ ಮೊಬೈಲ್ನಲ್ಲಿ ಹೇಳಿಕೆ ದಾಖಲು ಮಾಡಿಕೊಂಡಿದ್ದಾನಂತೆ. ಆದರೆ ಮೊಬೈಲ್ ಲಾಕ್ ಆತನಿಗೆ ಮಾತ್ರ ಗೊತ್ತು. ಹೀಗಾಗಿ ಅಸಲಿ ಸತ್ಯ ಮೊಬೈಲ್ನಲ್ಲಿ ಅಡಗಿದೆ ಅಂದರೆ ತಪ್ಪಾಗಲಿಕ್ಕಿಲ್ಲ.
ಆತ್ಮಹತ್ಯೆಗೆ ಯತ್ನಿಸಿರುವ ಕಿರಣ್ ಸ್ಥಿತಿ ಸದ್ಯ ಗಂಭೀರವಾಗಿದೆ. ಜೊತೆಗೆ ದೇಹದ ಮೇಲೆ ಗಾಯಗಳಾಗಿವೆ. ಆತನಿಗೆ ಪ್ರಜ್ಞೆ ಬರಬೇಕಾಗಿದೆ. ವಿಚಾರಣೆ ಹೆಸರಿನಲ್ಲಿ ಪೊಲೀಸರು ನಿಜಕ್ಕೂ ಚಿತ್ರ ಹಿಂಸೆ ನೀಡಿದ್ದರಾ ಎಂಬುವುದು ದೊಡ್ಡ ಪ್ರಶ್ನೆ ಆಗಿದೆ. ಸದ್ಯ ಪೊಲೀಸರ ಟಾರ್ಚರ್ಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:46 pm, Sun, 2 November 25



