Accident: ಹೊಳಲ್ಕೆರೆ: ಖಾಸಗಿ ಬೈಕ್-ಬಸ್ ಮುಖಾಮುಖಿ, ಸ್ಥಳದಲ್ಲೇ ನಾಲ್ವರು ಸಾವು
ಬೈಕ್ ಮತ್ತು ಖಾಸಗಿ ಬಸ್ ಮುಖಾಮುಖಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ದುಮ್ಮಿ ಗ್ರಾಮದ ಬಳಿ ಬುಧವಾರ (ಮಾರ್ಚ್ 23) ತಡರಾತ್ರಿ ಸಂಭವಿಸಿದೆ.
ಚಿತ್ರದುರ್ಗ: ಬೈಕ್ ಮತ್ತು ಖಾಸಗಿ ಬಸ್ ಮುಖಾಮುಖಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ದುಮ್ಮಿ ಗ್ರಾಮದ ಬಳಿ ಬುಧವಾರ (ಮಾರ್ಚ್ 23) ತಡರಾತ್ರಿ ಸಂಭವಿಸಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ಬಿ.ದುರ್ಗ ಗ್ರಾಮದ ನಾಗರಾಜ್ (43), ಪತ್ನಿ ಶೈಲಜಾ (38), ಪುತ್ರರಾದ ವೀರೇಶ್ (15), ಸಂತೋಷ್ (13) ಮೃತರು. ಅಪಘಾತದ ಬಳಿಕ ಬಸ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೃತರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೆಬ್ಬಳೆಗೆರೆ ಗ್ರಾಮದಿಂದ ಬಿ.ದುರ್ಗ ಗ್ರಾಮಕ್ಕೆ ತೆರಳುತ್ತಿದ್ದರು. ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎಂದು ಆರೋಪ ಮಾಡಲಾಗಿದೆ. ರಸ್ತೆಯ ಮೇಲಿದ್ದ ಬಸ್ ಏಕಾಏಕಿ ಬಲಬದಿಗೆ ನುಗ್ಗಿತು. ಅಪಘಾತಕ್ಕೆ ಇದು ಮುಖ್ಯ ಕಾರಣ ಎನ್ನಲಾಗಿದೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈ.ಎನ್. ಹೊಸಕೋಟೆ- ಪಾವಗಡ ಮಧ್ಯೆ 9 KSRTC ಬಸ್‌ಗಳ ಸಂಚಾರ ಆರಂಭ
ತುಮಕೂರು: ಇಲ್ಲಿನ ಪಾವಗಡದ ಪಳವಳ್ಳಿ ಕಟ್ಟೆ ಬಳಿ ಬಸ್ ದುರಂತ ಪ್ರಕರಣದ ಬಳಿಕ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. ವೈ.ಎನ್. ಹೊಸಕೋಟೆಯಿಂದ 9 KSRTC ಬಸ್ ಸೇವೆ ಆರಂಭ ಮಾಡಲಾಗಿದೆ. ವೈ.ಎನ್. ಹೊಸಕೋಟೆ- ಪಾವಗಡ ಮಧ್ಯೆ 9 ಬಸ್‌ಗಳ ಸಂಚಾರ ಶುರುವಾಗಿದೆ. ಮೊದಲು ಈ ಮಾರ್ಗದಲ್ಲಿ 2 ಬಸ್ ಮಾತ್ರ ಸಂಚರಿಸುತ್ತಿತ್ತು. ಇದೀಗ ಹೆಚ್ಚುವರಿಯಾಗಿ ಈ ಮಾರ್ಗದಲ್ಲಿ 7 ಬಸ್ ಸಂಚಾರ ಆರಂಭವಾಗಿದೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಮಧ್ಯೆ ಬಸ್ ಸಂಚಾರ ಶುರು ಮಾಡಲಾಗಿದೆ.
ಇನ್ನು, ಪಾವಗಡದಲ್ಲಿ ನಡೆದ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿ ಈಗಲೂ ಗಾಯಾಳುಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗಾಗಿ ಪರದಾಟ ಕಂಡುಬಂದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದವರನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದರೂ ವೈದ್ಯರು ಗಾಯಾಳುಗಳನ್ನು ಡಿಸ್ಚಾರ್ಜ್ ಆಗಿ ಎನ್ನುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ನಡೆಗೆ ಗಾಯಾಳುಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡದೇ ವೈದ್ಯರು ಬೇಜವ್ದಾರಿತನ ಮಾಡ್ತಿದ್ದಾರೆಂದು ಆರೋಪ ಮಾಡಲಾಗಿದೆ. ಹೊರಗಡೆಯಿಂದ ಔಷಧಿ ತರಲು ಚೀಟಿ ಬರೆದುಕೊಡುವ ವೈದ್ಯರ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 7 ಗಾಯಾಳುಗಳು ಇದ್ದಾರೆ. ಗಾಯಾಳುಗಳ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಚಿವರು ಹೇಳಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಸಾರಿಗೆ ಸಚಿವ ಶ್ರೀರಾಮುಲು ಹೊರಗಡೆ ಔಷಧಿ ಬರೆದುಕೊಡದಂತೆ ಎಚ್ಚರಿಕೆ ನೀಡಿದ್ರು. ಆದರೂ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿದೆ. ನಮಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಮಂತ್ರಿ, ಎಂಎಲ್ಎಗಳು ಬಂದಾಗ ಮಾತ್ರ ನಮಗೆ ಚಿಕಿತ್ಸೆ ಕೊಡ್ತಾರೆ. ಮೆಡಿಸನ್ ಎಲ್ಲವನ್ನೂ ಹೊರಗಡೆಯಿಂದಲೇ ತರಿಸ್ತಾರೆ. ಗಾಯಾಳುಗಳು ಇನ್ನೂ ಗಂಭೀರವಾಗಿದ್ದಾರೆ. ಈಗಲೇ ಡಿಸ್ಚಾರ್ಜ್ ಆಗಿ ಅಂದ್ರೆ ನಾವು ಎಲ್ಲಿಗೆ ಹೋಗೋದು ಎಂದು ಕೇಳುತ್ತಿದ್ದಾರೆ.
ಇದನ್ನೂ ಓದಿ: China Plane Crash: ಚೀನಾ ಭೀಕರ ವಿಮಾನ ಅಪಘಾತ; ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ಚೀನಾ
ಇದನ್ನೂ ಓದಿ: ಹೆಬ್ಬಾಳ ಬಸ್ ಅಪಘಾತ: ನನ್ನಕ್ಕನ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಲೇಬೇಕು ಅನ್ನುತ್ತಾಳೆ ಅಕ್ಷಯ ತಂಗಿ ಸಂಧ್ಯಾ
Published On - 7:06 am, Thu, 24 March 22