ತೂಕ ಇಳಿಸಿಕೊಳ್ಳಿ, ಇದು ಟಫ್ ಜಾಬ್: ಚಿತ್ರದುರ್ಗ ಪೊಲೀಸರಿಗೆ ಎಡಿಜಿಪಿ ಅಲೋಕ್ಕುಮಾರ್ ಫಿಟ್ನೆಸ್ ಪಾಠ
ತೂಕ ಇಳಿಸಿಕೊಳ್ಳಿ. ಇದು ಟಫ್ ಜಾಬ್ ಎಂದು ತಾಕೀತು ಮಾಡಿದರು. ಫುಡ್ ಕಂಟ್ರೋಲ್ ಮಾಡಿ, ವ್ಯಾಯಾಮ ಮಾಡಿ ಎಂದು ಸಲಹೆ ನೀಡಿದರು.
ಚಿತ್ರದುರ್ಗ: ನಗರದಲ್ಲಿ ಬುಧವಾರ ಕಾನೂನು ವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ತೂಕ ಇಳಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಾಕೀತು ಮಾಡಿದರು. ಹಿರಿಯೂರು ಡಿವೈಎಸ್ಪಿ ರೋಷನ್ ಜಮೀರ್, ಚಿತ್ರದುರ್ಗ ಡಿವೈಎಸ್ಪಿ ಅನಿಲ್, ಚಳ್ಳಕೆರೆ ಡಿವೈಎಸ್ಪಿ ರಮೇಶ್, ಡಿಸಿಆರ್ಬಿ ಡಿವೈಎಸ್ಪಿ ಲೋಕೇಶ್, ಎಸ್ಪಿ ಕಚೇರಿ ಸಿಪಿಐ ನಾಗರಾಜ್ ಅವರಗೆ ಫಿಟ್ನೆಸ್ ಪಾಠ ಮಾಡಿದರು. ಹಿರಿಯೂರು ಸಿಪಿಐ ಆನಂದ್ ಅವರಿಗೆ ಸ್ಲಿಮ್ ಆಗಿದ್ದೀರಿ ಎಂದರು. ಐಜಿಪಿ ತ್ಯಾಗರಾಜನ್, ಎಸ್ಪಿ ಕೆ.ಪರಶುರಾಮ್ ಲೈಟ್ ವೇಯ್ಟ್ ಇದ್ದಾರೆ. ಉಳಿದವರು ಹೆವಿ ವೇಯ್ಟ್ ಆಗಿದ್ದೀರಿ. ತೂಕ ಇಳಿಸಿಕೊಳ್ಳಿ. ಇದು ಟಫ್ ಜಾಬ್ ಎಂದು ತಾಕೀತು ಮಾಡಿದರು. ಫುಡ್ ಕಂಟ್ರೋಲ್ ಮಾಡಿ, ವ್ಯಾಯಾಮ ಮಾಡಿ ಎಂದು ಸಲಹೆ ನೀಡಿದರು.
ಚಿತ್ರದುರ್ಗ ಎಸ್ಪಿ ಕಚೇರಿಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದಾಗ ಪೊಲೀಸರು ಗೌರವ ವಂದನೆ ಸಲ್ಲಿಸಿ ಸ್ವಾಗತಿಸಿದರು. ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್ಪಿ ಕೆ.ಪರಶುರಾಮ್ ಉಪಸ್ಥಿತರಿದ್ದರು.
ಚಿತ್ರದುರ್ಗ ಭೇಟಿಯ ವೇಳೆ ಜಿಲ್ಲೆಯಲ್ಲಿ ದಾಖಲಾಗಿರುವ ನಾಲ್ಕೂ ಪೋಕ್ಸೋ ಪ್ರಕರಣಗಳ ತನಿಖೆಯ ಪ್ರಗತಿಯ ಬಗ್ಗೆ ಅಲೋಕ್ಕುಮಾರ್ ಪರಿಶೀಲಿಸಲಿದ್ದಾರೆ. ಮುರುಘಾ ಶರಣದ ವಿರುದ್ಧ ಈಗಾಗಲೇ 2 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಸಂಜೆ 5ಕ್ಕೆ ಸಾರ್ವಜನಿಕರಿಂದ ಅಲೋಕ್ ಕುಮಾರ್ ಅವರು ಅಹವಾಲು ಸ್ವೀಕರಿಸಲಿದ್ದಾರೆ. ಸಂಜೆ 7ರ ನಂತರ ಚಿತ್ರದುರ್ಗ ಜಿಲ್ಲೆಯ ವಿವಿಧ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಇಂದು (ನ 2) ಅವರು ಚಿತ್ರದುರ್ಗದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 8ಕ್ಕೆ ಪೊಲೀಸ್ ಪರೇಡ್ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದ ನಂತರ ಜಿಲ್ಲಾ ಮೀಸಲು ಪಡೆಯ ಕೇಂದ್ರ ಕಚೇರಿಗೆ ಭೇಟಿ ನೀಡಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚಿಸಲಿದ್ದಾರೆ. ನಂತರ ಶಿವಮೊಗ್ಗಕ್ಕೆ ತೆರಳಲಿದ್ದಾರೆ.
ಮುರುಘಾ ಶರಣರನ್ನು ಕಸ್ಟಡಿಗೆ ಕೇಳಲಿರುವ ಪೊಲೀಸರು
ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ 2ನೇ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಶರಣರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಸಂಬಂಧ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ಗೆ ಪೊಲೀಸರು ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯ ಸೂಚಿಸಿದರೆ ಮುರುಘಾ ಶ್ರೀಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮುಂದುವರಿಸಲಿದ್ದಾರೆ.