AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

POCSO Case: ಶಿವಮೂರ್ತಿ ಮುರುಘಾ ಶರಣರ ನ್ಯಾಯಾಂಗ ಬಂಧನ ವಿಸ್ತರಿಸಿದ ಚಿತ್ರದುರ್ಗ ನ್ಯಾಯಾಲಯ

ಶಿವಮೂರ್ತಿ ಮುರುಘಾ ಶರಣರು ಮತ್ತು ಇತರ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ನ 8ರವರೆಗೂ ವಿಸ್ತರಿಸಿದೆ.

POCSO Case: ಶಿವಮೂರ್ತಿ ಮುರುಘಾ ಶರಣರ ನ್ಯಾಯಾಂಗ ಬಂಧನ ವಿಸ್ತರಿಸಿದ ಚಿತ್ರದುರ್ಗ ನ್ಯಾಯಾಲಯ
ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು
TV9 Web
| Edited By: |

Updated on: Nov 03, 2022 | 1:22 PM

Share

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಮುರುಘಾ ಶರಣರು ಮತ್ತು ಇತರ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ನಗರದ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ನ 8ರವರೆಗೂ ವಿಸ್ತರಿಸಿದೆ. ಪ್ರಕರಣದ ಎ1 ಆರೋಪಿ ಡಾ ಶಿವಮೂರ್ತಿ ಮುರುಘಾ ಶರಣರು, ಎ2 ಆರೋಪಿ ಮಹಿಳಾ ವಾರ್ಡನ್​ ಹಾಗೂ ಎ3 ಆರೋಪಿ ಪರಮಶಿವಯ್ಯ ಅವರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿ ನ್ಯಾಯಾಲಯವು ಆದೇಶ ಹೊರಡಿಸಿದೆ.

ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು 8 ದಿನಗಳ ಪೊಲೀಸ್ ಕಸ್ಟಡಿಗೆ ಕೇಳಿದ್ದರು. ಈ ಕೋರಿಕೆಗೆ ಮುರುಘಾ ಶರಣರ ಪರ ವಕೀಲರು ತಕರಾರು ಅರ್ಜಿ ಸಲ್ಲಿಸಿದ್ದರು. ಪೊಲೀಸರಿಗೆ ಕೋರಿಕೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಮಧ್ಯಾಹ್ನ 2.45ಕ್ಕೆ ಮುಂದೂಡಿದೆ. ಆರೋಪಿ ಮುರುಘಾ ಶರಣರು ನ್ಯಾಯಾಲದಯಲ್ಲಿಯೇ ವಿಚಾರಣೆ ಪೂರ್ಣಗೊಳ್ಳಲೆಂದು ಕಾದು ಕುಳಿತಿದ್ದಾರೆ.

ನ್ಯಾಯಾಲಯದಿಂದ ಹಿಂದಿರುಗಲೆಂದು ಹೊರಗೆ ಬಂದ ಮುರುಘಾ ಶರಣರನ್ನು ಕೆಲ ಮುಖಂಡರು ಮಾತನಾಡಿಸಿದರು. ಈ ವೇಳೆ ಶರಣ ಸೇನೆ ಅಧ್ಯಕ್ಷ ಮರುಳಾರಾಧ್ಯ ಮುರುಘಾ ಶರಣರ ಕೈಗೆ ಚೀಟಿಯೊಂದನ್ನು ನೀಡಿದರು. ಮುಖಂಡರ ಜತೆ ಮಾತಾಡುವ ವೇಳೆ ಮುರುಘಾ ಶರಣರು ಮೆಲ್ಲಗೆ ನಸುನಕ್ಕಿದ್ದು ಎಲ್ಲರ ಗಮನ ಸೆಳೆಯಿತು. ಶಿವಮೂರ್ತಿ ಮುರುಘಾ ಶರಣರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲೆಂದು ಕರೆತಂದ ವೇಳೆ ಭಕ್ತನೊಬ್ಬ ಅವರ ಕಾಲಿಗೆ ಅಡ್ಡಬಿದ್ದಿದ್ದು ಎಲ್ಲರ ಗಮನ ಸೆಳೆಯಿತು.

ಚಿತ್ರದುರ್ಗ ಗ್ರಾಮಾಂತರ ಸಿಪಿಐ ಬಾಲಚಂದ್ರ ನಾಯ್ಕ್ ಮತ್ತು ತಂಡವು ನ್ಯಾಯಾಲಯದಲ್ಲಿ ಹಾಜರಿದ್ದು ಮುರುಘಾ ಶರಣರನ್ನು ವಶಕ್ಕೆ ಪಡೆಯಲು ಕೋರಿತು. ಗ್ರಾಮಾಂತರ ಠಾಣೆ ಪಿಎಸ್​ಐ ಶಿವಕುಮಾರ್ ನೇತೃತ್ವದಲ್ಲಿ ಸೆರೆಮನೆಯಿಂದ ನ್ಯಾಯಾಲಯದವರೆಗಿನ ಮಾರ್ಗಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಹಿಂದೆಯೂ ಬಂಧನದ ಅವಧಿ ವಿಸ್ತರಣೆಯಾಗಿತ್ತು

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಬಂಧನದಲ್ಲಿರುವ ಶಿವಮೂರ್ತಿ ಮುರುಘಾ ಶರಣರ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಅವಧಿಗೆ ವಿಸ್ತರಿಸಿ ಅ 21ರಂದು ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್​ ಆದೇಶ ನೀಡಿತ್ತು. ಈ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು (ನ 3) ಮತ್ತೆ ಶರಣರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಪ್ರಭಾರ ಪೀಠಾಧ್ಯಕ್ಷರಾಗಿ ಬಸವಪ್ರಭುಶ್ರೀ ನೇಮಕ

ಚಿತ್ರದುರ್ಗದ ಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕವಾಗಿದೆ. ಹಲವರ ವಿರೋಧದ ನಡುವೆಯೂ ಕಾನೂನು ಪ್ರಕ್ರಿಯೆ ಮೂಲಕ ಅಧಿಕೃತವಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ ಹೈಕೋರ್ಟ್ ಅನುಮತಿ ಪಡೆದು ಬಸವಪ್ರಭುಶ್ರೀ ನೇಮಕ ಕುರಿತು ಮುರುಘಾಮಠ ನಿನ್ನೆ (ಅಕ್ಟೋಬರ್ 16) ಅಧಿಕೃತ ಪ್ರಕಟಣೆ ಹೊರಡಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಧಾರ್ಮಿಕ, ಸೇವಾ, ಪೂಜಾ ಕಾರ್ಯಗಳು ಮಠದ ಪರಂಪರೆ ಮುಂದುವರೆಸಿಕೊಂಡು ಹೋಗಲು ಪ್ರಕಟಣೆಯಲ್ಲಿ ತಿಳಿಸಿದೆ.