AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಘನಘೋರ ದುರಂತ: ಚಿತ್ರದುರ್ಗ ಹೆದ್ದಾರಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್​​​​, 9ಕ್ಕೂ ಹೆಚ್ಚು ಜನ ಸಜೀವ ದಹನ

Chitradurga Bus Accident: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಲೀಪರ್ ಕೋಚ್ ಬಸ್ ಹೊತ್ತಿ ಉರಿದಿದೆ. ಈ ಘಟನೆಯಲ್ಲಿ 9ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಮತ್ತೊಂದು ಘನಘೋರ ದುರಂತ: ಚಿತ್ರದುರ್ಗ ಹೆದ್ದಾರಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್​​​​, 9ಕ್ಕೂ ಹೆಚ್ಚು ಜನ ಸಜೀವ ದಹನ
ಭೀಕರ ರಸ್ತೆ ಅಪಘಾತ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on:Dec 25, 2025 | 8:22 AM

Share

ಚಿತ್ರದುರ್ಗ, ಡಿ.25: ಆಂಧ್ರ ಪ್ರದೇಶದ ಕರ್ನೂಲ್ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಕ್ರಿಸ್​​​ಮಸ್​​ ಸಂಭ್ರಮ  ಹಾಗೂ ಹೊಸ ವರ್ಷಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದ ವೇಳೆ ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ.  ನೆನ್ನೆ ರಾತ್ರಿ (ಡಿ.25) ಚಿತ್ರದುರ್ಗದ ಜಿಲ್ಲೆ (Chitradurga Bus Accident) ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ 17ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್ಸೊಂದು ಹೊತ್ತಿಉರಿದಿದೆ. ಖಾಸಗಿ ಸ್ಲೀಪರ್ ಕೋಚ್​​ ಬಸ್​ನಲ್ಲಿದ್ದ 9ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ ಎಂದು ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಉಳಿದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಈ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಒಂದು ಕಡೆಯಿಂದ ಬರುತ್ತಿದ್ದ ಲಾರಿಯೊಂದು ಡಿವೈಡರ್​ ಹಾರಿ ಮತ್ತೊಂದು ಕಡೆಯಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಲೀಪರ್​ ಕೋಚ್​​ ಬಸ್​​​ ರಸ್ತೆ ಮಧ್ಯೆ ಹೊತ್ತಿ ಉರಿದಿದೆ. ಈ ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ. ಇನ್ನು ಈ ಲಾರಿ ಹಿರಿಯೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು ಎಂದು ಹೇಳಾಗಿದೆ. ಬಸ್​​​ ಬೆಂಗಳೂರಿಂದ ಶಿವಮೊಗ್ಗಕ್ಕೆ  ಹೋಗುತ್ತಿತ್ತು. ಇದೀಗ ಘಟನಾ ಸ್ಥಳಕ್ಕೆ ಎಸ್​ಪಿ ರಂಜಿತ್​​ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣಾಯಲ್ಲಿ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

ಇನ್ನು ಈ ಬಸ್ಸಿನಲ್ಲಿ 15 ಮಹಿಳೆಯರು, 14 ಪುರುಷರು ಪ್ರಯಾಣಿಸುತ್ತಿದ್ದರು. ಒಟ್ಟು 32 ಸೀಟ್​ಗಳ ಬಸ್​​ನಲ್ಲಿ 29 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಬಸ್​​ನಲ್ಲಿ ಗೋಕರ್ಣದ 25 ಜನ, ಕುಮಟಾದ ಇಬ್ಬರು ಹಾಗೂ ಶಿವಮೊಗ್ಗದ ಇಬ್ಬರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಇನ್ನು ಈ ಬಸ್ಸಿನಲ್ಲಿ ಮಂಜುನಾಥ್​, ಸಂಧ್ಯಾ, ಶಶಾಂಕ್​, ದಿಲೀಪ್​, ಪ್ರೀತೀಶ್ವರನ್,​ ವಿ.ಬಿಂದು, ಕೆ.ಕವಿತಾ, ಅನಿರುದ್ಧ್ ಬೆನರ್ಜಿ, ಅಮೃತಾ, ಇಶಾ, ಸೂರಜ್​, ಮಾನಸ, ಮಿಲನಾ, ಹೇಮರಾಜ್​ಕುಮಾರ್, ಕಲ್ಪನಾ ಪ್ರಜಾಪತಿ, ಎಂ.ಶಶಿಕಾಂತ್​, ವಿಜಯ್ ಭಂಡಾರಿ, ನವ್ಯಾ, ಅಭಿಷೇಕ್​, ಹೆಚ್​.ಕಿರಣ್ ಪಾಲ್​, ಎಂ.ಕೀರ್ತನ್ ಸೇರಿದಂತೆ 29 ಜನ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರು-ಅನಂತಪುರ ಹೆದ್ದಾರಿಯಲ್ಲಿ ಧಗಧಗನೆ ಹೊತ್ತಿ ಉರಿದ ಬಸ್​​

ಇನ್ನು ಬಸ್ ಚಾಲಕ, ನಿರ್ವಾಹಕ ಮತ್ತು ಕೆಲವರು ಬಸ್ ನಿಂದ ಹೊರ ಜಿಗಿದು ಬಚಾವ್​​ ಆಗಿದ್ದಾರೆ. ಅಪಘಾತದಲ್ಲಿ ಕಂಟೇನರ್ ಲಾರಿ ಚಾಲಕ ಕುಲದೀಪ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರಿನಿಂದ ಬಸ್ ನಲ್ಲಿ ತೆರಳುತ್ತಿದ್ದ ಬೆಂಗಳೂರು ಮೂಲದ ಗಗನ ಶ್ರೀ, ರಕ್ಷಿತಾ ಹಾಗೂ ಗೋಕರ್ಣ ಮೂಲದ ರಶ್ಮಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಇದೀಗ ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಅಪಘಾತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸುಮಾರು 30 ಕಿ.ಮೀ. ದೂರದ ವರೆಗೆ ಟ್ರಾಫಿಕ್ ಜಾಮ್​​ ಆಗಿದ್ದು, ಶಿರಾವರೆಗೂ ಕಿಲೋ ಮೀಟರ್​ಗಟ್ಟಲೇ ವಾಹನಗಳು ನಿಂತಿದೆ.

ಕರ್ನೂಲ್ ಬಳಿ ಹೊತ್ತಿ ಉರಿದ ಖಾಸಗಿ ಬಸ್​​​: 20 ಜನ ಸಾವು

ಆಂಧ್ರ ಪ್ರದೇಶದ ಕರ್ನೂಲ್​ ಸಮೀಪ 41 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಬೈಕ್​ ಗೆ ಡಿಕ್ಕಿ ಹೊಡೆದ ಬಳಿಕ ಬಸ್​ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಕೆಲವರು ಹೊರಹಾರಿ ಪ್ರಾಣ ಉಳಿಸಿಕೊಂಡಿದ್ದರೆ ಹಲವರು ಬೆಂಕಿ ಕೆನ್ನಾಲೆಗೆ ಸಿಲುಕಿ ಜೀವ ಕಳೆದುಕೊಂಡಿದ್ದರು. ಘಟನೆಯಲ್ಲಿ ಬೆಂಗಳೂರಲ್ಲಿ ನೆಲೆಸಿದ್ದ ಕುಟುಂಬ ಸೇರಿ 20 ಜನರು ದಾರುಣವಾಗಿ ಸಾವನ್ನಪ್ಪಿದ್ದರು. ಇದೀಗ ಇಂತಹದೇ ಮತ್ತೊಂದು ಘಟನೆ ನಡೆದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:18 am, Thu, 25 December 25