ಚಿತ್ರದುರ್ಗ: ಕೆರೆಯಲ್ಲಿ ಯುವಕನ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್​; ಗೆಳೆಯರೇ ಸೇರಿ ಕೊಲೆ ಮಾಡಿದ್ದಾರೆಂದು ಆರೋಪ

|

Updated on: Mar 19, 2023 | 1:17 PM

ವಾರದ ಹಿಂದಷ್ಟೇ ಆ ಗ್ರಾಮದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆ ಆಗಿದ್ದನು. ಆದರೆ ಇದೀಗ ಯುವಕನ ಕುಟುಂಬಸ್ಥರಲ್ಲಿ ಸಾವಿನ ಬಗ್ಗೆ ಸಂಶಯ ಮೂಡಿದೆ. ಕೆರೆ ಬಳಿಗೆ ಕರೆದೊಯ್ದಿದ್ದ ಗೆಳೆಯರೇ ನೀರಿಗೆ ತಳ್ಳಿ ಹತ್ಯೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಚಿತ್ರದುರ್ಗ: ಕೆರೆಯಲ್ಲಿ ಯುವಕನ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್​; ಗೆಳೆಯರೇ ಸೇರಿ ಕೊಲೆ ಮಾಡಿದ್ದಾರೆಂದು ಆರೋಪ
ಮೃತ ಯುವಕ
Follow us on

ಚಿತ್ರದುರ್ಗ: ಯುವಕ ಕೆರೆಯಲ್ಲಿ ಶವವಾಗಿ ಪತ್ತೆ ಆಗಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್, ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಸತ್ತಿಲ್ಲ, ಹಳೇ ದ್ವೇಷ ಹಿನ್ನೆಲೆ ಹತ್ಯೆ ಮಾಡಿರುವ ಆರೋಪ. ಹೌದು ಚಿತ್ರದುರ್ಗ‌ ಜಿಲ್ಲೆ ಹಿರಿಯೂರು ತಾಲೂಕಿನ ಚಿಕ್ಕಸಿದ್ದವ್ವನಹಳ್ಳಿ ಕೆರೆಯಲ್ಲಿ ಮಾರ್ಚ್ 12ರಂದು ಯುವಕನ ಶವ ಪತ್ತೆ ಆಗಿತ್ತು. ಆತನನ್ನ ಹಿರಿಯೂರು ತಾಲೂಕಿನ ಕೊವೇರಹಟ್ಟಿ ಗ್ರಾಮದ ಧನರಾಜ್ (25) ಎಂದು ಗುರುತಿಸಲಾಗಿತ್ತು. ಮಾರ್ಚ್ 11ರಂದು ಗ್ರಾಮದ ಕಿಶೋರ್ ಮತ್ತು ಪ್ರದೀಪ್ ಬಂದು ಧನರಾಜ್​ನನ್ನು ಜೊತೆಗೆ ಕರೆದುಕೊಂಡು ಹೋಗಿದ್ದರಂತೆ. ಆದರೆ ಸಂಜೆ ವೇಳೆಗೆ ವಾಪಸ್ ಗ್ರಾಮಕ್ಕೆ ಬಂದವರು ಧನರಾಜ್ ಎಲ್ಲಿ ಹೋಗಿದ್ದಾನೆ ಗೊತ್ತಿಲ್ಲ ಎಂದು ಹೇಳಿದ್ದರಂತೆ. ಬಳಿಕ ಚಿಕ್ಕ ಸಿದ್ದವ್ವನಹಳ್ಳಿ ಬಳಿಯ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಅದನ್ನು ಆಕಸ್ಮಿಕ ಘಟನೆ ಎಂದೇ ಭಾವಿಸಲಾಗಿತ್ತು. ಆದರೆ ಕಿಶೋರ್ ಮತ್ತು ಪ್ರದೀಪ್ ಅದೇ ಚಿಕ್ಕ ಸಿದ್ದವ್ವನಹಳ್ಳಿ ಬಳಿ ಕುಡಿಯುತ್ತ ಕುಳಿತಿದ್ದರೆಂಬುದು ಕುಟುಂಬಸ್ಥರಿಗೆ ತಿಳಿದಾಗ ಅನುಮಾನ ಮೂಡಿದ್ದು, ಅವರೇ ಧನರಾಜ್​​ನನ್ನ ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಹೌದು ಕೆಲ ದಿನಗಳ ಹಿಂದೆ ಕಿಶೋರ್ ಮತ್ತು ಪ್ರದೀಪ್ ಗ್ರಾಮದ ರೈತರೊಬ್ಬರಿಗೆ ಸೇರಿದ ತೋಟದಲ್ಲಿ ನೂರಾರು ಅಡಿಕೆ ಮರ ಕಡಿದು ಹಾಕಿದ್ದರಂತೆ. ಅಡಿಕೆ ಮರ ಕಡಿಯುತ್ತಿದ್ದನ್ನ ಧನರಾಜ್ ನೋಡಿದ್ದನಂತೆ. ಹೀಗಾಗಿ ಧನರಾಜ್ ನನ್ನು ಉಪಾಯವಾಗಿ ಕರೆದೊಯ್ದು ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಇನ್ನು ಕೆರೆಯಲ್ಲಿ ಶವವಾಗಿ ಪತ್ತೆ ಆಗಿದ್ದ ಧನರಾಜ್ ಕಣ್ಣು ಸೇರಿ ಇತರೆಡೆ ಕೆಲ ಗಾಯಗಳಾಗಿದ್ದು ಕಂಡು ಬಂದಿದೆ. ಹೀಗಾಗಿ ಕುಡಿದ ಅಮಲಿನಲ್ಲಿ ಹತ್ಯೆ ಮಾಡಿ ಕೆರೆಗೆ ಶವ ಬಿಸಾಡಲಾಗಿದೆ ಎಂಬ ಆರೋಪ ಸಂಬಂಧಿಕರದ್ದಾಗಿದೆ. ಅಂತೆಯೇ ಕುಟುಂಬಸ್ಥರ ಮರು ಹೇಳಿಕೆ‌ ಪಡೆದು ಕೊಲೆ ಪ್ರಕರಣ ದಾಖಲಿಸಬೇಕೆಂದು ಸಂಬಂಧಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:8 ವರ್ಷದ ಬಳಿಕ ಯುವಕನ ಭೀಭತ್ಸ ಕೊಲೆ ರಹಸ್ಯ ಬೆಳಕಿಗೆ: ತಮ್ಮನನ್ನೇ ಹತ್ಯೆ ಮಾಡಿದ್ದ ಅಕ್ಕ, ಪ್ರಿಯಕರ ಅರೆಸ್ಟ್​​

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಕೊವೇರಹಟ್ಟಿಯ‌ ಯುವಕ ಧನರಾಜ್ ಸಾವಿನ ಪ್ರಕರಣ ಇದೀಗ ಟ್ವಿಸ್ಟ್ ಪಡೆದಿದೆ. ಹಿರಿಯೂರು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕೂಲಂಕುಷ‌ ತನಿಖೆ ನಡೆಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ವಿಧಿಸಬೇಕಿದೆ.

ವರದಿ: ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ