Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಕರ್ನಾಟಕದ ಮೂಲದ ನಾಗಸಾಧು ಸಾವು

ಪ್ರಯಾಗ್​ರಾಜ್​ನ ಮಹಾಕುಂಭಮೇಳದ ತ್ರಿವೇಣಿ ಸಂಗಮದ ಬಳಿ ಭೀಕರ ಕಾಲ್ತುಳಿತ ಸಂಭವಿಸಿ 30 ಭಕ್ತರು ಸಾವಿನ ಮನೆ ಸೇರಿದ್ರು. ಈ ಪೈಕಿ ಬೆಳಗಾವಿ ಮೂಲದ ಜ್ಯೋತಿ ಹತ್ತರವಾಠ, ಪುತ್ರಿ ಮೇಘಾ, ಅರುಣ್‌ ಹಾಗೂ ಮಹಾದೇವಿ ಅನ್ನೋ ನಾಲ್ವರು ಸಾವನ್ನಪ್ಪಿದ್ದು, ನಿನ್ನೆ(ಜನವರಿ 30) ಮೃತದೇಹಗಳನ್ನುವಿಮಾನದ ಮೂಲಕ ಬೆಳಗಾವಿ ಏರ್‌ಪೋರ್ಟ್‌ಗೆ ತಂದು ಬಳಿಕ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿದರು. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ಮೂಲದ ನಾಗಸಾಧು ಒಬ್ಬರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಕರ್ನಾಟಕದ ಮೂಲದ ನಾಗಸಾಧು ಸಾವು
Naga Sadhu Rajanath Maharaj
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ರಮೇಶ್ ಬಿ. ಜವಳಗೇರಾ

Updated on:Jan 31, 2025 | 4:23 PM

ಚಿತ್ರದುರ್ಗ, (ಜನವರಿ 31): ಜಗತ್ತಿನಲ್ಲೇ ಅತೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿದೆ. ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳದಲ್ಲಿ ನಾಗಸಾಧು, ಸಂತರು, ಭಕ್ತಾಧಿಗಳು ನಿರೀಕ್ಷೆ ಮೀರಿದ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನು 144 ವರ್ಷಕ್ಕೊಮ್ಮೆ ಅತಿ ಅಪರೂಪದ ಮಹಾಕುಂಭಮೇಳವು ಸದ್ಯ ಜನಮನ ಸೆಳೆದಿದ್ದು, ಹಲವು ಅಚ್ಚರಿ ಹಾಗೂ ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಇದರ ಮಧ್ಯ ದುರದೃಷ್ಟವಶಾತ್ ಕಾಲ್ತುಳಿತ ಸಂಭವಿಸಿದ್ದು, ಇದರಲ್ಲಿ 30 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇನ್ನು ಕರ್ನಾಟಕದ ಮೂಲದ ಬೆಳಗಾವಿಯ ನಾಲ್ವರು ಮೃತಟ್ಟಿದ್ದಾರೆ. ಅಲ್ಲದೇ ಈ ಕಾಲ್ತುಳಿತದಲ್ಲಿ ಕರ್ನಾಟಕ ಮೂಲದ ನಾಗಸಾಧು ಒಬ್ಬರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾಲ್ತುಳಿತದಿಂದ ರಾಜನಾಥ್ ಮಹಾರಾಜ್(49) ಎನ್ನುವ ನಾಗಸಾಧು ಮೃತಪಟ್ಟಿದ್ದಾರೆ.

ಮೃತ ನಾಗಸಾಧು ರಾಜನಾಥ್ ಅವರು ಬಂಜಾರ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್ ಶ್ರೀ ಒಡನಾಡಿಯಾಗಿದ್ದರು. ಇವರು ಕಳೆದ 7 ವರ್ಷಗಳಿಂದ ಚಿತ್ರದುರ್ಗದ ಬಂಜಾರ ಗುರು ಪೀಠದಲ್ಲಿ ನೆಲೆಸಿದ್ದರು. ಬಂಜಾರ ಗುರು ಪೀಠದಲ್ಲಿ ನೆಲೆಸಿದ್ದರು. ಕಳೆದ 15 ದಿನದ ಹಿಂದೆ ಅಷ್ಟೇ ಮಹಾಕುಂಭಮೇಳಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ಇದೀಗ ಅವರ ಪಾರ್ಥಿವ ಶರೀರವನ್ನು ಚಿತ್ರದುರ್ಗಕ್ಕೆ ತರಬೇಕೆಂದು ಚಿತ್ರದುರ್ಗದ ಲಂಬಾಣಿ ಸೇವಾಲಾಲ್ ಗುರುಪೀಠದ ಪೀಠಾಧಿಪತಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕುಂಭಮೇಳದಲ್ಲಿ ಕಾಲ್ತುಳಿತ: ತಾಯಿ-ಮಗಳು ಸೇರಿದಂತೆ ಬೆಳಗಾವಿಯ ನಾಲ್ವರು ದುರಂತ ಸಾವು

ಇನ್ನು ಈ ಬಗ್ಗೆ ಚಿತ್ರದುರ್ಗದ ಲಂಬಾಣಿ ಸೇವಾಲಾಲ್ ಗುರುಪೀಠದ ಪೀಠಾಧಿಪತಿ ಸರ್ಧಾರ್ ಸೇವಾಲಾಲ್‌ ಸ್ವಾಮೀಜಿ ಮಾತನಾಡಿ, ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿರುವ ರಾಜನಾಥ್ ಮಹಾರಾಜ್ ಪಾರ್ಥಿವ ಶರೀರವನ್ನು ಚಿತ್ರದುರ್ಗಕ್ಕೆ ತಲುಪಿಸಬೇಕೆಂದು ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೇ ಆದಷ್ಟು ಬೇಗ ಪಾರ್ಥೀವ ಶರೀರ ತರಿಸುವಂತೆ ಕರ್ನಾಟಕ ಸರ್ಕಾರಕ್ಕೂ ಸಹ ಒತ್ತಾಯಿಸಿದ್ದಾರೆ.

ಕಾಲ್ತುಳಿತದಿಂದ ಸಾವುನೋವಾಗದಂತೆ‌ ಉತ್ತರ ಪ್ರದೇಶ ಸರ್ಕಾರ ಕ್ರಮವಹಿಸಬೇಕು. ರಾಜ್ ನಾಥ್ ಮಹಾರಾಜ್ ಸಿದ್ಧಿ ಸಾಧಕರಾಗಿದ್ದರು. ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಸಿಲುಕಿದ ರಾಜ್​ನಾಥ್ ಸಾವೆಂಬುದು ನಂಬಲು ಆಗುತ್ತಿಲ್ಲ. ನಾಗಸಾಧುಗಳ ಪಾರ್ಥೀವ ಶರೀರ ಅನಾಥವಾಗಿ ಬಿದ್ದಿರೋದು ಬೇಸರ ತಂದಿದೆ. ನಮ್ಮನ್ನು ಕುಂಭಮೇಳಕ್ಕೆ ಆಹ್ವಾನಿಸಿದ್ರು. ಕುಂಭಮೇಳಕ್ಕೆ ಹೋಗಬೇಕು, ಸಾಧುಸಂತರ ದರ್ಶನ ಪಡೆಯಬೇಕು, ಪುಣ್ಯ ಸ್ನಾನ ಮಾಡಬೇಕು ಎನ್ನುತಿದ್ದರು. ನಾಗಸಾಧುಗಳ ಮಾತು ನೆನೆದರೆ ದುಃಖ ಆಗುತ್ತಿದೆ. ಸಿದ್ಧಿಸಾಧಕರ ಪಾರ್ಥಿವ ಶರೀರ‌ ಚಿತ್ರದುರ್ಗಕ್ಕೆ‌ ಬರಬೇಕು. ಪಾರ್ಥಿವ ಶರೀರ ಅಂತ್ಯ ಸಂಸ್ಕಾರವನ್ನು ವಿಧಿ‌ವಿಧಾನ ಮಾಡದಿದ್ದರೆ ಅಗೌರವವಾಗುತ್ತದೆ. ಗುರು ಪರಂಪರೆಗೆ ಅಪಮಾನವಾಗುತ್ತದೆ ಎಂದು ಹೇಳಿದರು.

ಮಹಾಕುಂಭಮೇಳದ ತ್ರಿವೇಣಿ ಸಂಗಮದ ಬಳಿ ಭೀಕರ ಕಾಲ್ತುಳಿತ ಸಂಭವಿಸಿ 30 ಭಕ್ತರು ಮೃತಪಟ್ಟಿದ್ದು, ಈ ಪೈಕಿ ಬೆಳಗಾವಿ ಮೂಲದ ಜ್ಯೋತಿ ಹತ್ತರವಾಠ, ಪುತ್ರಿ ಮೇಘಾ, ಅರುಣ್‌ ಹಾಗೂ ಮಹಾದೇವಿ ಅನ್ನೋ ನಾಲ್ವರು ಸಾವನ್ನಪ್ಪಿದ್ದು, ಎಲ್ಲರ ಅಂತ್ಯಕ್ರಿಯೆ ನಿನ್ನೆ(ಜನವರಿ 30) ನಡೆದಿದೆ. ಮತ್ತೊಂದೆಡೆ ಇದೇ ಬೆಳಗಾವಿ ಮೂಲದ ದೇಶಪಾಂಡೆ ಗಲ್ಲಿಯ ನಿವಾಸಿ ರವಿ ಜಟಾರ ಕುಂಭಮೇಳಕ್ಕೆ ಹೋದಲ್ಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.. ಪ್ರಯಾಗರಾಜ್​​​ನಿಂದ ಮರಳಿ ರೈಲಿನಲ್ಲಿ ಬರುವಾಗ ಪುಣೆಯಲ್ಲಿ ಹೃದಯಾಘಾತವಾಗಿ ಕಣ್ಮುಚ್ಚಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Fri, 31 January 25