ಚಿತ್ರದುರ್ಗ: ಅಸ್ಥಿಪಂಜರದಂತಾದ ಸರ್ಕಾರಿ ಶಾಲೆಗಳು; ಜೀವ ಭಯದಲ್ಲೇ ಪಾಠ ಕೇಳುತ್ತಿರುವ ಮಕ್ಕಳು!

ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆಯಲ್ಲಿರುವ ಎರಡು ಸರ್ಕಾರಿ ಪ್ರಾಥಮಿಕ ಶಾಲೆಗಳ ಕಟ್ಟಡಗಳು ಅಸ್ಥಿಪಂಜರದಂತಾಗಿದ್ದು, ವಿದ್ಯಾರ್ಥಿಗಳು ಜೀವ ಭಯದಲ್ಲೇ ಕಲಿಯುವಂತಾಗಿದೆ. ಮೇಲ್ಛಾವಣಿಯ ಸಿಮೆಂಟ್ ಉದುರಿಬೀಳುತ್ತಿದ್ದು, ಹಲವು ಪೋಷಕರು ಈಗಾಗಲೇ ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಅನಾಹುತ ಸಂಭವಿಸುವ ಮುನ್ನವೇ ನೂತನ ಕೊಠಡಿಗಳನ್ನು ನಿರ್ಮಿಸಿಕೊಡುವಂತೆ ಪೋಷಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಚಿತ್ರದುರ್ಗ: ಅಸ್ಥಿಪಂಜರದಂತಾದ ಸರ್ಕಾರಿ ಶಾಲೆಗಳು; ಜೀವ ಭಯದಲ್ಲೇ ಪಾಠ ಕೇಳುತ್ತಿರುವ ಮಕ್ಕಳು!
ಅಸ್ಥಿಪಂಜರದಂತಾದ ಸರ್ಕಾರಿ ಶಾಲೆ
Edited By:

Updated on: Sep 12, 2026 | 8:39 AM

ಮುಖ್ಯಾಂಶಗಳು

  • ಚಿತ್ರದುರ್ಗದ ಎರಡು ಸರ್ಕಾರಿ ಶಾಲಾ ಕಟ್ಟಡಗಳು ಸಂಪೂರ್ಣವಾಗಿ ಧರಾಶಾಹಿಯಾಗುವ ಹಂತಕ್ಕೆ.
  • ಸಿಮೆಂಟ್ ಉದುರಿಬಿದ್ದು ಅಸ್ಥಿಪಂಜರದಂತಾದ ಮೇಲ್ಛಾವಣಿ
  • ಆತಂಕದಿಂದ ಟಿಸಿ ಪಡೆದು ಬೇರೆ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿರುವ ಪೋಷಕರು.

ಚಿತ್ರದುರ್ಗ, ಸೆಪ್ಟೆಂಬರ್ 12: ನಗರದ ಕೆಳಗೋಟೆ ಬಡಾವಣೆಯಲ್ಲಿರುವ ಎರಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಸಂಪೂರ್ಣ ಧರಾಶಾಹಿಯಾಗುವ ಹಂತಕ್ಕೆ ತಲುಪಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ನಿತ್ಯ ಆತಂಕದಲ್ಲೇ ದಿನ ದೂಡುವಂತಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಕೂಗಳತೆ ದೂರದಲ್ಲೇ ಈ ದುರವಸ್ಥೆ ಕಂಡುಬಂದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೇರೆ ಶಾಲೆಗಳತ್ತ ಮುಖ ಮಾಡಿದ ವಿದ್ಯಾರ್ಥಿಗಳು

ಕೆಳಗೋಟೆಯ ಸಿಕೆ ಪುರ ಶಾಲೆಯಲ್ಲಿ 43 ಹಾಗೂ ಬಾರ್ ಲೈನ್ ರಸ್ತೆಯ ಶಾಲೆಯಲ್ಲಿ 18 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಶಾಲೆಗಳ ಮೇಲ್ಛಾವಣಿಯ ಸಿಮೆಂಟ್ ಉದುರಿಬಿದ್ದು ಕಟ್ಟಡಗಳು ಅಸ್ಥಿಪಂಜರದಂತೆ ಗೋಚರಿಸುತ್ತಿವೆ. ಬಹುತೇಕ ಕೊಠಡಿಗಳು ಬಳಕೆಗೆ ಬಾರದಂತಾಗಿದ್ದು, ಎರಡೆರಡು ಕೊಠಡಿಗಳಲ್ಲೇ ಅನಿವಾರ್ಯವಾಗಿ ತರಗತಿಗಳನ್ನು ನಡೆಸಲಾಗುತ್ತಿದೆ. ಶಾಲೆಗೆ ಹೋದ ಮಕ್ಕಳು ಸುರಕ್ಷಿತವಾಗಿ ಮನೆಗೆ ವಾಪಸ್ ಬರುತ್ತಾರೋ ಇಲ್ಲವೋ ಎಂಬ ಭಯ ಪೋಷಕರನ್ನು ಕಾಡುತ್ತಿದೆ. ಕಟ್ಟಡದ ಭೀತಿಯಿಂದಾಗಿ ಹಲವು ಪೋಷಕರು ಮಕ್ಕಳ ಟಿಸಿ (TC) ಪಡೆದು ಬೇರೆ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

ಅಧಿಕಾರಿಗಳ ಭೇಟಿಯಾದರೂ ಸಿಗದ ಮುಕ್ತಿ

ಈ ಕುರಿತು ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ಪ್ರತಿಕ್ರಿಯಿಸಿ, “ಮೇಲಧಿಕಾರಿಗಳು ಹಲವು ಬಾರಿ ಭೇಟಿ ನೀಡಿ ಪರಿಶೀಲಿಸಿದ್ದರೂ ಯಾವುದೇ ಹೊಸ ಕೊಠಡಿ ನಿರ್ಮಾಣ ಅಥವಾ ದುರಸ್ತಿ ಕಾರ್ಯ ನಡೆದಿಲ್ಲ. ಸುಸಜ್ಜಿತ ಕಟ್ಟಡ ನಿರ್ಮಿಸಿದರೆ ಮಾತ್ರ ದಾಖಲಾತಿ ಹೆಚ್ಚಿಸಲು ಸಾಧ್ಯ,” ಎಂದು ಅಸಹಾಯಕರಾಗಿ ಹೇಳಿದ್ದಾರೆ. ಭವಿಷ್ಯದ ಅನಾಹುತ ಸಂಭವಿಸುವ ಮುನ್ನವೇ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ತಕ್ಷಣವೇ ನೂತನ ಕಟ್ಟಡ ನಿರ್ಮಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:37 am, Sat, 12 September 26

ಬಸವರಾಜ ಮುದನೂರ್

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Loading...
Unable to load recommendations.
Follow Us