ಚಿತ್ರದುರ್ಗದಲ್ಲಿ ಬಂಡಾಯ ಶಮನ: ಬಿಜೆಪಿ ಶಾಸಕ ಚಂದ್ರಪ್ಪ ಮನವೊಲಿಕೆ ಯಶಸ್ವಿ; ನಿಟ್ಟುಸಿರು ಬಿಟ್ಟ ಗೋವಿಂದ ಕಾರಜೋಳ

| Updated By: Rakesh Nayak Manchi

Updated on: Apr 01, 2024 | 7:56 PM

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಾಲಿ ಸಂಸದ ನಾರಾಯಣಸ್ವಾಮಿ ಬದಲಿಗೆ ಯಡಿಯೂರಪ್ಪ ಅವರ ಆಪ್ತ, ಮಾಜಿ ಸಿಎಂ ಗೋವಿಂದ್ ಕಾರಜೋಳ ಅವರಿಗೆ ನೀಡಲಾಗಿದೆ. ಇದರಿಂದಾಗಿ ತನ್ನ ಪುತ್ರನಿಗೆ ಟಿಕೆಟ್ ಕೊಡಿಸಲು ತೀವ್ರ ಲಾಭಿ ಮಾಡಿದ್ದ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಅವರು ಪುತ್ರ ರಘುಚಂದ್ರನ್​ನನ್ನು ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಇದೀಗ ಯಡಿಯೂರಪ್ಪ ಅವರು ಚಂದ್ರಪ್ಪ ಅವರ ಅಸಮಾಧಾನ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದುರ್ಗದಲ್ಲಿ ಬಂಡಾಯ ಶಮನ: ಬಿಜೆಪಿ ಶಾಸಕ ಚಂದ್ರಪ್ಪ ಮನವೊಲಿಕೆ ಯಶಸ್ವಿ; ನಿಟ್ಟುಸಿರು ಬಿಟ್ಟ ಗೋವಿಂದ ಕಾರಜೋಳ
ಬಿಜೆಪಿ ಶಾಸಕ ಎಂ ಚಂದ್ರಪ್ಪ ಮನವೊಲಿಸುವಲ್ಲಿ ಯಶಸ್ವಿಯಾದ ಬಿಎಸ್ ಡಿಯೂರಪ್ಪ ಮತ್ತು ವಿಜಯೇಂದ್ರ; ನಿಟ್ಟುಸಿರುವ ಬಿಟ್ಟ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ ಕಾರಜೋಳ
Follow us on

ಬೆಂಗಳೂರು, ಏ.1: ಲೋಸಕಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ತನ್ನ ಪುತ್ರ ರಘುಚಂದ್ರನ್​ನನ್ನು (Raghuchandran) ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ (M. Chandrappa) ಮುಂದಾಗಿದ್ದರು. ಹೀಗಾಗಿ ಕ್ಷೇತ್ರದಲ್ಲಿ ತಂದೆ-ಮಗನ ಬಂಡಾಯ ಶಮನಗೊಳಿಸಲು ಅಖಾಡಕ್ಕಿಳಿದ ಬಿಎಸ್ ಯಡಿಯೂರಪ್ಪ (B.S.Yediyurappa) ಮತ್ತು ಪುತ್ರನೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (B.Y. Vijayendra) ಅವರು ಚಂದ್ರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ನಗರದ ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಎಂ ಚಂದ್ರಪ್ಪ ಅವರು ಇಂದು ಭೇಟಿ ನೀಡಿದ್ದಾರೆ. ಈ ವೇಳೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಚಂದ್ರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದ್ದಾರೆ. ಅದರಂತೆ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಕೆಲಸ ಮಾಡಲು ಚಂದ್ರಪ್ಪ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪುತ್ರ ರಘುಚಂದನ್ ಒಪ್ಪಿಗೆ ಸೂಚಿಸಿದ್ದಾರೆ. ಆ ಮೂಲಕ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಸೋಲಿನ ಭೀತಿ ಎದುರಿಸುತ್ತಿದ್ದ ಗೋವಿಂದ ಕಾರಜೋಳ ಅವರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಚಂದ್ರಪ್ಪ ರೆಬಲ್ ಶಾಸಕನಲ್ಲ, ನೀತಿ ಇಲ್ಲದ ಶಾಸಕ: ಹೆಚ್ ಆಂಜನೇಯ ವಾಗ್ದಾಳಿ

ಬಳಿಕ ಮಾತನಾಡಿದ ಶಾಸಕ ಚಂದ್ರಪ್ಪ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ನನ್ನ ಮಗ ಪಕ್ಷೇತರವಾಗಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ನಮಗೆ ಯಾವತ್ತೂ ಅನ್ಯಾಯ ಮಾಡಿದವರಲ್ಲ. ಅವರು ನನ್ನೊಂದಿಗೆ ಮತ್ತು ಬೆಂಬಲಿಗರ ಜೊತೆ ಮಾತಾಡಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು ನನ್ನ ಮಗ ಪಕ್ಷೇತರನಾಗಿ ಸ್ಪರ್ಧೆ ಮಾಡುವುದಿಲ್ಲ. ನಾವು ಬಿಜೆಪಿ ಪರ ಕೆಲಸ ಮಾಡುತ್ತೇವೆ, ಅದು ಅನಿವಾರ್ಯ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಪ್ರಚಾರದಲ್ಲಿ ಭಾಗಿಯಾಗುತ್ತೇವೆ. ಪುತ್ರ ರಘುಚಂದನ್​ಗೆ ಮುಂದೆ ಉತ್ತಮ ಅವಕಾಶ ನೀಡುವ ವಿಶ್ವಾಸ ಇದೆ ಎಂದರು.

ಟಿಕೆಟ್ ಆಕಾಂಕ್ಷಿಯಾಗಿದ್ದ ರಘುಚಂದ್ರನ್ ಮಾತನಾಡಿ, ಬಿಜೆಪಿ ಅಭ್ಯರ್ಥೀಗೆ ನಾವು ಬೆಂಬಲ ಕೊಡುವ ತೀರ್ಮಾನ ಮಾಡಿದ್ದೇವೆ. ನರೇಂದ್ರ ಮೋದಿ ಕೈಬಲಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಯಡಿಯೂರಪ್ಪ ನಮಗೆ ಗಾಡ್ ಫಾದರ್. ಯಡಿಯೂರಪ್ಪ ನೆರಳಲ್ಲೇ ರಾಜಕೀಯಕ್ಕೆ ಬಂದವರಾಗಿದ್ದೇವೆ. ಯಡಿಯೂರಪ್ಪ ಸಾಹೇಬರನ್ನು ನಂಬಿ ನಾವು ಬಿಜೆಪಿಗೆ ಬಂದಿದ್ದೇವೆ. ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದಾಗ, ಮತ್ತೆ ಬಿಜೆಪಿಗೆ ಬಂದಾಗ ಅಚಲವಾಗಿ ನಿಂತಿದ್ದೆವು. ಯಡಿಯೂರಪ್ಪ ಅವರು ತಂದೆ ಸ್ಥಾನದಲ್ಲಿದ್ದಾರೆ, ಅವರ ಮಾತನ್ನು ಕೇಳುತ್ತೇವೆ ಎಂದರು.

ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದ ರಘುಚಂದ್ರನ್

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ರಘುಚಂದನ್ ಬಂಡಾಯವೆದ್ದಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು. ಏಪ್ರಿಲ್‌ 3 ರಂದು ರಘುಚಂದನ್ ನಾಮಪತ್ರ ಸಲ್ಲಿಕೆಗೆ ಚಿಂತನೆ ಮಾಡಲಾಗಿದೆ ಎಂದು ಚಂದ್ರಪ್ಪ ಅವರೇ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ