ಬಿಜೆಪಿ ಷಡ್ಯಂತ್ರದಿಂದ ಹಿಜಾಬ್ ವಿವಾದ: ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್
ಅಲ್ಪಸಂಖ್ಯಾತ ಹೆಣ್ಮಕ್ಕಳು ಶಿಕ್ಷಣ ಪಡೆಯಲು ಆಗಬಾರದೆಂದು ಬಿಜೆಪಿಯವರು ಮಾಡಿದ ಷಡ್ಯಂತ್ರ ಇದು ಎಂದು ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.
ಚಿತ್ರದುರ್ಗ: ಹಿಜಾಬ್ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court Judgement) ತೀರ್ಪು ಸ್ವಾಗತಿಸುವುದಾಗಿ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ (BK Hariprasad) ಹೇಳಿದ್ದಾರೆ. ಹಿಜಾಬ್ ವಿಚಾರವನ್ನು ಒಂದು ವಿವಾದವಾಗಿ ಬೆಳೆಸಿದ್ದೇ ಬಿಜೆಪಿ. ಇದು ಬಡವರನ್ನು ಹಾಗೂ ಅಲ್ಪಸಂಖ್ಯಾತರನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವ ಷಡ್ಯಂತ್ರ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಜಿಲ್ಲೆಯ ಕೋನಸಾಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಹೆಣ್ಮಕ್ಕಳು ಶಿಕ್ಷಣ ಪಡೆಯಲು ಆಗಬಾರದೆಂದು ಬಿಜೆಪಿಯವರು ಮಾಡಿದ ಷಡ್ಯಂತ್ರ ಇದು. ಅವರು ಮುಂದಿಟ್ಟ ಹೆಜ್ಜೆ ಹಿಂದಕ್ಕೆ ತೆಗೆಯುವಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹಿಜಾಬ್ ವಿವಾದದಿಂದಾಗಿ 17,000 ಹೆಣ್ಣುಮಕ್ಕಳು ಶಾಲೆಗಳಿಂದ ಹೊರಗೆ ಬಂದಿದ್ದಾರೆ. ಕೋನಸಾಗರದಲ್ಲಿ ‘ಕೈ’ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ
ಸುಪ್ರೀಂಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದಾಗಿ ಹೇಳಿದ್ದಾರೆ. ಈ ವಿವಾದದಿಂದ ಯಾರಿಗೂ ಯಾವುದೇ ಒಳಿತು ಆಗುವುದಿಲ್ಲ. ಬಡ, ಅಲ್ಪಸಂಖ್ಯಾತ ಹೆಣ್ಣು ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಇರಬಾರದು ಎಂಬ ಷಡ್ಯಂತ್ರ ಅವರದು. ಹಲವು ಮುಸ್ಲಿಂ ಕುಟುಂಬಗಳ ಮೊದಲ ತಲೆಮಾರು ಶಿಕ್ಷಣ ಕ್ಷೇತ್ರದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಆರೋಪ ಮಾಡಿದರು. ಈಗ ಶಾಲೆಗಳಿಂದ ಹೊರಬಂದಿರುವ ಹೆಣ್ಣುಮಕ್ಕಳ ತಂದೆ-ತಾಯಿ ಬಹಳ ಕಷ್ಟಪಟ್ಟು ಶಾಲೆಗಳಿಗೆ ಕಳಿಸಿದ್ದರು. ಧರ್ಮ ಮತ್ತು ಸರ್ಕಾರ ಎರಡರ ಮಿಶ್ರಣ ಸಲ್ಲದು ಎನ್ನುವ ನೆಹರು ಅವರ ಮಾತನ್ನು ನಾವೆಲ್ಲರೂ ನೆನಪಿನಲ್ಲಿ ಇರಿಸಿಕೊಳ್ಳಬೇಕು ಎಂದು ಅವರು ವಿವರಿಸಿದರು.
Published On - 2:37 pm, Thu, 13 October 22