ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಯೋಜನೆ ಶೀಘ್ರವೇ ಪೂರ್ಣಗೊಳಿಸುವಂತೆ ಹೋರಾಟಗಾರರ ಆಗ್ರಹ
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಯೋಜನೆ ಮದ್ಯ ಕರ್ನಾಟಕದ ಜನರ ದಶಕಗಳ ಕನಸು. ಆದರೆ ಚುನಾವಣೆ ವೇಳೆ ಅಂಗೈಯಲ್ಲೇ ಸ್ವರ್ಗ ತೋರಿಸುವ ರಾಜಕಾರಣಿಗಳು ಗೆದ್ದ ಬಳಿಕ ನಿರ್ಲಕ್ಷ್ಯ ತೋರುತ್ತ ಬಂದಿದ್ದಾರೆ. ಇದೀಗ ತುಮಕೂರು ಸಂಸದರೇ ಕೇಂದ್ರದಲ್ಲಿ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದು ನೇರ ರೈಲು ಮಾರ್ಗದ ಕನಸು ಚಿಗುರಿದೆ.
ದಾವಣಗೆರೆ, ಜುಲೈ.03: ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು (Davanagere Chitradurga Tumkur Direct Train) ಮಾರ್ಗಕ್ಕಾಗಿ ದಶಕಗಳಿಂದ ಮದ್ಯ ಕರ್ನಾಟಕದ ಜನರು ಹೋರಾಟ ನಡೆಸುತ್ತಿದ್ದಾರೆ. ನೇರ ರೈಲು ಮಾರ್ಗಕ್ಕೆ ಚಾಲನೆ ಸಿಕ್ಕರೂ ಕಾಮಗಾರಿ ಕುಂಟುತ್ತ ಸಾಗಿದೆ. ತುಮಕೂರು ಸಂಸದರೇ (V.Somanna) ಕೇಂದ್ರದಲ್ಲಿ ರಾಜ್ಯ ರೈಲ್ವೆ ಇಲಾಖೆ ಸಚಿವರಾಗಿದ್ದು ಕನಸು ಚಿಗುರಿದೆ. ಸುಮಾರು 2 ದಶಕಕ್ಕೂ ಹೆಚ್ಚು ಸಮಯದಿಂದ ಮದ್ಯ ಕರ್ನಾಟಕದ ಜನರು ನೇರ ರೈಲು ಮಾರ್ಗಕ್ಕಾಗಿ ರೈಲ್ವೆ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸುತ್ತ ಬಂದಿದ್ದಾರೆ. ಪರಿಣಾಮ ನೇರ ರೈಲು ಮಾರ್ಗ ಯೋಜನೆಗೆ ಚಾಲನೆ ಸಿಕ್ಕಿದೆಯಾದ್ರೂ ಇನ್ನೂ ಭೂಸ್ವಾಧೀನ ಪ್ರಕ್ರಿಯೆಯೇ ಬಹುತೇಕ ಪೂರ್ಣಗೊಂಡಿಲ್ಲ.
ಪ್ರತಿ ಚುನಾವಣೆಯಲ್ಲಿ ನೇರ ರೈಲು ಮಾರ್ಗದ ಕನಸು ಬಿತ್ತುವ ರಾಜಕಾರಣಿಗಳು ಗೆದ್ದ ಬಳಿಕ ಕಡೆಗಣಿಸುತ್ತ ಬಂದಿದ್ದಾರೆ. ಈ ಸಲ ಮಾಜಿ ಡಿಸಿಎಂ, ಹಿರಿಯ ರಾಜಕಾರಣಿ ಗೋವಿಂದ ಕಾರಜೋಳ ಸಂಸದರಾಗಿದ್ದಾರೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದ್ದು ತುಮಕೂರಿನ ಸಂಸದ ವಿ.ಸೋಮಣ್ಣ ಕೇಂದ್ರದಲ್ಲಿ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದಾರೆ. ಹೀಗಾಗಿ, ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗಕ್ಕೆ ಆದ್ಯತೆ ನೀಡಿ ಶೀಘ್ರ ಯೋಜನೆ ಪೂರ್ಣಗೊಳಿಸಬೇಕೆಂಬುದು ರೈಲ್ವೆ ಹೋರಾಟ ಸಮಿತಿಯ ಆಗ್ರಹ.
ಇದನ್ನೂ ಓದಿ: ಅಮರನಾಥ ಯಾತ್ರೆಯಿಂದ ಹಿಂದಿರುಗುತ್ತಿದ್ದ ಬಸ್ ಬ್ರೇಕ್ಫೇಲ್, ಬಸ್ನಿಂದ ಹಾರಿ ಗಾಯಗೊಂಡ ಪ್ರಯಾಣಿಕರು
ಇನ್ನು ಈ ಬಗ್ಗೆ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ್ ಅವ್ರನ್ನು ಕೇಳಿದ್ರೆ ಅಧಿವೇಶನ ಮುಗಿದ ಬಳಿಕ ಈ ಬಗ್ಗೆ ಅಧಿಕಾರಿಗಳ ಸಭೆ ಕರೆಯುತ್ತೇನೆ. ಸ್ಥಳ ಪರಿಶೀಲನೆಯನ್ನು ಮಾಡುತ್ತೇನೆ. ಶೇ.80ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಐವತ್ತು ಪರ್ಸೆಂಟ್ ಹಣವನ್ನು ರಾಜ್ಯ ಸರ್ಕಾರ ಮೀಸಲಿಡಬೇಕಾಗುತ್ತದೆ. ಹೀಗಾಗಿ, ಕೇಂದ್ರದ ರೈಲ್ವೆ ಮಂತ್ರಿ ಅಶ್ವಿನ್ ವೈಷ್ಣವ್ ಅವ್ರನ್ನೂ ಭೇಟಿ ಮಾಡಿದ್ದು ತುಮಕೂರು ಸಂಸದ, ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಗಮನಕ್ಕೂ ತಂದಿದ್ದೇನೆ. ಶೀಘ್ರ ನೇರ ರೈಲು ಮಾರ್ಗ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಮದ್ಯ ಕರ್ನಾಟಕದ ಜನರಲ್ಲಿ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ಕನಸು ಚಿಗುರಿದೆ. ಆ ಮೂಲಕ ರಾಜ್ಯದ ರಾಜಧಾನಿಗೆ ಕಡಿಮೆ ಖರ್ಚಿನಲ್ಲಿ ಕಡಿಮೆ ಸಮಯದಲ್ಲಿ ತಲುಪುವ ಸಮಯ ಸಮೀಪಿಸುತ್ತಿದೆ. ಅಷ್ಟೇ ಅಲ್ಲ, ರೈಲ್ವೆ ಕನೆಕ್ಟಿವಿಟಿ ಇಲ್ಲದೆ ಸೊರಗಿದ್ದ ಪ್ರವಾಸೋದ್ಯಮ, ವಾಣಿಜೋದ್ಯಮ ಬೆಳವಣಿಗೆಗೂ ಈ ಯೋಜನೆ ಸಹಕಾರಿ ಆಗಲಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೀಘ್ರ ನೇರ ರೈಲು ಮಾರ್ಗ ಯೋಜನೆ ಪೂರ್ಣಗೊಳಿಸಬೇಕಿದೆ ಎಂಬುದು ದುರ್ಗದ ಜನರ ಆಗ್ರಹ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ