ಕಾಯಕವೇ ಕೈಲಾಸ ಎಂದು ದುಡಿಯುವ ಕತ್ತೆ (Donkey) ಎಂಬ ಪ್ರಾಣಿಯನ್ನು ಜನ ಬಹಳವಾಗಿ ಕೇವಲವಾಗಿಯೇ ಕಾಣುತ್ತಾರೆ. ಆದ್ರೆ, ಕೋಟೆನಾಡಿನ ಅದೊಂದು ಗ್ರಾಮದ ಜನರು ಮಾತ್ರ ಕತ್ತೆಯನ್ನು ದೇವರಂತೆ ಪೂಜಿಸುತ್ತಾರೆ. ಅಷ್ಟೇ ಅಲ್ಲ, ಕತ್ತೆ ಸಾವಿಗೀಡಾದ ವೇಳೆ ಗ್ರಾಮಸ್ಥರೆಲ್ಲಾ ಸೇರಿ ಸಮಾಧಿ ನಿರ್ಮಿಸಿ ಶ್ರದ್ಧಾಂಜಲಿಯನ್ನು ಸಹ ಸಲ್ಲಿಸಿದ್ದಾರೆ. ಏನು ವಿಶೇಷ ಅಂತೀರಾ, ಈ ಕುರಿತು ವರದಿ ಇಲ್ಲಿದೆ. ಗ್ರಾಮದಲ್ಲಿ ಸಾವಿಗೀಡಾದ ಕತ್ತೆಗೆ ಸಮಾಧಿ ನಿರ್ಮಿಸಿ (Last rites) ಪೂಜೆ ಸಲ್ಲಿಸಿದ್ದಾರೆ. ಕತ್ತೆಯ ಹೆಸರಲ್ಲಿ ಸಲ್ಲಿಸಿರುವ ಭಾವಪೂರ್ಣ ಶ್ರದ್ದಾಂಜಲಿ ಇದಾಗಿದೆ. ಇದೇ ವೇಳೆ ಗ್ರಾಮದಲ್ಲಿ ನೂರಾರು ಜನ ಸೇರಿ ಅನ್ನ ಸಂತರ್ಪಣೆ ಮಾಡಿದ್ದಾರೆ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ (Chitradurga) ಜಿಲ್ಲೆ ಹೊಳಲ್ಕೆರೆ (Madderu) ತಾಲೂಕಿನ ಮದ್ದೇರು (Madderu) ಗ್ರಾಮದಲ್ಲಿ. ಹೌದು, ಪಕ್ಕದ ಮಲಸಿಂಗನಹಳ್ಳಿ ಗ್ರಾಮದ ತಿರುಮಲ ಆಂಜನೇಯಸ್ವಾಮಿ ದೇಗುಲದ ಉತ್ಸವ ಸಂದರ್ಭದಲ್ಲಿ ಕತ್ತೆಯನ್ನು ಪೂಜಿಸಲಾಗುತ್ತದೆ. ವಿಶೇಷ ಉತ್ಸವದ ಸಂದರ್ಭದಲ್ಲಿ ಕತ್ತೆಯೊಂದು ತಾನಾಗಿಯೇ ಗ್ರಾಮಕ್ಕೆ ಆಗಮಿಸುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ. ಬರಗಾಲ ಆವರಿಸಿದ ವೇಳೆ ಕತ್ತೆಗೆ ಪೂಜೆ ಸಲ್ಲಿಸುವ ವಿಶೇಷ ಆಚರಣೆಯೂ ಇದೆ.
ಆ ವಿಶೇಷ ಆಚರಣೆಯಿಂದ ಈ ಭಾಗದ ನಾಡು ಸಮೃದ್ಧಿಯಾಗಿರುತ್ತದೆ ಎಂಬ ನಂಬಿಕೆ ಜನರದ್ದಾಗಿದೆ. ಈ ಮಧ್ಯೆ, ಮದ್ದೇರು ಗ್ರಾಮದಲ್ಲಿ
ಕಳೆದೊಂದು ವಾರದಿಂದ ಕಾಣಿಸಿಕೊಂಡಿದ್ದ ಕತ್ತೆ ಅನಾರೋಗ್ಯದಿಂದ ಸಾವಿಗೀಡಾಗಿತ್ತು. ಮಲಸಿಂಗನಹಳ್ಳಿಯ ತಿರುಮಲ ಆಂಜನೇಯ ಸ್ವಾಮಿ ದೇಗುಲದಲ್ಲಿ ಪೂಜಿಸಲ್ಪಡುವ ಕತ್ತೆ ಇದಾಗಿದೆ ಎಂದು ನಂಬಿದ ಜನರು ಶವಸಂಸ್ಕಾರ ನೆರವೇರಿಸಿದ್ದಾರೆ. ಅಂತೆಯೇ ಮೂರನೇ ದಿನ ಅನ್ನಸಂತರ್ಪಣೆ ಕಾರ್ಯಕ್ರಮದ ಮೂಲಕ ಸಾಂಪ್ರದಾಯಿಕ ಕಾರ್ಯ ಮುಗಿಸಿದ್ದಾರೆ.
Also Read:
ಕತ್ತೆ ಅಂದರೆ ದೈವಸ್ವರೂಪ ಎಂದೇ ನಂಬಿರುವ ಈ ಭಾಗದ ಜನರು ಸೇಜಿ ಎಂದೂ ಅದನ್ನು ಕರೆಯುತ್ತಾರೆ. ಅಂತೆಯೇ ದೇವರೂಪದಲ್ಲಿ ಕಾಣುವ ಕತ್ತೆ ಆಕಸ್ಮಿಕವಾಗಿ ಸಾವಿಗೀಡಾದ ಕಾರಣ ಸಾಂಪ್ರದಾಯಿಕವಾಗಿ ಶವಸಂಸ್ಕಾರ ನೆರವೇರಿಸಿದ್ದಾರೆ. ಈ ಭಾಗದ ಹತ್ತು ಹಳ್ಳಿಯ ಜನರೂ ಸೇರಿ ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರ ನೆರವೇರಿಸಲಾಗಿದೆ. ಅಲ್ಲದೆ ಪ್ರತಿ ವರ್ಷವೂ ಇದೇ ದಿನ ಅನ್ನಸಂತರ್ಪಣೆ ನೆರವೇರಿಸಲು ನಿರ್ಧರಿಸಿದ್ದಾರೆ ಎಂದು ಗ್ರಾಮಸ್ಥ ಶ್ರೀನಿವಾಸ್ ಹೇಳಿದ್ದಾರೆ.
Also Read:
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಮದ್ದೇರು ಗ್ರಾಮದಲ್ಲಿ ಸಾವಿಗೀಡಾದ ಕತ್ತೆಗೆ ಸಾಂಪ್ರದಾಯಿಕ ಶವಸಂಸ್ಕಾರ ಮಾಡಲಾಗಿದೆ. ಅಲ್ಲದೆ ಸಮಾಧಿ ನಿರ್ಮಿಸಿ ಅನ್ನ ಸಂತರ್ಪಣೆ ಮಾಡುವ ಮೂಲಕ ವಿಶೇಷ ಆಚರಣೆ ಮಾಡಲಾಗಿದೆ. ಕತ್ತೆಯನ್ನು ದೈವಸ್ವರೂಪಿ ಎಂದೇ ಭಾವಿಸುವ ಈ ಭಾಗದ ಜನರು ದೇವರ ಕಾರ್ಯದಂತೆ ವಿಶೇಷ ಆಚರಣೆ ಮೂಲಕ ಗೌರವ ಸಲ್ಲಿಸಿದ್ದಾರೆ.
ವರದಿ: ಬಸವರಾಜ ಮುದನೂರ್, ಟಿವಿ 9, ಚಿತ್ರದುರ್ಗ