ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ, ಭಾವೈಕ್ಯತೆಗೆ ಧಕ್ಕೆಯಾಗಿದೆ: ಈ ವೇಳೆ ನಾವು ಸುಮ್ಮನಿದ್ದರೆ ದೇಶದ್ರೋಹಿಗಳಾಗುತ್ತೇವೆ- ಸಾಹಿತಿ ಎಸ್.ಜಿ ಸಿದ್ಧರಾಮಯ್ಯ
ರಾಹುಲ್‌ಗಾಂಧಿಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಯಾತ್ರೆ ವೇಳೆ ರಾಹುಲ್ ನಡೆದುಕೊಳ್ಳುವ ರೀತಿ ಕಂಡಿದ್ದೇವೆ. ರಾಹಿಲ್ ಹಿ ಈಸ್ ಡೌನ್ ಟೂ ಅರ್ಥ್ ಎಂಬಂದು ಮನವರಿಕೆ ಆಗಿದೆ.
ಚಿತ್ರದುರ್ಗ: ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ, ಭಾವೈಕ್ಯತೆಗೆ ಧಕ್ಕೆ ಇದೆ. ಈ ಆಪತ್ತಿನ ವೇಳೆ ಕಣ್ಣು, ಕಿವಿ, ಬಾಯಿ ಮುಚ್ಚಿರಬಾರದು. ನಾವು ಮುಂದಿನ ಪೀಳಿಗೆ ಎದುರು ತಪ್ಪಿತಸ್ಥರಾಗುತ್ತೇವೆ. ಬಾಯಿಮುಚ್ಚಿಕೊಂಡು ಇದ್ದರೆ ದೇಶದ್ರೋಹಿಗಳಾಗುತ್ತೇವೆ ಎಂದು ಚಿತ್ರದುರ್ಗದಲ್ಲಿ ಸಾಹಿತಿ ಎಸ್.ಜಿ ಸಿದ್ಧರಾಮಯ್ಯ ಹೇಳಿದರು. ಭಾರತ್ ಜೋಡೋ ಯಾತ್ರೆ ಬೆಂಬಲಿಸಿ ಸಾಹಿತಿಗಳು, ರೈತ, ಕಾರ್ಮಿಕ ಮುಖಂಡರಿಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದೆ ನಡೆದ ರಥ ಯಾತ್ರೆಗಳಿಗೆ ಕೋಮುಸಂಘರ್ಷದ ಮಿತಿಯಿದೆ. ಭಾರತ್ ಜೋಡೋ ಯಾತ್ರೆಗೆ ಬಹುತ್ವ ಭಾರತದ ವ್ಯಾಪ್ತಿಯಿದೆ. ನಿರುದ್ಯೋಗ ನಿವಾರಣೆ ಮಾಡುತ್ತೇವೆಂದು ಸುಳ್ಳು ಹೇಳಿದ್ದರು. ಯುವ ಸಮೂಹಕ್ಕೆ ಉದ್ಯೋಗ ಸೃಷ್ಠಿ ಆಗಲಿಲ್ಲ. ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಯಿಂದ ಬಡವರು ಬದುಕಲು ಸಾಧ್ಯವೇ? ಕೋಮುವಾದಿ ಪಕ್ಷ ಕಿತ್ತೊಗೆಯದ ಹೊರತು ದೇಶಕ್ಕೆ ಭವಿಷ್ಯವಿಲ್ಲ. ಮನುವಾದ ತಂದು ಸಮಾಜ ಹೊಡೆಯುವ ಕುಕೃತ್ಯ ನಡೆದಿದೆ ಎಂದು ಹೇಳಿದರು.
ದೇಶ ಹೊಡೆಯುವ ಪಕ್ಷ ವಿರೋಧಿಸುವುದು ನಿಜ ದೇಶಪ್ರೇಮ. ನೂರಾರು ಕೋಟಿ ಮೋಸ ಮಾಡಿ ಕೆಲವರು ವಿದೇಶಕ್ಕೆ ಓಡಿದ್ದಾರೆ. ಅಂಥವರನ್ನು ಈಗಿನ ಸರ್ಕಾರಗಳು ಬೆಂಬಲಿಸುತ್ತಿವೆ. ರಾಹುಲ್ ಗಾಂಧಿ ಯುವಕರ ಮನ ಅರ್ಥ ಮಾಡಿಕೊಂಡು ಬೆಳೆಯುತ್ತಿರುವ ರಾಜಕಾರಣಿ ಎಂಬುದು ಗೊತ್ತಾಗುತ್ತಿದೆ. ಈವರೆಗೆ ರಾಹುಲ್‌ಗಾಂಧಿಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಯಾತ್ರೆ ವೇಳೆ ರಾಹುಲ್ ನಡೆದುಕೊಳ್ಳುವ ರೀತಿ ಕಂಡಿದ್ದೇವೆ. ರಾಹಿಲ್ ಹಿ ಈಸ್ ಡೌನ್ ಟೂ ಅರ್ಥ್ ಎಂಬಂದು ಮನವರಿಕೆ ಆಗಿದೆ.
ಕಾಂಗ್ರೆಸ್ ಪಕ್ಷಕ್ಕೆ ನಾವು ಬೆಂಬಲ ನೀಡುತ್ತಿಲ್ಲ: ಪ್ರಕಾಶ ಕಮ್ಮಾಡಿ
ನಿವೃತ್ತ ವಿಜ್ಞಾನಿ ಪ್ರಕಾಶ ಕಮ್ಮಾಡಿ ಮಾತನಾಡಿ ದೇಶದಲ್ಲಿ ಜನತಂತ್ರ ವ್ಯವಸ್ಥೆ ಸರಿದಾರಿಯಲ್ಲಿ ಸಾಗುತ್ತಿಲ್ಲ. ಒಂದು ಮನೆಗೆ ಬೆಂಕಿ ಬಿದ್ದಿದೆ, ಅದನ್ನು ನಂದಿಸಬೇಕು. ಕಾಂಗ್ರೆಸ್ ಪಕ್ಷದಿಂದ ಭಾರತ್ ಜೋಡೋ ಮೂಲಕ ಬೆಂಕಿ ನಂದಿಸುವ ಕೆಲಸವಾಗುತ್ತಿದೆ. ಭಾರತ ಜೋಡೋ ಯಾತ್ರೆಗೆ ಭಾವೈಕ್ಯ ಕರ್ನಾಟಕ ವೇದಿಕೆ ಸಾಥ್ ನೀಡಿದೆ. ಕಾಂಗ್ರೆಸ್ ಪಕ್ಷಕ್ಕೆ ನಾವು ಬೆಂಬಲ ನೀಡುತ್ತಿಲ್ಲ. ಕಾಂಗ್ರೆಸ್ ತಪ್ಪು ಮಾಡಿದರೆ ಕಾಂಗ್ರೆಸ್ಸನ್ನು ಟೀಕಿಸುತ್ತೇವೆ. ಹೊಡೆದಾಳುವ ಪ್ರವೃತ್ತಿ, ಕೋಮು ಸಂಘರ್ಷ ನಡೆಯುತ್ತಿದೆ. ದೇಶ ಒಗ್ಗೂಡಿಸಲು ಭಾರತ್ ಜೋಡೋ ಯಾತ್ರೆ ಅಗತ್ಯವಿದೆ. ರಾಜ್ಯದ ನೂರಾರು ಸಾಹಿತಿಗಳು ಯಾತ್ರೆಗೆ ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಚಿಕ್ಕನಾಯಕನಹಳ್ಳಿ ತಲುಪಿದ ‘ಭಾರತ್ ಜೋಡೋ ಪಾದಯಾತ್ರೆ’
ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ಪಾದಯಾತ್ರೆ’ಯು (Bharat Jodo Yatra) ಇಂದು ಚಿಕ್ಕನಾಯಕನಹಳ್ಳಿ ತಲುಪಿದೆ. ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ತಮ್ಮನ್ನು ನೋಡಲು ಬಂದಿದ್ದ ಮಾನ್ವಿ ಹಾಗೂ ಅನ್ವಿಕಾ ಎಂಬ ಮಕ್ಕಳನ್ನು ಕರೆದು ಫೋಟೊ ತೆಗೆಸಿಕೊಂಡರು. ರಾಹುಲ್ ನೋಡಲು ಬಂದಿದ್ದ ಕುಟುಂಬಸ್ಥರು ಕಾಂಗ್ರೆಸ್ ನಾಯಕನ ಸರಳ, ಸಜ್ಜನಿಕೆ ಕಂಡು ಖುಷಿಯಾದರು. ಪಟ್ಟಣದಲ್ಲಿ ಮುಂಜಾನೆ ಪಾದಯಾತ್ರೆಯನ್ನು ಅಂತ್ಯಗೊಳಿಸಿ ಹಿಂದಿರುಗುವ ಮೊದಲು ಮಗುವೊಂದನ್ನು ಎತ್ತಿಕೊಂಡು ನಿಂತಿದ್ದ ಮಹಿಳೆಯನ್ನು ರಾಹುಲ್ ಹತ್ತಿರ ಕರೆದರು. ಬಳಿಕ ಆ ಪುಟ್ಟ ಮಗುವಿಗೆ ಚಾಕೊಲೇಟ್ ಕೊಟ್ಟರು. ರಾಹುಲ್ ಮಗು ಎತ್ತಿಕೊಂಡಿದ್ದು ನೋಡಿದ ಮಹಿಳೆಯರು ಖುಷಿಪಟ್ಟರು.
ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಸರ್ಕಲ್ನಲ್ಲಿ ವಾಲ್ಮೀಕಿ ಚಿತ್ರಪಟಕ್ಕೆ ರಾಹುಲ್ ಪುಷ್ಪ ನಮನ ಸಲ್ಲಿಸಿದರು. ಪಟ್ಟಣದ ಕನಕ ಭವನದಲ್ಲಿ ರಾಹುಲ್ ಅವರಿಗೆ ಕಂಬಳಿ ನೀಡಲು ಕೆಲವರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಭದ್ರತಾ ದೃಷ್ಟಿಯಿಂದ ಕಂಬಳಿ ನಿರಾಕರಿಸಲು ರಾಹುಲ್ ಅವರ ಭದ್ರತಾ ತಂಡವು ನಿರಾಕರಿಸಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.