ಚಿತ್ರದುರ್ಗ: ಭ್ರಷ್ಟಾಚಾರ ಹುಟ್ಟುಹಾಕಿದ್ದೇ ಬಿಜೆಪಿ ಎಂದು ಮಾಜಿ ಸಚಿವ ಹೆಚ್. ಆಂಜನೇಯ (H Anjaneya) ಚಿತ್ರದುರ್ಗದಲ್ಲಿ ಆರೋಪಿಸಿದ್ದಾರೆ. ಹೆಚ್.ಆಂಜನೇಯ ಹಿಂದುಳಿದ ವರ್ಗಗಳ ಇಲಾಖೆಯ ಸಚಿವರಾಗಿದ್ದಾಗ ವಸತಿ ನಿಲಯಗಳಿಗೆ ಹಾಸಿಗೆ, ದಿಂಬು ಮತ್ತು ಮಂಚ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ (BJP) ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹಾಸಿಗೆ, ದಿಂಬು ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ ಎಂದು ಸಮರ್ಥಿಸಿಕೊಂಡರು.
‘ಕಮಲ’ ನೀರಿಲ್ಲದೆ ಕೆಸರಿನಲ್ಲಿ ಒಣಗಿ ಪುಡಿಪುಡಿ ಆಗುತ್ತಿದೆ. ಕರ್ನಾಟಕ ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. ಎಲ್ಲೆಡೆ ಕಾಂಗ್ರೆಸ್ ಗಾಳಿ ಬೀಸುತ್ತಿದ್ದು ‘ಕಮಲ’ ಒಣಗುತ್ತಿದೆ. ರಾಜ್ಯ ಬಿಜೆಪಿ ಸರ್ಕಾರ ನಂ. 1 ಭ್ರಷ್ಟ ಸರ್ಕಾರ, 40% ಸರ್ಕಾರ ಎಂದು ಹೇಳಿದರು.
ತನಿಖೆಗೆ ಆದೇಶಿಸಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಕಳೆದ ವರ್ಷ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಟಿವಿ9 ವರದಿಯನ್ನು ಉಲ್ಲೇಖಿಸಿ ವಸತಿ ನಿಲಯಗಳಿಗೆ ದಿಂಬು, ಹಾಸಿಗೆ, ಮಂಚ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ತನಿಖೆಗೆ ಆದೇಶಿಸಿದ್ದರು.
ಈ ಬಗ್ಗೆ ಮಾತನಾಡಿದ್ದ ಅವರು ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಕೈ ಸೇರುತ್ತಲೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಕೋಟಿ ಕೋಟಿ ರೂಪಾಯಿ ಗೋಲ್‌ಮಾಲ್ ಆಗಿರುವ ಬಗ್ಗೆ ಅತ್ಯಂತ ಗಂಭೀರವಾದ ಆರೋಪ ಕೇಳಿಬಂದಿದೆ. ಅನುದಾನ ಉಳಿಕೆ ಹಣವನ್ನು ಬಳಕೆ ಮಾಡುವ ಹೆಸರಿನಲ್ಲಿ ಅವ್ಯವಹಾರ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಇಲಾಖೆಯ 9 ಕೋಟಿ 81 ಲಕ್ಷ ರೂಪಾಯಿ ಹಣದಲ್ಲಿ ಭಾರೀ ಅಕ್ರಮ ಮಾಡಿರುವ ಅನುಮಾನ ಹೊರಬಿದ್ದಿದೆ.
ಮಂಚ, ಹಾಸಿಗೆ, ದಿಂಬು ಖರೀದಿಯಲ್ಲಿ ಭಾರೀ ಅವ್ಯವಹಾರ ಮಾಡಲಾಗಿದೆ. ಕರ್ನಾಟಕ ರಾಜ್ಯ ತೆಂಗಿನ ನಾರು ನಿಗಮದ ಜೊತೆ ಸೇರಿ ಅಕ್ರಮ ಎಸಗಲಾಗಿದೆ ಎಂದು ಆರ್ಟಿಐ ಕಾರ್ಯಕರ್ತ ವಾಗೀಶ್ ದಾಖಲೆ ಸಮೇತ ಆರೋಪ ಮಾಡಿದ್ದು, ಕಟ್ಟುನಿಟ್ಟಿನ ತನಿಖೆಗೆ ಆಗ್ರಹಿಸಿದ್ದಾರೆ.
ಮಾರುಕಟ್ಟೆಯಲ್ಲಿ 13 ಸಾವಿರ ರೂಪಾಯಿ ಬೆಲೆ ಇರುವ ಮಂಚಕ್ಕೆ 24,577 ರೂಪಾಯಿ ಪಾವತಿ ಮಾಡಲಾಗಿದೆ. ಜಿಲ್ಲೆಯ 102 ಹಾಸ್ಟೆಲ್ಗಳಿಗೆ ಬರೊಬ್ಬರಿ 1124 ಮಂಚಗಳ ಖರೀದಿ ಮಾಡಲಾಗಿದ್ದು, ಇದಕ್ಕಾಗಿ 2,76,49,125 ರೂಪಾಯಿ (2 ಕೋಟಿ 76 ಲಕ್ಷದ 49 ಸಾವಿರದ 125 ರೂ) ಪಾವತಿಸಲಾಗಿದೆ. ಮಾರುಕಟ್ಟೆ ದರಕ್ಕಿಂತ 1,30,24,125 ರೂಪಾಯಿ ಹೆಚ್ಚಿಗೆ ಪಾವತಿ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
RTI ಕಾರ್ಯಕರ್ತ ವಾಗೀಶ್ ದಾಖಲೆ ಸಮೇತ ಹಗರಣವನ್ನು ಬಯಲು ಮಾಡಿದ್ದು, ಹಾಸಿಗೆ ಖರೀದಿಯಲ್ಲೂ ಭಾರೀ ಗೋಲ್‌ಮಾಲ್ ಮಾಡಿರುವ ಆರೋಪ ಹೊರಿಸಿದ್ದಾರೆ. 3366 ಹಾಸಿಗೆ ಖರೀದಿಗೆ ಒಟ್ಟು 2,15,82,792 ರೂ ಪಾವತಿ ಮಾಡಿದ್ದಾರೆ. ಇದನ್ನು ತೆಂಗಿನ ನಾರು ನಿಗಮದಿಂದಲೇ ಖರೀದಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ 3,200 ರೂಪಾಯಿ ಬೆಲೆ ಇರುವ ಹಾಸಿಗೆಗೆ 6,412 ರೂಪಾಯಿ ಪಾವತಿ ಮಾಡಲಾಗಿದೆ. ಹಾಸಿಗೆ ಖರೀದಿಯಲ್ಲೂ 1,08,11,592 ರೂಪಾಯಿ ಗುಳುಂ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ