ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಗೊಲ್ಲ ಪದ ಸೇರಿಸದಿರಲು ಒತ್ತಾಯ: ಗುಂಪುಗಳ ನಡುವೆ ವಾಗ್ವಾದ

ನಿಗಮದ ಹೆಸರಿನಲ್ಲಿ ಕಾಡುಗೊಲ್ಲ ಪದದ ಜೊತೆಗೆ ಗೊಲ್ಲ ಎಂಬ ಪದವೂ ಇರಬೇಕು ಎಂದು ಗೊಲ್ಲ ಸಮುದಾಯ ಒತ್ತಾಯಿಸುತ್ತಿದೆ. ಇದನ್ನು ಕಾಡುಗೊಲ್ಲ ಸಮುದಾಯದ ಸಂಘಟನೆಗಳು ವಿರೋಧಿಸುತ್ತಿವೆ.

ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಗೊಲ್ಲ ಪದ ಸೇರಿಸದಿರಲು ಒತ್ತಾಯ: ಗುಂಪುಗಳ ನಡುವೆ ವಾಗ್ವಾದ
ನಿಗಮ ಸ್ಥಾಪನೆಗೆ ಕಾಡುಗೊಲ್ಲರ ಹೋರಾಟ ಮತ್ತು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 07, 2021 | 4:20 PM

ಚಿತ್ರದುರ್ಗ: ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರಿಗೆ ಸಂಬಂಧಿಸಿದ ವಿವಾದ ಇನ್ನೂ ಮುಂದುವರಿದಿದೆ. ನಿಗಮದ ಹೆಸರಿನಲ್ಲಿ ಕಾಡುಗೊಲ್ಲ ಪದದ ಜೊತೆಗೆ ಗೊಲ್ಲ ಎಂಬ ಪದವೂ ಇರಬೇಕು ಎಂದು ಗೊಲ್ಲ ಸಮುದಾಯ ಒತ್ತಾಯಿಸುತ್ತಿದೆ. ಇದನ್ನು ಕಾಡುಗೊಲ್ಲ ಸಮುದಾಯದ ಸಂಘಟನೆಗಳು ವಿರೋಧಿಸುತ್ತಿವೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ನಿಗಮದ ಹೆಸರಿನ ವಿಚಾರ ಹಲವು ಗೊಂದಲಗಳಿಗೆ ಕಾರಣವಾಗಿದೆ. ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ‘ಗೊಲ್ಲ’ ಪದ ಸೇರಿಸಬಾರದು ಎಂದು ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮಂಗಳವಾರ ಹಿರಿಯೂರು ತಾಲ್ಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭ ಹೆಸರು ಬದಲಾವಣೆಯ ಪರವಾಗಿದ್ದವರು ಹಾಗೂ ವಿರೋಧಿಸುವವರ ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಕಾಡುಗೊಲ್ಲ ನಿಗಮದ ಹೆಸರು ಬದಲಾವಣೆಯ ಪರವಾಗಿದ್ದಾರೆ. ಗೊಲ್ಲ-ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಹೆಸರು ಬದಲಿಸಬೇಕೆಂದು ಶಾಸಕರೇ ಪತ್ರ ಬರೆದಿದ್ದರು ಎಂದು ಈ ಸಂದರ್ಭ ಹಲವರು ಆರೋಪಿಸಿದರು. ಈ ವೇಳೆ ಶಾಸಕಿ ಪೂರ್ಣಿಮಾ ಬೆಂಬಲಿಗರು ಹಾಗೂ ಕಾಡುಗೊಲ್ಲ ಸಮಾಜದ ಮುಖಂಡರ ನಡುವೆ ವಾಗ್ವಾದ ನಡೆಯಿತು.

ಬದಲಾವಣೆಗೆ ವಿರೋಧ ನಿಗಮದ ಹೆಸರಿಗೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿರುವ ಕಾಡುಗೊಲ್ಲರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಈರಣ್ಣ, ರಾಜ್ಯ ಕಾಡು ಗೊಲ್ಲರ ಅಭಿವೃದ್ಧಿ ನಿಗಮಕ್ಕೆ ಸರ್ಕಾರವು ಗೊಲ್ಲ-ಕಾಡುಗೊಲ್ಲರ ಅಭಿವೃದ್ಧಿ ನಿಗಮ ಎಂದು ಹೆಸರು ಬದಲಾವಣೆ ಮಾಡಲು ಮುಂದಾಗಿರುವುದು ಸರಿಯಲ್ಲ. ಹೆಸರು ಬದಲಿಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಹಿಂದೆ ಶಿರಾ ಉಪಚುನಾವಣೆ ಸಮಯದಲ್ಲಿ ಚುನಾವಣೆ ಗೆಲ್ಲುವ ಉದ್ದೇಶದಿಂದ ಕಾಡುಗೊಲ್ಲರ ಮತ ಸೆಳೆಯಲು, ಕಾಡುಗೊಲ್ಲರ ಅಭಿವೃದ್ಧಿ ನಿಗಮ ಆರಂಭಕ್ಕೆ ಸರ್ಕಾರ ಆದೇಶ ನೀಡಿತ್ತು. ಇದರಿಂದ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ಸುಲಭವಾಯಿತು. ಆದರೆ ಈಗ ಗೊಲ್ಲ-ಕಾಡುಗೊಲ್ಲರ ಅಭಿವೃದ್ಧಿ ನಿಗಮ ಎಂದು ಹೆಸರು ಬದಲಾಯಿಸಲು ಮುಂದಾಗಿರುವುದು ಸರಿಯಲ್ಲ. ಇದರಿಂದ ಹಿಂದುಳಿದ ಬುಡಕಟ್ಟು ಸಮುದಾಯಕ್ಕೆ ಕಾಡುಗೊಲ್ಲ ಸಮುದಾಯಕ್ಕೆ ಅನ್ಯಾಯವಾಗಲಿದೆ. ಈಗಾಗಲೇ ಹೇಳಿರುವ ಪ್ರಕಾರ ಕಾಡುಗೊಲ್ಲರ ಅಭಿವೃದ್ಧಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರ ನೇಮಕ ಮಾಡಲಾಗಿದೆ. ಜೊತೆಗೆ ಐದು ಕೋಟಿ ಅನುದಾನ ನೀಡಲಾಗಿದೆ ಎಂದರು.

ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಬಳಿಕ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಬದಲಾಗಿ, ಗೊಲ್ಲ-ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಹೆಸರು ಬದಲಿಸುವಂತೆ ಒತ್ತಾಯ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುಮೋದನೆ ಹೊರಡಿಸಲಾಗಿದೆ. ಹೆಸರು ಬದಲಾವಣೆ ಮಾಡಿದರೆ ಸಮುದಾಯದಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಇದನ್ನೂ ಓದಿ: ಚಿತ್ರದುರ್ಗ: ಕಾಡುಗೊಲ್ಲ ಸಮುದಾಯದ ಅಪರೂಪ ಸಾಂಪ್ರದಾಯಿಕ ಆಚರಣೆ ಅನಾವರಣ ಇದನ್ನೂ ಓದಿ: ಬೆಳಗಿನ ಜಾವ ಗೊಲ್ಲಹಳ್ಳಿ ಗೇಟ್ ಬಳಿ ಕಾರು-ಬಸ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು