ಚಿತ್ರದುರ್ಗ, ಮಾ.31: ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ (M Chandrappa) ರೆಬಲ್ ಶಾಸಕನಲ್ಲ, ಆತ ನೀತಿ ಇಲ್ಲದ ಶಾಸಕ ಎಂದು ಮಾಜಿ ಸಚಿವ ಹೆಚ್ ಆಂಜನೇಯ (H Anjaneya) ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಚಂದ್ರಪ್ಪ ಅವರ ಕುರಿತು ಬಿಜೆಪಿ ಮಾಜಿ ಶಾಸಕ ಜಿಹೆಚ್ ತಿಪ್ಪಾರೆಡ್ಡಿ (GH Thippareddy) ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಪ್ರತಿಯಾಗಿ ಚಂದ್ರಪ್ಪ ಅವರು ತಿಪ್ಪಾರೆಡ್ಡಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ತಿಪ್ಪಾರೆಡ್ಡಿ ವಿರುದ್ಧ ಎಕವಚನದಲ್ಲಿ ಮಾತನಾಡಿದ ಹಿನ್ನೆಲೆ ಕಾಂಗ್ರೆಸ್ ನಾಯಕ ಆಂಜನೇಯ ಅವರು ಚಂದ್ರಪ್ಪ ವಿರುದ್ಧ ಏಕವಚನದಲ್ಲೇ ಟೀಕಿಸಿದ್ದಾರೆ.
ಚಿತ್ರದುರ್ಗದಲ್ಲಿ ಚಂದ್ರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಆಂಜನೇಯ, ಅವನು ರೆಬಲ್ ಅಲ್ಲ, ಏನೂ ಅಲ್ಲ. ಎಂ.ಚಂದ್ರಪ್ಪ ನೀತಿ ಇಲ್ಲದ ಶಾಸಕ. ರೆಬಲ್ ಆಗಿದ್ದಾನೋ, ನಾಳೆ ಒಂದಾಗುತ್ತಾನೋ ಗೊತ್ತಿಲ್ಲ. ಜಿ.ಹೆಚ್.ತಿಪ್ಪಾರೆಡ್ಡಿ ಬಗ್ಗೆ ಎಂ.ಚಂದ್ರಪ್ಪ ಮಾತನಾಡಿದ್ದನ್ನು ನೋಡಿದ್ದೇನೆ. ಶಾಸಕ ಎಂ.ಚಂದ್ರಪ್ಪ ಹಾಗೆಲ್ಲ ಮಾತಾಡಬಾರದು, ಸಂಸ್ಕಾರ ಇದೆಯೇ? ತಿಪ್ಪಾರೆಡ್ಡಿ ಜಿಲ್ಲೆಯ ಹಿರಿಯ ನಾಯಕರು, ಹಗುರವಾಗಿ ಮಾತಾಡಬಾರದು. ಸಾವು ಯಾರ ಕೈಯಲ್ಲಿಲ್ಲ, ಸಾವಿನ ಬಗ್ಗೆ ಯಾರೂ ಮಾತನಾಡಬಾರದು. ಹಣದ ಕೊಬ್ಬಿನಿಂದ ಹಾಗೇ ಮಾತನಾಡಿದರೆ ಒಪ್ಪಲ್ಲ ಎಂದರು.
ಇದನ್ನೂ ಓದಿ: ಏ.3 ರಂದು ರಘುಚಂದನ್ ಪಕ್ಷೇತರ ಸ್ಪರ್ಧೆ: ನಾಮಪತ್ರ ಸಲ್ಲಿಕೆ ಸುಳಿವು ನೀಡಿದ ಬಿಜೆಪಿ ರೆಬಲ್ ಶಾಸಕ ಚಂದ್ರಪ್ಪ
ಕಾಂಗ್ರೆಸ್ನಿಂದ ಸುಮಾರು 10 ಕಡೆ ಮಕ್ಕಳು, ಅಳಿಯಂದಿರಿಗೆ ಟಿಕೆಟ್ ನೀಡಿದ್ದರ ಬಗ್ಗೆ ಮಾತನಾಡಿದ ಆಂಜನೇಯ, ಸಚಿವ ಕೆ ಹೆಚ್ ಮುನಿಯಪ್ಪ ಸಹ ಅಳಿಯಂದಿರಿಗೆ ಟಿಕೆಟ್ ಕೇಳಿದ್ದರು. ಎರಡು ಗುಂಪು ಮೆಚ್ಚುವ ಅಬ್ಯರ್ಥಿ ಗೌತಮ್‌ಗೆ ಪಕ್ಷ ಟಿಕೆಟ್ ನೀಡಿದೆ. ಐದು ಎಸ್ಸಿ ಮೀಸಲು ಕ್ಷೇತ್ರಗಳ ಪೈಕಿ ಎರಡು ಕಡೆ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಪಕ್ಷ ನಮ್ಮ ಸಮಾಜಕ್ಕೆ ಸಮಾಜಿಕ ನ್ಯಾಯ ನೀಡಿದೆ. ಹೀಗಾಗಿ ನಮ್ಮ ಸಮುದಾಯವು ಕಾಂಗ್ರೆಸ್ ಪರವಿರಲು ಮನವಿ ಮಾಡಿದರು.
ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ನಮ್ಮ ಪಕ್ಷ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ ಆಂಜನೇಯ, ಪಂಚ ಕಲ್ಯಾಣ ಯೋಜನೆ ಮೂಲಕ ಸಾಕಷ್ಟು ಉಪಕಾರ ಮಾಡಿದ್ದೇವೆ. ಎಪ್ರಿಲ್ 4 ರಂದು ನಮ್ಮ ಅಬ್ಯರ್ಥಿ ಬಿ ಎನ್ ಚಂದ್ರಪ್ಪ ನಾಮಪತ್ರ ಸಲ್ಲಿಸುತ್ತಾರೆ. ಬಳಿಕ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Sun, 31 March 24