ಏ.3 ರಂದು ರಘುಚಂದನ್ ಪಕ್ಷೇತರ ಸ್ಪರ್ಧೆ: ನಾಮಪತ್ರ ಸಲ್ಲಿಕೆ ಸುಳಿವು ನೀಡಿದ ಬಿಜೆಪಿ ರೆಬಲ್ ಶಾಸಕ ಚಂದ್ರಪ್ಪ

| Updated By: ಆಯೇಷಾ ಬಾನು

Updated on: Apr 01, 2024 | 9:12 AM

ಪುತ್ರ ರಘುಚಂದನ್​ಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಂಡಾಯ ಎದ್ದಿರುವ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ, ರಘುಚಂದನ್​ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮುಂದಾಗಿದ್ದಾರೆ. ಏಪ್ರಿಲ್ 3 ರಂದು ನಾಮಪತ್ರ ಸಲ್ಲಿಸುವ ಸುಳಿವು ಕೂಡ ನೀಡಿದ್ದಾರೆ. ಅಲ್ಲದೆ, ಇವನೇನು ಪೋತಪ್ಪ ನಾಯಕನೇ ಎಂದು ಟೀಕಿಸಿದ್ದ ಬಿಜೆಪಿ ಹಿರಿಯ ನಾಯಕರ ಜಿ.ಹೆಚ್‌.ತಿಪ್ಪಾರೆಡ್ಡಿ ವಿರುದ್ಧ ಎಂ.ಚಂದ್ರಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಏ.3 ರಂದು ರಘುಚಂದನ್ ಪಕ್ಷೇತರ ಸ್ಪರ್ಧೆ: ನಾಮಪತ್ರ ಸಲ್ಲಿಕೆ ಸುಳಿವು ನೀಡಿದ ಬಿಜೆಪಿ ರೆಬಲ್ ಶಾಸಕ ಚಂದ್ರಪ್ಪ
ಏ.3 ರಂದು ರಘುಚಂದನ್ ಪಕ್ಷೇತರ ಸ್ಪರ್ಧೆ: ನಾಮಪತ್ರ ಸಲ್ಲಿಕೆ ಸುಳಿವು ನೀಡಿದ ಬಿಜೆಪಿ ರೆಬಲ್ ಶಾಸಕ ಚಂದ್ರಪ್ಪ
Follow us on

ಚಿತ್ರದುರ್ಗ, ಮಾ.31: ಪುತ್ರ ರಘುಚಂದನ್​ಗೆ (Raghuchandran) ಚಿತ್ರದುರ್ಗ (Chitradurga) ಲೋಕಸಭಾ ಕ್ಷೇತ್ರದ ಬಿಜೆಪಿ (BJP) ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಂಡಾಯ ಎದ್ದಿರುವ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ (M Chandrappa), ರಘುಚಂದನ್​ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮುಂದಾಗಿದ್ದಾರೆ. ಏಪ್ರಿಲ್ 3 ರಂದು ನಾಮಪತ್ರ ಸಲ್ಲಿಸುವ ಸುಳಿವು ಕೂಡ ನೀಡಿದ್ದಾರೆ. ಅಲ್ಲದೆ, ಇವನೇನು ಪೋತಪ್ಪ ನಾಯಕನೇ ಎಂದು ಟೀಕಿಸಿದ್ದ ಬಿಜೆಪಿ ಹಿರಿಯ ನಾಯಕರ, ಮಾಜಿ ಶಾಸಕ ಜಿ.ಹೆಚ್‌.ತಿಪ್ಪಾರೆಡ್ಡಿ (GH Thippareddy) ವಿರುದ್ಧ ಎಂ.ಚಂದ್ರಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಂದ್ರಪ್ಪ, ಬಿಜೆಪಿ ಎಂಎಲ್​ಸಿ ರವಿಕುಮಾರ್ ಅವರು ಎರಡನೇ ಸುತ್ತಿನ ಮಾತುಕತೆಗೆ ಬಂದಿದ್ದರು. ಆದರೆ, ಏ.3 ರಂದು ರಘುಚಂದನ್​ನನ್ನು ಪಕ್ಷೇತರವಾಗಿ ಸ್ಪರ್ಧೆಗಿಳಿಸಲು ಸಿದ್ಧರಾಗಿದ್ದೇವೆ. ಈ ಸಂಬಂಧ ಯಾವುದೇ ಕ್ರಮವನ್ನು ಎದುರಿಸಲೂ ಸಿದ್ಧರಾಗಿದ್ದೇವೆ ಎಂದು ಚಂದ್ರಪ್ಪ ಹೇಳಿದ್ದಾರೆ. ಕಾಂಗ್ರೆಸ್ ಶಾಸಕರನ್ನು ನಾನು ಸಂಪರ್ಕಿಸಿದ್ದೇನೆ ಎಂಬುದು ಸುಳ್ಳು. ಮಾಜಿ ಶಾಸಕರಾದ ವೆಂಕಟರಮಣಪ್ಪ, ಗೂಳಿಹಟ್ಟಿ ನನ್ನ ಸೋದರರು. ಸಂದರ್ಭ ಬಂದರೆ ನಾನು ಅವರ ಸಹಾಯ ಕೇಳಬಹುದು. ಆದರೆ ಚುನಾವಣೆ ವೇಳೆಯಲ್ಲಿ ಯಾವ ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಿಲ್ಲ ಎಂದರು.

ತಿಪ್ಪಾರೆಡ್ಡಿ ವಿರುದ್ಧ ಚಂದ್ರಪ್ಪ ಏಕವಚನದಲ್ಲೇ ವಾಗ್ದಾಳಿ

ಇವನೇನು ಪೋತಪ್ಪ ನಾಯಕನೇ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಶಾಸಕ ಜಿ.ಹೆಚ್‌.ತಿಪ್ಪಾರೆಡ್ಡಿ ಏಕವಚನದಲ್ಲೇ ಚಂದ್ರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಏಕವಚನದಲ್ಲೇ ತಿರುಗೇಟು ನೀಡಿದ ಚಂದ್ರಪ್ಪ, ನಾನು ಪೋತಪ್ಪ ನಾಯಕನೇ ಕಣೋ. ನಾನು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದವನು. ಸೀಮೆ ಎಣ್ಣೆ, ಸಕ್ಕರೆ, ಅಕ್ಕಿ ಮಾರಾಟ ಮಾಡಿಕೊಂಡು ಬೆಳೆದವನು ಎಂದರು.

ಇದನ್ನೂ ಓದಿ: ಚಿತ್ರದುರ್ಗ ಬಿಜೆಪಿ ಟಿಕೆಟ್ ಮಿಸ್: ಯಡಿಯೂರಪ್ಪ-ವಿಜಯೇಂದ್ರ ವಿರುದ್ಧ ಬಂಡಾಯವೆದ್ದ ತಂದೆ-ಮಗ

ಗುತ್ತಿಗೆದಾರರು ನಿನ್ನ (ತಿಪ್ಪಾರೆಡ್ಡಿ) ವಿರುದ್ಧ ಪರ್ಸೆಂಟೇಜ್ ಆರೋಪ ಮಾಡಿದರು. ಶೌಚಾಲಯ ಕಾಮಗಾರಿ ಹಣದಲ್ಲೂ ಪರ್ಸೆಂಟೇಜ್ ಪಡೆದಿದ್ದೀಯಾ, ಕಳಪೆ ಕಾಮಗಾರಿ ಕಾರಣ ದುರ್ಗದ ಡಿವೈಡರ್ ತೆರವುಗೊಳಿಸಿದ್ದಾರೆ. ನಿನ್ನ ವಿರುದ್ಧ ಪಾರ್ಕ್‌ಗಳ ಜಾಗವನ್ನೂ ನುಂಗಿ ಹಾಕಿದ ಆರೋಪಗಳಿವೆ. ನಿನ್ನ ಮೇಲಿರುವ ಆರೋಪಗಳು ನನ್ನ ವಿರುದ್ಧ ಇಲ್ಲ. ಬಿಎಸ್ ಯಡಿಯೂರಪ್ಪ ನನಗೆ ತಂದೆ ಸಮಾನರು, ನಾನು ಅವರ ಮಾತು ಕೇಳುತ್ತೇನೆ. ಅದನ್ನು ಕೇಳಲು ನೀನು ಯಾರು ಎಂದು ತಿಪ್ಪಾರೆಡ್ಡಿಗೆ ಚಂದ್ರಪ್ಪ ಪ್ರಶ್ನಿಸಿದರು.

ವೀರೇಂದ್ರ ಕೆಲಸಕ್ಕೆ ಬಾರದವ ಎಂದ ಚಂದ್ರಪ್ಪ

ಕೆಲಸಕ್ಕೆ ಬಾರದೆ ಇರುವವ, ಕ್ಯಾಸಿನೊದವನ ಮುಂದೆ ನೀನು ಸೋತೆ. ಅವನಿಗೆ ಗೆಲ್ಲಿಸಬೇಕೆಂದು ಚಿತ್ರದುರ್ಗದ ಜನ ಮತ ಹಾಕಿಲ್ಲ. ನಿನ್ನನ್ನು ಸೋಲಿಸಬೇಕೆಂದು ಜನ ಅವನನ್ನು ಗೆಲ್ಲಿಸಿದ್ದಾರೆ ಎಂದು ಹೇಳುವ ಮೂಲಕ ಹೆಸರು ಪ್ರಸ್ತಾಪಿಸದೆ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆಸಿ ವಿರೇಂದ್ರ ಅವರನ್ನು ಟೀಕಿಸುತ್ತಾ ತಿಪ್ಪಾರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Sun, 31 March 24