Religious Conversion: ಮತಾಂತರ ಪಿಡುಗಿನಿಂದ ಕರ್ನಾಟಕದ ಶಾಂತಿಗೆ ಧಕ್ಕೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಮತಾಂತರ ಪಿಡುಗಿನಿಂದ ಕರ್ನಾಟಕದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿಯೇ ಸರ್ಕಾರವು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಚಿತ್ರದುರ್ಗ: ಮತಾಂತರ ಪಿಡುಗಿನಿಂದ ಕರ್ನಾಟಕದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿಯೇ ಸರ್ಕಾರವು ಮತಾಂತರ ನಿಷೇಧ ಕಾಯ್ದೆ (Anti Converion Law) ಜಾರಿಗೆ ತಂದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಯಾರೇ ಆಗಲಿ ಮತಾಂತರ ಆಗಬೇಕು ಎಂದಿದ್ದರೆ ಜಿಲ್ಲಾಧಿಕಾರಿಯ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ ಎಂದ ಅವರು, ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿಯ ಮತಾಂತರ ಪ್ರಕರಣವನ್ನೂ ಪ್ರಸ್ತಾಪಿಸಿದರು. ಮತಾಂತರಗೊಂಡ ಧರ್ಮಕ್ಕೆ ಸೇರಿದವರಿಗೆ ಮೊದಲಿನಿಂದಲೂ ಯಾವೆಲ್ಲಾ ಸವಲತ್ತುಗಳು ಲಭ್ಯವಿದೆಯೋ ಅದು ಮಾತ್ರ ಹೊಸದಾಗಿ ಮತಾಂತರವಾದವರಿಗೆ ಸಿಗುತ್ತದೆ ಎಂದು ವಿವರಿಸಿದರು.
ಮತಾಂತರ ವಿಚಾರದಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ ಫಸ್ಟ್ ಇರಬಹುದು ಎಂದು ಅಭಿಪ್ರಾಯಪಟ್ಟ ಅವರು, ಮಸೀದಿ, ಮಂದಿರಗಳ ಮೈಕ್ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. 122 ಮಸೀದಿ, 24 ದೇವಸ್ಥಾನ, 16 ಚರ್ಚ್ಗಳಿಗೆ ಮೈಕ್ ಲೈಸೆನ್ಸ್ ಕೊಡಲಾಗಿದೆ. ಅಕ್ರಮ ಕಸಾಯಿಖಾನೆ ಸಂಪೂರ್ಣ ಬಂದ್ ಮಾಡಲು ಮತ್ತು ಜೂಜಾಟಕ್ಕೆ ಕಡಿವಾಣ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ತಡೆಗೆ ಎಚ್ಚರಿಕೆಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಎಲ್ಲ ವಿವಾದ ಬಗೆಹರಿದಿದೆ
ದಾವಣಗೆರೆ: ರಾಜ್ಯದಲ್ಲಿ ಎಲ್ಲಾ ರೀತಿಯ ವಿವಾದಗಳು ಬಗೆಹರಿದಿವೆ. ರಾಜ್ಯದಲ್ಲಿ ಯಾವುದೇ ಗಲಭೆ, ಹಿಜಾಬ್ ವಿವಾದ ಇಲ್ಲ. ಸದ್ಯ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೂ ಸರಿಯಾಗಿದೆ. ಸ್ಥಳೀಯರಲ್ಲದವರು ಸಚಿವ ಬಿ.ಸಿ.ನಾಗೇಶ್ ಮನೆಗೆ ಮುತ್ತಿಗೆ ಹಾಕಿದ್ದು ಸರಿಯಲ್ಲ. ದಾವಣಗೆರೆಯ ಮೂವರು ಸಹ ಮುತ್ತಿಗೆ ಹಾಕಿದವರಲ್ಲಿ ಸೇರಿದ್ದಾರೆ. ಪ್ರತಿಭಟನೆಗೂ ಮುನ್ನ ಯಾವುದೇ ಅನುಮತಿ ಪಡೆದಿರಲಿಲ್ಲ. ಈ ಎಲ್ಲದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಉಗ್ರ ತಾಲಿಬ್ ಹುಸೇನ್ ಬಂಧನ ಕುರಿತು ಪ್ರತಿಕ್ರಿಯಿಸಿದ ಅವರು, ಆ ವಿಚಾರದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಶ್ರೀನಗರ ಪೊಲೀಸರು ಉಗ್ರ ತಾಲೀಬ್ನನ್ನ ಕರೆದೊಯ್ದಿದ್ದಾರೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ. ಹೀಗಾಗಿ ಇದರ ಬಗ್ಗೆ ಬಹಿರಂಗವಾಗಿ ಮಾತನಾಡಬಾರದು. ಶಿವಮೊಗ್ಗ ಜಿಲ್ಲೆಯಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೇಂದ್ರದ ತನಿಖಾ ಸಂಸ್ಥೆ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ದಾವಣಗೆರೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ರಾಜ್ಯದಲ್ಲಿ ನಡೆದ ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸೂಕ್ತ ತನಿಖೆ ನಡೆಯುತ್ತಿದೆ. ಇಂತಹ ಅವ್ಯವಹಾರ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಅಂಥವರು ಎದೆ ಮುಟ್ಟಿಕೊಂಡು ನೋಡಿಕೊಳ್ಳುವಂತೆ ಮಾಡುತ್ತೇವೆ. ನಮ್ಮ ಇಲಾಖೆ ಡಿವೈಎಸ್ಪಿಗಳನ್ನೇ ಬಂಧಿಸಿದ್ದೇವೆ. ತನಿಖಾ ತಂಡ ಸಹ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಸಂಬಂಧಿಸಿದ ಹಲವು ಪ್ರಕರಣಗಳು ಆಯಾ ಹಂತದಲ್ಲಿಯೇ ಬಗೆಹರಿದಿವೆ. ವಿಷಯ ಬೀದಿಗೆ ಬಂದಾಗ ಮಾತ್ರ ನಮ್ಮ ಗೃಹ ಇಲಾಖೆಗೆ ಕೆಲಸ ಬರುತ್ತದೆ. ದಾವಣಗೆರೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಚಿವರು ಸಭೆಯನ್ನು ನಡೆಸಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:17 pm, Wed, 8 June 22