ಫ್ಯಾಷನ್​ಗಾಗಿ ಹುಲಿ ಉಗುರು, ಇತರೆ ವಸ್ತು ಬಳಕೆ ಸರಿಯಲ್ಲ: ಎಂಎಲ್​ಸಿ ಬಿಕೆ ಹರಿಪ್ರಸಾದ್​

ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಕಾಂಗ್ರೆಸ್​​ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್, ಫ್ಯಾಷನ್​ಗಾಗಿ ಹುಲಿ ಉಗುರು, ಇತರೆ ವಸ್ತು ಬಳಕೆ ಸರಿಯಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು. ಯಾರೇ ಆಗಿರಲಿ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಆಗಲಿ ಎಂದು ಹೇಳಿದ್ದಾರೆ.

ಫ್ಯಾಷನ್​ಗಾಗಿ ಹುಲಿ ಉಗುರು, ಇತರೆ ವಸ್ತು ಬಳಕೆ ಸರಿಯಲ್ಲ: ಎಂಎಲ್​ಸಿ ಬಿಕೆ ಹರಿಪ್ರಸಾದ್​
ಕಾಂಗ್ರೆಸ್ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Oct 27, 2023 | 2:48 PM

ಚಿತ್ರದುರ್ಗ, ಅಕ್ಟೋಬರ್​​​​​​ 27: ಫ್ಯಾಷನ್​ಗಾಗಿ ಹುಲಿ ಉಗುರು, ಇತರೆ ವಸ್ತು ಬಳಕೆ ಸರಿಯಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು. ಯಾರೇ ಆಗಿರಲಿ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಆಗಲಿ ಎಂದು ಕಾಂಗ್ರೆಸ್​​ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ (BK Hariprasad) ​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಕೂಡ ನವಿಲು ಗರಿ ಧರಿಸಿದ್ದರು. ನವಿಲು ಸಾಕಿದ್ದ ಪ್ರಧಾನಮಂತ್ರಿ ಹಿಡಿದುಕೊಂಡು ಹೋಗಬೇಕಾ. ನವಿಲುಗರಿ ನೈಸರ್ಗಿಕವಾಗಿ ಉದುರುತ್ತೆ, ಕೊಂದರೆ ಕ್ರಮ ಆಗಲಿ ಎಂದು ಹೇಳಿದ್ದಾರೆ.

ನಾನು ಸಿಎಂ ವಕ್ತಾರ ಅಲ್ಲ, ಕುಮಾರಸ್ವಾಮಿ ಬೆಂಬಲಿಗನೂ ಅಲ್ಲ

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ರಾಜಕೀಯದ ವಿಲನ್​ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಸಿಎಂ ವಕ್ತಾರ ಅಲ್ಲ, ಕುಮಾರಸ್ವಾಮಿ ಬೆಂಬಲಿಗನೂ ಅಲ್ಲ. ವಿಲನ್ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.​​

ಬೆಂಗಳೂರು ಜಿಲ್ಲೆಗೆ ಕನಕಪುರ ಸೇರಿಸುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​​​ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಕೀಯ, ಆಡಳಿತಾತ್ಮಕವಾಗಿ ಜಿಲ್ಲೆಗಳ ರಚನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾಸಕ ಲಕ್ಷ್ಮಣ ಸವದಿ ಕುಟುಂಬಕ್ಕೂ ಹುಲಿ ಉಗುರು ಸಂಕಷ್ಟ; ಪುತ್ರ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಫೋಟೋ ವೈರಲ್

ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ, ರಾಹುಲ್, ಸುರ್ಜೇವಾಲ, ವೇಣುಗೋಪಾಲ್, ಸಿಎಂ ಮತ್ತು ಡಿಸಿಎಂಗೆ ಮಾತ್ರ ಈ ಬಗ್ಗೆ ಗೊತ್ತಿದೆ. ಬೇರೆ ಯಾರೂ ಹೇಳಲು ಆಗಲ್ಲ, ಅಭಿಪ್ರಾಯ ಹೇಳಬಹುದು ಅಷ್ಟೇ ಎಂದಿದ್ದಾರೆ.

ಮುಖ್ಯಮಂತ್ರಿಗಿಂತ ಉನ್ನತ ಸ್ಥಾನದಲ್ಲಿ ಇದ್ದವನು ನಾನು

ಶಾಸಕರ ಟೀಂ ಜತೆ ಸತೀಶ್​​ ಜಾರಕಿಹೊಳಿ ವಿದೇಶ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ದುಬೈ ರೀತಿ ಅಭಿವೃದ್ಧಿಗಾಗಿ ಶಾಸಕರನ್ನು ಕರೆದೊಯ್ದರೆ ಆಶ್ಚರ್ಯವಿಲ್ಲ. ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದರು. ಸರ್ಕಾರದಲ್ಲಿ ಬಿ.ಕೆ.ಹರಿಪ್ರಸಾದ್​ಗೆ ಉನ್ನತ ಸ್ಥಾನ ನೀಡುವ ವಿಚಾರ, ಮುಖ್ಯಮಂತ್ರಿಗಿಂತ ಉನ್ನತ ಸ್ಥಾನದಲ್ಲಿ ಇದ್ದವನು ನಾನು. ನಾನು ಯಾವತ್ತೂ ಸಣ್ಣ ಸ್ಥಾನದಲ್ಲಿ‌ ಇದ್ದವನಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಸ್ವಂತ ಖರ್ಚಿನಲ್ಲಿ ಶಾಪಿಂಗ್​ಗಾಗಿ ದುಬೈ ಹೋಗುತ್ತಿದ್ದಾರೆ: ಜಿ ಪರಮೇಶ್ವರ, ಗೃಹ ಸಚಿವ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​​ ವಿರುದ್ಧ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಭ್ರಷ್ಟಾಚಾರ ಆರೋಪ ವಿಚಾರವಾಗಿ ಮಾತನಾಡಿದ ಅವರು, ರಾಜಕಾರಣಿಗಳು ಭ್ರಷ್ಟಾಚಾರದ ಬಗ್ಗೆ ಮಾತಾಡುವುದು ಕಡಿಮೆ ಮಾಡಬೇಕು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:48 pm, Fri, 27 October 23