ಕರುಳು ಬಳ್ಳಿ ಕಣ್ಣರಳಿಸಿ ನೋಡುವ ಮುನ್ನವೇ ಬಾಣಂತಿ ತಾಯಿ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ
ಸುಸ್ತು ಹಾಗೂ ಉಸಿರಾಟ ಸಮಸ್ಯೆ ಇತ್ತು. ಎರಡು ಭಾರಿ ಹೃದಯಾಘಾತವಾಗಿರುವುದಾಗಿ ವೈದ್ಯರ ಸ್ಪಷ್ಟನೆಯಲ್ಲಿ ಉಲ್ಲೇಖವಾಗಿದೆ. ಗಾಯತ್ರಿಗೆ ಒಂದೂವರೆ ತಿಂಗಳ ಹಿಂದೆ ಸಿಜೇರಿಯನ್ ಮೂಲಕ ಎರಡನೆಯ ಹೆರಿಗೆಯಾಗಿತ್ತು. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದೆ.
ಆಕೆ ಹಸಿ ಹಸಿ ಬಾಣಂತಿ, ಮುದ್ದು ಕಂದ ನವ ಜಾತ ಗಂಡು ಶಿಶುವಿಗೆ ಜನ್ಮ ನೀಡಿ ಇನ್ನೂ ಈಗ ತಾನೆ ಒಂದೂವರೆ ತಿಂಗಳು ಆಗಿತ್ತು, ಆದ್ರೆ ತುಂಬಾ ಸುಸ್ತು ಅಂತ ಖಾಸಗಿ ಆಸ್ಪತ್ರೆಗೆ ದಾಖಲು ಆದ್ರೆ ಕೆಲವೆ ಗಂಟೆಗಳಲ್ಲಿ ಬಾಣಂತಿ ಸಾವಿನ ಮನೆ ಸೇರಿದ್ದಾಳೆ. ಇದ್ರಿಂದ ವೈದ್ಯರ ನಿರ್ಲಕ್ಷ್ಯವೆಂದು ಮೃತಳ ಸಂಬಂಧಿಗಳು ಆರೋಪಿಸಿದ್ರೆ… ಇತ್ತ ಹೃದಯಾಘಾತದಿಂದ ಬಾಣಂತಿ ಸಾವು ಎಂದು ವೈದ್ಯರು ಉತ್ತರ ನೀಡಿದ್ದಾರೆ.
ಒಂದೆಡೆ ಒಂದುವರೆ ತಿಂಗಳ ನವಜಾತ ಗಂಡು ಶಿಶು, ಮತ್ತೊಂದೆಡೆ ನವಜಾತ ಶಿಶುವಿನ ತಾಯಿ ಅಂಬುಲೆನ್ಸ್ ನಲ್ಲಿ ಶವವಾಗಿ ಮಲಗಿರುವ ದೃಶ್ಯ ನೋಡ್ತಿದ್ರೆ… ಎಂಥವರ ಕರುಳು ಚುರುಕ್ ಅನ್ನುತ್ತೆ. ಇಂಥ ಮನಕಲುಕುವ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ ನಗರದ ಜೈನ್ ಮಿಷನ್ ಆಸ್ಪತ್ರೆಯಲ್ಲಿ. ಹೌದು!!
ಚಿಕ್ಕಬಳ್ಳಾಪುರ ತಾಲೂಕಿನ ಕಳವಾರ ಗ್ರಾಮದ ನಿವಾಸಿ, ಹಸಿ ಹಸಿ ಬಾಣಂತಿ ಗಾಯತ್ರಿ ಅನ್ನೊ ಮಹಿಳೆ… ಸುಸ್ತು ಅಂತ ಗಂಡನ ಜೊತೆ ಇಂದು ಬೆಳಿಗ್ಗೆ 11 ಗಂಟೆಗೆ ಚಿಕ್ಕಬಳ್ಳಾಪುರ ನಗರದ ಜೈನ್ ಮಿಷನ್ ಆಸ್ಪತ್ರೆಗೆ ಆಗಮಿಸಿದ್ದರು. ವೈದ್ಯರು ತಕ್ಷಣ ಬಾಣಂತಿಯನ್ನು ದಾಖಲಿಸಿಕೊಂಡಿದ್ದಾರೆ. ಗಾಯತ್ರಿಗೆ ಉಸಿರಾಟ ಸಮಸ್ಯೆ ಉಂಟಾಗಿದೆ ಅಂತ ಐ.ಸಿ.ಯು ಗೆ ದಾಖಲಿಸಿ ಚಿಕಿತ್ಸೆ ಆರಂಭಿಸಿದ್ದಾರೆ. ಆದ್ರೆ ಬಾಣಂತಿ ಮೂರು ಗಂಟೆಯಷ್ಟೊತ್ತಿಗೆ ಐ.ಸಿ.ಯು ನಲ್ಲೆ ಕೊನೆಯುಸಿರು ಎಳೆದಿದ್ದಾಳೆ. ಇದ್ರಿಂದ ಒಂದೆಡೆ ಒಂದೂವರೆ ತಿಂಗಳ ನವಜಾತ ಗಂಡು ಶಿಶುವಿನ ಅನಾಥ ಪರಿಸ್ಥಿತಿ ಮತ್ತೊಂದೆಡೆ ಬಾಣಂತಿಯ ಸಾವನ್ನು ನೆನೆದು ಆಕೆ ಸಂಬಂಧಿಗಳು ಆಸ್ಪತ್ರೆಯಲ್ಲೆ ಗೋಳಾಡ್ತಿರುವುದು. ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೆಂದು ಆರೋಪಿಸಿದ್ರು.
ಜೈನ್ ಮಿಷನ್ ಆಸ್ಪತ್ರೆಗೆ 11 ಗಂಟೆಗೆ ದಾಖಲು ಮಾಡಿದ್ದರೂ… ಆಸ್ಪತ್ರೆಯ ವೈದ್ಯರು ಕೆಲವು ಗಂಟೆಗಳ ಕಾಲ, ಬಾಣಂತಿಯ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲ. ಇದ್ರಿಂದ ವೈದ್ಯರ ಚಿಕೀತ್ಸೆ ಬಗ್ಗೆ ಮೃತಳ ಸಂಬಂಧಿಗಳು ಶಂಕೆ ವ್ಯಕ್ತಪಡಿಸಿದ್ರೆ…. ಇತ್ತ… ಜೈನ್ ಮಿಷನ್ ಆಸ್ಪತ್ರೆಯ ವೈದ್ಯರು, ಬಾಣಂತಿ ಗಾಯತ್ರಿ ಆಸ್ಪತ್ರೆಗೆ ಬಂದ ತಕ್ಷಣ ಯಾವುದೆ ಲೋಪವಾಗಿಲ್ಲ, ತಕ್ಷಣ ಐ.ಸಿ.ಯು ಗೆ ದಾಖಲಿಸಿ ಸೂಕ್ತ ಚಿಕೀತ್ಸೆ ನೀಡಲಾಗಿದೆ, ಸ್ವತಃ ರೋಗಿ ಹಾಗೂ ಅವರ ಸಂಬಂಧಿಗಳಿಗೆ ಚಿಕೀತ್ಸೆಯ ಬಗ್ಗೆ ಮಾಹಿತಿ ನೀಡಲಾಯಿತು, ಒಂದಲ್ಲ ಎರಡು ಬಾರಿ ಹೃದಯಾಘಾತವಾಗಿದೆ, ಎಷ್ಟೆ ಪ್ರಯತ್ನ ಪಟ್ಟರೂ ಸ್ಯಾಚುರೇಷನ್ ಕಡಿಮೆಯಾಗಿ ಬಾಣಂತಿ ಗಾಯತ್ರಿ ಮೃತಪಟ್ಟಿದ್ದಾರೆ. ಚಿಕಿತ್ಸೆಯಲ್ಲಿ ಯಾವುದೆ ಲೋಪ ಆಗಿಲ್ಲವೆಂದು ಸ್ತ್ರೀ ರೋಗ ತಜ್ಞೆ ಡಾ. ವೀಣಾ ಸಮರ್ಥಿಸಿಕೊಂಡಿದ್ದಾರೆ.
ಕರುಳು ಬಳ್ಳಿ ಕುಡಿಯ ಕಣ್ಣರಳಿಸಿ ನೋಡುವ ಮುನ್ನ, ವೈದ್ಯರ ಚಿಕಿತ್ಸೆಯಲ್ಲಿ ಲೋಪವಾಯ್ತಾ… ಇಲ್ಲಾ ವೈದ್ಯರು ಹೇಳುವ ಹಾಗೆ ಬಾಣಂತಿ ಭಯ ಬಿದ್ದಾಗ ಹೃದಯಾಘಾತವಾಗಿದೆಯಾ ದೇವರೆ ಬಲ್ಲ, ಆದ್ರೆ ಮುದ್ದುಕಂದನ ನಗುವ ಕಣ್ತುಂಬಿಕೊಳ್ಳುವ ಮುನ್ನವೇ ಅಮ್ಮ ಕಣ್ಮುಚ್ಚಿದ್ದು ಮಾತ್ರ ವಿಪರ್ಯಾಸ.
– ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ
ಆನೇಕಲ್: ಪೊಲೀಸ್ ಎಎಸ್ಐ ಮಗ ವಿಷ ಕುಡಿದು ಆತ್ಮಹತ್ಯೆ
ಆನೇಕಲ್: ಪೊಲೀಸ್ ಇಲಾಖೆಯ ಅಸಿಸ್ಟಂಟ್ ಸಬ್ಇನ್ಸ್ಪೆಕ್ಟರ್ (ಎಎಸ್ಐ) ಒಬ್ಬರ ಮಗ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಚ್ಎಸ್ಆರ್ ಪೊಲೀಸ್ ಠಾಣೆಯ ಎಎಸ್ಐ ನಾಗರಾಜ್ ಅವರ ಮಗ ಪ್ರಶಾಂತ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಪ್ರಶಾಂತ್, ನಗರದ ವಿಜಯ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಬೆಂಗಳೂರು ಹೊರವಲಯ ಎಲೆಕ್ಟ್ರಾನ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿನ್ನೆ ರಾತ್ರಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಶಾಂತ್ ನನ್ನು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನಲ್ಲಿ ನೀರಿನ ತೊಟ್ಟಿಗೆ ಬಿದ್ದು ಬಾಲಕಿ ಸಾವು
ಮೈಸೂರು: ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ನೀರಿನ ತೊಟ್ಟಿಗೆ ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ನಗರದ ಹೆಬ್ಬಾಳ ಬಡಾವಣೆಯಲ್ಲಿ ನಡೆದಿದೆ. ಮಹಾಲಕ್ಷ್ಮೀ (3) ಮೃತ ದುರ್ದೈವಿ. ಮಹಾಲಕ್ಷ್ಮೀ ತಮಿಳುನಾಡು ಮೂಲದ ದಂಪತಿಯ ಪುತ್ರಿಯಾಗಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಜಿಎಸ್ಟಿ ಕಚೇರಿ ಕಟ್ಟಡದಿಂದ ಜಿಗಿದು ಆಫೀಸ್ ಬಾಯ್ ಆತ್ಮಹತ್ಯೆ
ಬೆಂಗಳೂರು: ಜಿಎಸ್ಟಿ ಕಚೇರಿ ಕಟ್ಟಡದಿಂದ ಜಿಗಿದು ಕಚೇರಿ ಸಹಾಯಕ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಜಿಎಸ್ಟಿ ಕಚೇರಿಯಲ್ಲಿ ನಡೆದಿದೆ. ಕಟ್ಟಡದಿಂದ ಜಿಗಿದು ಆಫೀಸ್ ಬಾಯ್ ಲಕ್ಷ್ಮಣ(26) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಕಮರ್ಷಿಯಲ್ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Published On - 5:49 pm, Mon, 27 June 22