ಬೆಂಗಳೂರು: ಕರ್ನಾಟಕದಲ್ಲಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಕ್ರಮ ವಲಸಿಗರನ್ನು ರಾಜ್ಯದಿಂದ ಹೊರಕ್ಕೆ ಕಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಜೂನ್ 13) ತಿಳಿಸಿದರು. ಮಾಧ್ಯಮದ ಜೊತೆ ಮಾತನಾಡಿದ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜ್ಯದಲ್ಲಿ ಇರುವ ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ತಿಳಿಸಲಾಗಿದೆ ಎಂದು ಹೇಳಿದರು.
ನಿರಾಶ್ರಿತರಿಗೆ ವಸತಿ ಸೌಲಭ್ಯ ಒದಗಿಸಲು ನಿವೇಶನ ಒದಗಿಸಲು ಕೂಡ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮುಖ್ಯಮಂತ್ರಿ ಅವಧಿ ಮುಗಿಯುವುದರ ಒಳಗಾಗಿ ರಾಜ್ಯದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ನೆರೆಯ ದೇಶಗಳಾದ ಶ್ರೀಲಂಕಾ ಸಹಿತ ಬಾಂಗ್ಲಾದೇಶ, ಪಾಕಿಸ್ತಾನದ ಅಕ್ರಮ ವಲಸಿಗರು ಇರುವುದು ಕೆಲವಾರು ಪ್ರಕರಣಗಳ ಮೂಲಕ ಬೆಳಕಿಗೆ ಬಂದಿತ್ತು. ಅವರು ಅಕ್ರಮವಾಗಿ ಇಲ್ಲಿಂದ ವಿದೇಶಕ್ಕೆ ತೆರಳವುದು, ಸ್ಥಳೀಯರ ಬಳಿ ಕಾರ್ಮಿಕರಾಗಿ ದುಡಿಯುತ್ತಿರುವ ಬಗ್ಗೆ ಹೇಳಿ ಇಲ್ಲಿ ಇರುತ್ತಿರುವುದು ತಿಳಿದುಬಂದಿತ್ತು. ಭಾರತದಲ್ಲಿ ಆಧಾರ್ ಕಾರ್ಡ್ ಕೂಡ ಮಾಡಿಸಿಕೊಳ್ಳುತ್ತಿದ್ದ ಬಗ್ಗೆ ತಿಳಿದುಬಂದಿತ್ತು. ನಂತರ ವಿದೇಶಕ್ಕೆ ಮಾನವ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಗಳನ್ನೂ ಪೊಲೀಸರು ಪತ್ತೆ ಹಚ್ಚಿದ್ದರು.
ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಬೃಹತ್ ಮಾನವ ಕಳ್ಳಸಾಗಣೆ ವಿಚಾರ ಬಹಿರಂಗವಾಗಿತ್ತು. ಮಾನವ ಕಳ್ಳಸಾಗಣೆ ದಂಧೆಯ ಕಿಂಗ್‌ಪಿನ್ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಬೆಂಗಳೂರು ಪೊಲೀಸರು ನೀಡಿದ ಮಾಹಿತಿ ಮೇರೆಗೆ ಬಾಂಗ್ಲಾದಲ್ಲಿ ಆರೋಪಿಗಳನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು.
ಕಿಂಗ್‌ಪಿನ್ ಅಶ್ರಾಫ್ ಉಲ್ಲಾ ಇಸ್ಲಾಂ ಅಲಿಯಾಸ್ ಬಾಸ್ ರಫಿ, ಶಹೀದಾ ಬೇಗಮ್ ಅಲಿಯಾಸ್ ಮೇಡಮ್ ಶಹೀದಾ, ಇಸ್ಮಾಯಿಲ್, ರೆಹಮಾನ್ ಶೇಖ್ ಬಂಧಿತ ಆರೋಪಿಗಳು. ರಫಿ ಕಳೆದ 10 ವರ್ಷಗಳಿಂದ ಯುವತಿಯರ ಕಳ್ಳಸಾಗಣೆ ಮಾಡುತ್ತಿದ್ದ. ಈವರೆಗೆ ಸುಮಾರು 500 ಯುವತಿಯರನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿದ್ದ. ಇಷ್ಟೂ ಯುವತಿಯರನ್ನು ವೇಶ್ಯಾವಾಟಿಕೆ ದಂಧೆಗೆ ಬಳಸಿದ್ದರು ಎಂದು ಪೊಲೀಸರು ಹೇಳಿದ್ದರು.
ಬೃಹತ್ ಮಾನವ ಕಳ್ಳಸಾಗಣೆ ಜಾಲವೊಂದನ್ನು ಇತ್ತೀಚೆಗೆ ಮಂಗಳೂರು ಪೊಲೀಸರು ಭೇದಿಸಿದ್ದರು. ಶ್ರೀಲಂಕಾದ 38 ಪ್ರಜೆಗಳನ್ನು ಬಂಧಿಸಿದ್ದರು. ಸಮುದ್ರ ಮಾರ್ಗವಾಗಿ ತಮಿಳುನಾಡಿಗೆ ಬಂದಿದ್ದ ಶ್ರೀಲಂಕಾದ ಪ್ರಜೆಗಳು ನಂತರ ತಮಿಳುನಾಡಿನಿಂದ ಮಂಗಳೂರಿಗೆ 2 ತಿಂಗಳ ಹಿಂದೆ ಬಂದಿದ್ದರು. ಮಂಗಳೂರಿನಿಂದ ಕೆನಡಾಕ್ಕೆ ತೆರಳಲು ಪ್ರಯತ್ನಿಸುತ್ತಿದ್ದ ಶ್ರೀಲಂಕಾ ಪ್ರಜೆಗಳು ಲಾಕ್ಡೌನ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೇ ಸಿಲುಕಿದ್ದರು.
ಅಕ್ರಮವಾಗಿ ನುಸುಳಿದ್ದ ಶ್ರೀಲಂಕಾ ಪ್ರಜೆಗಳ ಬಂಧನ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಶ್ರೀಲಂಕಾದ ಪ್ರಜೆಗಳು ಅಕ್ರಮವಾಗಿ ದೇಶದೊಳಗೆ ನುಸುಳಿರುವುದು ಆಂತರಿಕಾ ಭದ್ರತಾ ವಿಚಾರವೂ ಆಗಿದೆ. ಅವರು ಶ್ರೀಲಂಕಾದಿಂದ ತಮಿಳುನಾಡಿನ ತೂತುಕುಡಿಗೆ ಬಂದು ಅಲ್ಲಿಂದ ಕೆನಡಾಗೆ ತೆರಳುವ ಯೋಜನೆ ಹೊಂದಿದ್ದರು. 6 ಲಕ್ಷ ಶ್ರೀಲಂಕಾ ರೂಪಾಯಿಗಳನ್ನು ಏಜೆಂಟ್ ಗೆ ಕೊಟ್ಟಿದ್ದಾಗಿ ಮಾಹಿತಿ ದೊರೆಕಿರುವ ಬಗ್ಗೆ ತಿಳಿಸಿದ್ದರು.
ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಬೃಹತ್ ಮಾನವ ಕಳ್ಳಸಾಗಣೆ ಜಾಲ ಬಹಿರಂಗ
Published On - 8:50 pm, Sun, 13 June 21