ಕಾವೇರಿ ನದಿ ನೀರು ವಿವಾದ: ಇಂದು ತುರ್ತು ಸಭೆ ಕರೆದ ಸಿದ್ದರಾಮಯ್ಯ, ಪ್ರತಿಪಕ್ಷಗಳ ನಾಯಕರಿಗೂ ಆಹ್ವಾನ
ಕಾವೇರಿ ನೀರು ನಿಯಂತ್ರಣ ಸಮಿತಿ ಉರಿಯೋ ಬೆಂಕಿಗೆ ಮತ್ತಷ್ಟು ತುಪ್ಪು ಸುರಿದಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಮತ್ತೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡಲು ಕರ್ನಾಟಕಕ್ಕೆ ಆದೇಶಿಸಿದೆ. ಇದರಿಂದ ಮಂಡ್ಯ ಮೈಸೂರಿನಲ್ಲಿ ರೈತರ ಆಕ್ರೋಶ ಸ್ಫೋಟಗೊಂಡಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ನೀರು ನಿಯಂತ್ರಣ ಸಮಿತಿ ಆದೇಶ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಸೆಪ್ಟೆಂಬರ್ 130 ತುರ್ತು ಸಭೆ ಕರೆದಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್ 13): ಕರ್ನಾಟಕಕ್ಕೆ ಬರದ ಹೊಡೆತದ ಮಧ್ಯೆಯೇ ಭಾರಿ ಆಘಾತ ಎದುರಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಬರದ ಛಾಯೆ ಆವರಿಸಿದೆ. ರೈತರು ಕೂಡ ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ತಮಿಳುನಾಡಿಗೆ (Tamil Nadu) ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಮತ್ತೆ ಆದೇಶ ನೀಡಿದೆ. ನಿನ್ನೆ ಸಭೆ ನಡೆಸಿದ ಕಾವೇರಿ ನೀರು ನಿಯಂತ್ರಣ ಸಮಿತಿ ನಿತ್ಯ ಐದು ಸಾವಿರ ಕ್ಯೂಸೆಕ್ ನಂತೆ ಹದಿನೈದು ದಿನಗಳ ಕಾಲನೀರು ಹರಿಸಲು ಶಿಫಾರಸ್ಸು ಮಾಡಿದೆ. ಈ ಆದೇಶ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು (ಸೆಪ್ಟೆಂಬರ್ 13) ಸರ್ವ ಪಕ್ಷಗಳ ತುರ್ತು ಸಭೆ(all-party meeting) ಕರೆದಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಧ್ಯಾಹ್ನ 12.30ಕ್ಕೆ ಸಭೆ ನಡೆಯಲಿದೆ. ಡಿಸಿಎಂ ಡಿ.ಕೆ.ಶಿವಕುಮಾರ್, ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿ ಸಚಿವರುಗಳು, ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿಪಕ್ಷಗಳ ಮಾಜಿ ಸಿಎಂಗಳು, ಲೋಕಸಭೆ ರಾಜ್ಯ ಸಭೆ ಸದಸ್ಯರುಗಳಿಗೂ ತುರ್ತು ಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ.
ಈ ಮಧ್ಯೆ ಸರ್ಕಾರ ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಿಎಂ ಅಧ್ಯಕ್ಷತೆಯಲ್ಲಿ ನಿನ್ನೆ(ಸೆಪ್ಟೆಂಬರ್ 12) ವಿಧಾನಸೌಧದಲ್ಲಿ ಸಭೆ ನಡೆಯಿತು. ಡಿಸಿಎಂ ಡಿಕೆ.ಶಿವಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಚಿವ ನಾಗೇಂದ್ರ, ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ತಮಿಳುನಾಡಿಗೆ ಮತ್ತೆ 5000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ CWRC ಆದೇಶ
ಕಳೆದ ಅಗಸ್ಟ್ 29 ರ CWMA ಆದೇಶ ಅಂತ್ಯವಾದ ಹಿನ್ನಲೆ ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ CWRC ನಡೆಸಿತ್ತು. ಹಳೇ ಆದೇಶದಂತೆ ಮುಂದಿನ 15 ದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ ನೀಡಿದೆ. ಈ ಹಿಂದೆ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿದ್ರೂ ನಿತ್ಯ 3 ಸಾವಿರದಿಂದ 3400 ಕ್ಯೂಸೆಕ್ ನೀರು ಮಾತ್ರ ರಿಲೀಸ್ ಮಾಡಿದೆ. ಇದ್ರಿಂದ ಬೆಳೆಗಳು ನಾಶವಾಗುತ್ತಿದೆ ಅಂತಾ ತಮಿಳುನಾಡು ಆರೋಪಿಸಿತ್ತು. ಅಷ್ಟೇ ಅಲ್ಲದೇ 36.76 ಟಿಎಂಸಿ ಬಾಕಿ ನೀರು ಬಿಡುಗಡೆಗೆ ಒತ್ತಾಯಿಸಿತು..
ಒಟ್ಟಿನಲ್ಲಿ ರಾಜ್ಯ ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನ ಪಾಲಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ಆದೇಶ ಪಾಲಿಸದಿದ್ರೆ ಸೆಪ್ಟೆಂಬರ್ 26ಕ್ಕೆ ಕಾವೇರು ನೀರು ಪ್ರಾಧಿಕಾರ ಸಭೆ ನಡೆಸಲು ನಿರ್ಧರಿಸಿದೆ. ಇತ್ತ ರೈತರ ಹೋರಾಟ ತೀವ್ರಗೊಳ್ಳುತ್ತಿದ್ದು ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:59 am, Wed, 13 September 23