ಕೆಸಿ ಜೆನೆರಲ್ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ ಆರಂಭ; ಇದು ಬಡ ಜನರಿಗಾಗಿ ಎಂದ ಸಿದ್ದರಾಮಯ್ಯ

| Updated By: Rakesh Nayak Manchi

Updated on: Jan 27, 2024 | 8:26 PM

ಇಂದಿನಿಂದ ಕೆಸಿ ಜೆನೆರಲ್ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಗಳು ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಚಿತ ಡಯಾಲಿಸಿಸ್ ಸೇವೆಗಳನ್ನು ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 219 ಡಯಾಲಿಸಿಸ್ ಸೆಂಟರ್​ಗಳಿದ್ದು, ಒಟ್ಟು 800 ಡಯಾಲಿಸಿಸ್ ಯಂತ್ರಗಳನ್ನ ಅಳವಡಿಕೆ ಮಾಡುತ್ತಿದ್ದೇವೆ ಎಂದರು.

ಕೆಸಿ ಜೆನೆರಲ್ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ ಆರಂಭ; ಇದು ಬಡ ಜನರಿಗಾಗಿ ಎಂದ ಸಿದ್ದರಾಮಯ್ಯ
ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಉಚಿತ ಡಯಲಿಸಿಸ್ ಸೇವೆಗಳಿಗೆ ಚಾಲನೆ ನಿಡಿದ ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಜ.27: ನಗರದ ಮಲ್ಲೇಶ್ವರಂನಲ್ಲಿರುವ ಕೆಸಿ ಜೆನೆರಲ್ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಂದು ಕೆಸಿ ಜೆನೆರಲ್ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ (Dialysis) ಸೇವೆಗಳನ್ನು ಉದ್ಘಾಟನೆ ಮಾಡಿದ್ದೇನೆ ನಾನು ಅತ್ಯಂತ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಾಹಿಸಿದ್ದೇನೆ ಎಂದರು.

ಕಿಡ್ನಿ ವೈಫಲ್ಯದಿಂದ ಡಯಾಲಿಸಿಸ್ ಬರುತ್ತದೆ. ಬಡವರಿಗೆ ಡಯಾಲಿಸಿಸ್ ಮಾಡಿಸಿಕೊಳ್ಳುವುದು ದೊಡ್ಡ ಹೊರೆಯಾಗಿದೆ. ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಬೇಕು. ಒಮ್ಮೆ ಡಯಾಲಿಸ್ ಮಾಡಿಸಿದರೆ 2 ರಿಂದ 3 ಸಾವಿರ ರೂಪಾಯಿ ಬೇಕಾಗುತ್ತದೆ. ಬಡವರಿಗೆ ತುಂಬ ಕಷ್ಟ ಆಗುತ್ತದೆ. ಹೀಗಾಗಿ ಸರ್ಕಾರ ಬಡವರಿಗೆ ಸಹಾಯ ಮಾಡಬೇಕು ಅಂತ ಈ ಉಚಿತ ಡಯಾಲಿಸಿಸ್ ಸೇವೆಗಳನ್ನು ಪ್ರಾರಂಭಿಸಿದ್ದೇವೆ ಎಂದರು.

ರಾಜ್ಯದಲ್ಲಿ ಒಟ್ಟು 219 ಡಯಾಲಿಸಿಸ್ ಸೆಂಟರ್​ಗಳಿದ್ದು, ಒಟ್ಟು 800 ಡಯಾಲಿಸಿಸ್ ಯಂತ್ರಗಳನ್ನ ಅಳವಡಿಕೆ ಮಾಡುತ್ತಿದ್ದೇವೆ. ಶ್ರೀಮಂತರು ಹಣ ಕೊಟ್ಟು ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಡವರಿಗೆ ಕಷ್ಟ. ಈ ಕಿಡ್ನಿ ವೈಫಲ್ಯ ಎಲ್ಲಾರಿಗೂ ಬರುತ್ತದೆ. ದೊಡ್ಡವರು, ಚಿಕ್ಕವರಿಗೂ ಬರುತ್ತದೆ. ಕಾಯಿಲೆ ಹೆಚ್ಚಾಗಿ ವಯ್ಯಸ್ಸದವರಿಗೆ ಬಂದರು ಕೂಡ ಚಿಕ್ಕವರಿಗೆ ಬರುವುದಿಲ್ಲ ಅಂತ ಹೇಳುವುದಕ್ಕೆ ಆಗುವುದಿಲ್ಲ ಎಂದರು.

ಇದನ್ನೂ ಓದಿ: ಅಗರ ಗ್ರಾಮದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಆಸ್ಪತ್ರೆ ಉದ್ಘಾಟನೆ; ಕೈಗೆಟಕುವ ದರದಲ್ಲಿ ಚಿಕಿತ್ಸೆ

ವಾರದಲ್ಲಿ ಮೂರು ಬಾರಿಯಾದರೂ ಡಯಾಲಿಸಿಸ್ ಮಾಡಿಸಬೇಕು. ಹೀಗಾಗಿ ಸರ್ಕಾರ ಡಯಾಲಿಸ್ ಮಾಡಿಸಲು ಜನರಿಗೆ ಸಹಾಯವಾಗಲಿ ಎಂಬ ದೃಷ್ಟಿಯಿಂದ ತಾಲೂಕು, ಜಿಲ್ಲೆ, ನಗರದ ಪ್ರದೇಶಗಳಲ್ಲಿ ಅಳವಡಿಕೆ ಮಾಡುತ್ತಿದ್ದೇವೆ ಎಂದರು.

ಕೆಸಿ ಜೆನೆರಲ್ ಆಸ್ಪತ್ರೆ ಅತ್ಯಂತ ಹಳೆಯ ಆಸ್ಪತ್ರೆ. ಸಾಕಷ್ಟು ಜನರು ಈ ಆಸ್ಪತ್ರೆಗೆ ಬರುತ್ತಾರೆ. ಹೀಗಾಗಿ ಈ ಆಸ್ಪತ್ರೆಯಲ್ಲಿ ಸೇವೆಗಳನ್ನ ಆರಂಭಿಸುತಿದ್ದೇವೆ. ಇದೀಗಾ ಏಕಾ ಬಳಕೆಯನ್ನ ಜಾರಿ ಮಾಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ಇದರಿಂದ ಸೋಂಕು ಹರಡುವುದನ್ನ ತಡೆಗಟ್ಟಬಹುದು. ಈ ಡಯಾಲಿಸಿಸ್​ಗೆ ಶೇ.60 ರಷ್ಟು ರಾಜ್ಯ ಸರ್ಕಾರ ಹಾಗೂ ಶೇ.40 ರಷ್ಟು ಕೇಂದ್ರ ಸರ್ಕಾರ ನೀಡುತ್ತದೆ. ಆದರೆ ಡಯಾಲಿಸಿಸ್​ ಕೇಂದ್ರ ಸರ್ಕಾರದ ಯೋಜನೆ ಅಂತಾರೆ ಎಂದರು. ಅಲ್ಲದೆ, ಕೆ.ಸಿ.ಜನರಲ್ ಆಸ್ಪತ್ರೆ ಅಭಿವೃದ್ಧಿಗೆ 150 ಕೋಟಿ ಮೀಸಲಿಟ್ಟಿದ್ದೇವೆ ಎಂದರು.

ಬಡವರಿಗೆ ಅತ್ಯಂತ ಆಸಕ್ತಿಯಿಂದ, ಗುಣಮಟ್ಟದ ಚಿಕಿತ್ಸೆ ನೀಡಬೇಕು. ನಮ್ಮ ರಾಜ್ಯದಲ್ಲಿ ಬಡವರು ಹೆಚ್ಚಿದ್ದಾರೆ. ನಮ್ಮ ಸಮಾಜದಲ್ಲಿ ಅಸಮಾನತೆ ಇದೆ. ಈ ಅಸಮಾನತೆಯಿಂದ ಬಹಳ ಜನ ಕಷ್ಟಪಡುತ್ತಾ ಇದ್ದಾರೆ. ಇದನ್ನ ಹೋಗಲಾಡಿಸುವ ಸಲುವಾಗಿ ಈ ಉಚಿತ ಯೋಜನೆಗಳನ್ನ ಕೊಟ್ಟಿದ್ದೇವೆ ಎಂದರು.

ಶಕ್ತಿ ಯೋಜನೆ ಜಾರಿಯಾದ ನಂತರ ಜೂ.1ರಿಂದ ಈವರೆಗೆ ಈವರೆಗೆ 141 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ಇದರಿಂದ ಪ್ರಯಾಣಕ್ಕೆ ಕೊಡುತ್ತಿದ್ದ ಅವರ ಹಣ ಉಳಿತಾಯವಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ರೂಪಾಯಿ, ಗೃಹಜ್ಯೋತಿ ಯೋಜನೆಯಡಿ ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡಲಾಗುತ್ತಿದ್ದು, ಯುವನಿಧಿ ಯೋಜನೆಯನ್ನೂ ಜಾರಿ ಮಾಡಿದ್ದೇವೆ. ಇಂತಹ ಯೋಜನೆಗಳನ್ನು ಯಾವ ಸರ್ಕಾರವೂ ಜಾರಿ ಮಾಡಿಲ್ಲ ಎಂದರು.

ರಾಜ್ಯದಲ್ಲಿ ಉಚಿತ ಡಯಾಲಿಸಿಸ್​ ಸೇವೆ ನೀಡಿದ್ದೇ ಸಿದ್ದರಾಮಯ್ಯ

ರಾಜ್ಯದಲ್ಲಿ ಉಚಿತ ಡಯಾಲಿಸಿಸ್​ ಸೇವೆ ನೀಡಿದ್ದೇ ಸಿದ್ದರಾಮಯ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲ ಸಮಸ್ಯೆಗಳಿದ್ದವು, ಅದನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ವ್ಯವಸ್ಥೆ ಬದಲಾಯಿಸುವ ನಿಟ್ಟಿನಲ್ಲಿ ನೂತನ ವ್ಯವಸ್ಥೆ ಜಾರಿ ಮಾಡಿದ್ದೇವೆ ಎಂದರು.

ರಾಜ್ಯದ ಪ್ರತಿ ಕೇಂದ್ರದಲ್ಲೂ ಹೊಸ ಯಂತ್ರವನ್ನು ಅಳವಡಿಸಿದ್ದೇವೆ. 42 ತಾಲೂಕುಗಳಲ್ಲಿ ಹೊಸ ಡಯಾಲಿಸಿಸ್​​ ಕೇಂದ್ರಗಳ ಸ್ಥಾಪನೆ, ಸರ್ಕಾರಿ ಆಸ್ಪತ್ರೆಗಳಲ್ಲಿ ನಿತ್ಯ 6 ರೋಗಿಗಳಿಗೆ ಡಯಾಲಿಸಿಸ್ ಸೇವೆ ಇದೆ. ಬೆಂಗಳೂರು, ಮೈಸೂರು, ಬೆಳಗಾವಿಗೆ ಟಂಡರ್ ಮುಗಿದು ಕಾರ್ಯ ಆರಂಭವಾಗಿದೆ‌. ಕಲಬುರಗಿಯಲ್ಲಿ ಮಾತ್ರ ಮತ್ತೆ ಟೆಂಡರ್ ಕರೆಯಲಾಗಿದೆ. ಇನ್ನೊಂದು ವಾರದಲ್ಲಿ ಅದು ಕೂಡ ಆಗಲಿದೆ ಎಂದರು.

ಕೆಸಿ ಜನರಲ್​ಗೆ ಒತ್ತಡ ಹೆಚ್ಚಾಗುತ್ತಿದೆ. ಈ​ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ಮಾಡಲಾಗಿದೆ. 150 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕಿದೆ. ಮುಖ್ಯಮಂತ್ರಿಗಳು ಆಶೀರ್ವಾದ ಮಾಡಿದ್ರೆ ಅದು ಕೂಡ ಆಗಲಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:24 pm, Sat, 27 January 24