ಇದೇ ಮೊದಲ ಬಾರಿಗೆ ನಾಳೆ ವಿಧಾನಸೌಧದಲ್ಲಿ ಸಿಎಂ ಜನಸ್ಪಂದನ ಕಾರ್ಯಕ್ರಮ, ನೋಂದಾಯಿಸಿಕೊಳ್ಳುವುದು ಹೇಗೆ? ಇಲ್ಲಿದೆ ವಿವರ

| Updated By: ರಮೇಶ್ ಬಿ. ಜವಳಗೇರಾ

Updated on: Feb 07, 2024 | 3:53 PM

CM Siddaramaiah Janaspandana Program: ಮುಖ್ಯಮಂತ್ರಿ ಸಿದ್ದರಾಮಯ್ಯನವರ 2ನೇ ಜನಸ್ಪಂದನ ಕಾರ್ಯಕ್ರಮ ನಾಳೆ(ಫೆ.08) ನಡೆಯಲಿದ್ದು, ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ನಡೆದಿವೆ. ರಾಜ್ಯ ಮಟ್ಟದ ಈ ಜನತಾ ದರ್ಶನವನ್ನು ಶಕ್ತಿ ಕೇಂದ್ರ ವಿಧಾನಸೌಧದ ಮುಂಭಾಗ ನಡೆಸುತ್ತಿರುವುದು ವಿಶೇಷವಾಗಿದೆ. ಹಾಗಾದ್ರೆ, ಜನರು ತಮ್ಮ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರುವುದು ಹೇಗೆ? ನೊಂದಾಯಿಸಿಕೊಳ್ಳುವುದು ಹೇಗೆ? ಎನ್ನುವ ವಿವರ ಇಲ್ಲಿದೆ.

ಇದೇ ಮೊದಲ ಬಾರಿಗೆ ನಾಳೆ ವಿಧಾನಸೌಧದಲ್ಲಿ ಸಿಎಂ ಜನಸ್ಪಂದನ ಕಾರ್ಯಕ್ರಮ, ನೋಂದಾಯಿಸಿಕೊಳ್ಳುವುದು ಹೇಗೆ? ಇಲ್ಲಿದೆ ವಿವರ
ಜನಸ್ಪಂದನ ಕಾರ್ಯಕ್ರಮ
Follow us on

ಬೆಂಗಳೂರು, (ಫೆಬ್ರವರಿ 07): ಸ್ಪಂದನಶೀಲ ಆಡಳಿತದ ಭರವಸೆಯನ್ನು ಗಟ್ಟಿಗೊಳಿಸುವ ಪ್ರಯತ್ನವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ( Siddaramaiah )ನಾಳೆ ಅಂದರೆ ಗುರುವಾರ (ಫೆಬ್ರವರಿ 8) ಇದೇ ಮೊದಲ ಬಾರಿಗೆ ವಿಧಾನಸೌಧ (vidhana soudha) ಮುಂಭಾಗದಲ್ಲಿ ರಾಜ್ಯ ಮಟ್ಟದ ‘ಜನಸ್ಪಂದನ’ ಕಾರ್ಯಕ್ರಮ (Janaspandana Program) ನಡೆಸಲಿದ್ದಾರೆ. ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಈ ಜನತಾ ದರ್ಶನ ನಡೆಯಲಿದೆ. ಜನಸಾಮಾನ್ಯರ ಅಹವಾಲು ಆಲಿಸಿ, ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಪ್ರಯತ್ನದೊಂದಿಗೆ ರಾಜ್ಯ ಮಟ್ಟದ ಈ ಜನತಾ ದರ್ಶನವನ್ನು ಶಕ್ತಿ ಕೇಂದ್ರ ವಿಧಾನಸೌಧದ ಮುಂಭಾಗ ನಡೆಸುತ್ತಿರುವುದು ವಿಶೇಷವಾಗಿದೆ.

ಇದು 2ನೇ ಜನಸ್ಪಂದನ ಕಾರ್ಯಕ್ರಮ

ಸಿಎಂ ಸಿದ್ದರಾಮಯ್ಯ ಅವರು ನಡೆಸುತ್ತಿರುವ 2ನೇ ಜನಸ್ಪಂದನ ಕಾರ್ಯಕ್ರಮ ಇದಾಗಿದೆ. ಕಳೆದ ಸೆಪ್ಟೆಂಬರ್‌ ನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮೊದಲ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದು, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದ್ದರು. ಅಲ್ಲದೇ ಜನರ ಸಮಸ್ಯೆಗಳನ್ನು ಆಲಿಸಿ ಆಯಾ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದರು. ನಾಳೆ ಎರಡನೇ ಜನಸ್ಪಂದನ ನಡೆಸಲಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮತ್ತು ಸರಕಾರದ ವರ್ಚಸ್ಸು ಹೆಚ್ಚಿಸಿ, ಜನಪರ ಮತ್ತು ಸ್ಪಂದನಶೀಲ ಆಡಳಿತದ ವಿಶ್ವಾಸವನ್ನು ಜನರಲ್ಲಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

36 ವಿವಿಧ ಇಲಾಖೆಗಳ ಪ್ರತ್ಯೇಕ ಕೌಂಟರ್

ಸಿಎಂ ಜನಸ್ಪಂದನ ಕಾರ್ಯಕ್ರಮಕ್ಕಾಗಿ ವಿಧಾನಸೌಧ ಪೂರ್ವಭಾಗದ ಮೆಟ್ಟಿಲುಗಳ ಬಳಿ ಭರ್ಜರಿ ಸಿದ್ಧತೆ ನಡೆದಿದೆ. ರಾಜ್ಯದ ನಾನಾ ಭಾಗಗಳಿಂದ ಜನರು ಅಹವಾಲು ಹೊತ್ತು ತರುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವತಿಯಿಂದ ತಯಾರಿ ಮಾಡಿಕೊಳ್ಳಲಾಗಿದೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗ ಸಿಎಂ ಜನಸ್ಪಂದನಕ್ಕೆ ಬೃಹತ್ ಜರ್ಮನ್ ಟೆಂಟ್ ಹಾಕಲಾಗಿದೆ. ಹಾಗೇ 20 ಬೃಹತ್ ಎಲ್ ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ. ಇನ್ನು 10 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 36 ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೌಂಟರ್ ಓಪನ್ ಮಾಡಲಾಗಿದ್ದು, ಕೌಂಟರ್ ಗಳಲ್ಲಿ ಆಯಾ ಇಲಾಖೆಯ ಹಿರಿಯ ಅಧಿಕಾರಿಗಳೇ ಸಾರ್ವಜನಿಕ ಮನವಿ ಸ್ವೀಕರಿಸಲಿದ್ದಾರೆ. ಜೊತೆಗೆ ಸಿಎಂ‌ ಸಿದ್ದರಾಮಯ್ಯನವರೇ ಖುದ್ದು ಆ ಕೌಂಟರ್ ಗಳಿಗೆ ತೆರಳಿ ಅರ್ಜಿ ಪರಿಶೀಲನೆ ನಡೆಸಲಿದ್ದಾರೆ.

1902 ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ

ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳು ಜನಸ್ಪಂದನ ಕಾರ್ಯಕ್ರಮದ ಸ್ಥಳದಲ್ಲೇ ಇರುವಂತೆ ಈಗಾಗಲೇ ಸಿಎಂ ಸೂಚನೆ ನೀಡಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಸಿಎಂ ಬಳಿ ಹೇಳಿಕೊಳ್ಳಲು ಅಧಾರ್ ಅಥವಾ ಪಡಿತರ ಕಾರ್ಡ್ ನೊಂದಿಗೆ ಆಗಮಿಸಿ ನೋಂದಣಿ ಮಾಡಿಕೊಳ್ಳಬೇಕು. ಹಾಗೇ ಅನ್ ಲೈನ್ ನಲ್ಲೂ ನೋಂದಾಣಿ ಮಾಡಿಕೊಳ್ಳಬಹುದು. 1902 ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಬಹುದು.

ಇನ್ನು ಮುಖ್ಯವಾಗಿ ಜನಸ್ಪಂದನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಲಘು ಉಪಾಹಾರ ಮತ್ತು ನೀರನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಜನಸ್ಪಂದನಕ್ಕೆ ಬರುವ ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಸಹ ಇರಲಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ವಿಧಾನಸೌಧಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ.

ಕಳೆದ ಬಾರಿ ಸಿಎಂ ಜನಸ್ಪಂದನ ಕಾರ್ಯಕ್ರಮದಲ್ಲಿ 4,130 ಅರ್ಜಿಗಳನ್ನು ಸಿಎಂ ಸ್ವೀಕರಿಸಿದ್ದರು. ಈ ಪೈಕಿ ಶೇ. 97ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ. ಇನ್ನು ಕಳೆದ ಬಾರಿಯ ಜನಸ್ಪಂದನದ ಅಂಕಿ ಅಂಶಗಳನ್ನ ನಾಳೆ ನೀಡುವ ಸಾಧ್ಯತೆ ಇದ್ದು, ಈ ಬಾರಿ ಇನ್ನೂ ಹೆಚ್ಚು ಅರ್ಜಿಗಳು ಬರುವ ನಿರೀಕ್ಷೆ ಇದೆ.

ಸಿಎಂ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಮಾತನಾಡಿ, “ನಾಳೆ ಖುದ್ದು ಸಿಎಂ ಸಿದ್ದರಾಮಯ್ಯನವರು ಜನರಿಂದ ಅಹವಾಲು ಸ್ವೀಕರಿಸಲಿದ್ದಾರೆ. ನಾಳೆ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಸಿಎಂ ಜನರ ಸಮಸ್ಯೆ ಆಲಿಸಲಿದ್ದು, ಎಲ್ಲ ಇಲಾಖೆಗಳಿಗೂ ಸಂಬಂಧಿಸಿದ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರ ಸಮಸ್ಯೆ ಸ್ಥಳದಲ್ಲೇ ಪರಿಹಾರ ನೀಡುವ ಪ್ರಯತ್ನ ಆಗಲಿದ್ದು, 7 ರಿಂದ 10 ಸಾವಿರ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದೆ. 20 ಎಲ್ ಇಡಿ ಪರದೆಯ ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬಸ್ ವ್ಯವಸ್ಥೆ ಇರಲಿದೆ. ಜನರು ಗುರುತಿನ ಚೀಟಿಯೊಂದಿಗೆ ಆಗಮಿಸಿ ನೋಂದಣಿ ಮಾಡಿಕೊಳ್ಳಬೇಕು. ಸಂಬಂಧಪಟ್ಟ ಇಲಾಖೆಯ ಕೌಂಟರ್ ಗೆ ಅರ್ಜಿ ಕೊಟ್ಟರೆ ಖುದ್ದು ಸಿಎಂ ಪರಿಶೀಲನೆ ನಡೆಸಲಿದ್ದಾರೆ. ಎಲ್ಲ ಇಲಾಖೆಯ ಅಧಿಕಾರಿಗಳಿಗೂ ಬೇಕಾದ ಸಿದ್ದತೆಗಳನ್ನ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು”.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.