ಗುತ್ತಿಗೆದಾರರ ಸಮಾವೇಶದಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ! ಕಾರಣ ಇದೆ
CM Siddaramaiah in Contractor's Convention: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಗುತ್ತಿಗೆದಾರರ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಕುರಿತು ಮಾತನಾಡಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರು ಇನ್ನೇನು ರಾಜಕೀಯದಿಂದ ನಿವೃತ್ತರಾಗಿ ಬಿಟ್ಟರು ಎಂದು ಕೊಳ್ಳಬೇಡಿ. ಅವರು ಹೀಗೆನ್ನಲು ಕಾರಣವಿದೆ! ಅದೇನೆಂಬುದು ಇಲ್ಲಿದೆ ನೋಡಿ.
ಬೆಂಗಳೂರು, ಮಾರ್ಚ್ 4: ಬೆಂಗಳೂರಿನಲ್ಲಿ (Bengaluru) ನಡೆದ ಗುತ್ತಿಗೆದಾರರ ಸಮಾವೇಶದಲ್ಲಿ (Contractor’s Convention) ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (Siddaramaiah) ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ. ಹಾಗೆಂದ ಮಾತ್ರಕ್ಕೆ ಸಿದ್ದರಾಮಯ್ಯ ಅವರು ರಾಜಕೀಯದಿಂದ ನಿವೃತ್ತರಾಗುತ್ತಾರೆ ಎಂದುಕೊಳ್ಳಬೇಡಿ. ಅವರು ಹಾಗೆ ಹೇಳಲು ಕಾರಣವಿದೆ! ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಗುತ್ತಿಗೆದಾರರಿಂದ ಐದು ಪೈಸೆ ಕಮಿಷನ್ ಪಡೆದಿರುವುದು ಸಾಬೀತಾದರೂ ರಾಜಕೀಯ ನಿವೃತ್ತಿ ಘೋಷಿಸುವೆ. 2013ರಿಂದ 2018ರವರೆಗೆ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದೆ. 2023ರ ಮೇ 20ರಿಂದ 2ನೇ ಅವಧಿಗೆ ಮುಖ್ಯಮಂತ್ರಿ ಆಗಿದ್ದೇನೆ. ನನ್ನ ಸೇವಾವಧಿಯಲ್ಲಿ ಗುತ್ತಿಗೆದಾರರಿಂದ 5 ಪೈಸೆ ಕಮಿಷನ್ ಪಡೆದಿಲ್ಲ. ನಾನು ಕಮಿಷನ್ ಪಡೆದಿದ್ದೇನೆ ಎಂಬುದು ಸಾಬೀತಾದರೆ ರಾಜಕೀಯದಿಂದ ನಿವೃತ್ತಿಯಾಗುವೆ ಎಂದರು.
ಬಾಕಿ ಬಿಲ್ ಪಾವತಿ ಮಾಡಬೇಕೆಂದು ಗುತ್ತಿಗೆದಾರರು ಕೇಳಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೇಲೆ ಆ ಕುರಿತು 4-5 ಬಾರಿ ಸಭೆ ಮಾಡಿದ್ದೇವೆ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಬಾಕಿ ಬಿಲ್ ಉಳಿಸಿಕೊಂಡಿರಲಿಲ್ಲ. ಬಿಜೆಪಿ ಕಾಲದಲ್ಲಿ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಪ್ರತಿಪಕ್ಷದ ವಿರುದ್ಧ ಆರೋಪ ಮಾಡಿದರು.
ನಾನೇನು ದುಡ್ಡು ಪ್ರಿಂಟ್ ಮಾಡಬೇಕೇ: ಸಿದ್ದರಾಮಯ್ಯ ಪ್ರಶ್ನೆ
ಈ ಹಿಂದೆ ಬಿಜೆಪಿಯವರು ಅವರ ಸರ್ಕಾರವಿದ್ದಾಗ ಹಣ ಇಲ್ಲದೆ ಟೆಂಡರ್ ಕರೆದಿದ್ದರು. ಒಂದೇ ಬಾರಿ ಬಾಕಿ ಬಿಲ್ ರಿಲೀಸ್ ಮಾಡಿ ಎಂದು ಕೇಳಿದ್ದೀರಿ. ಹಾಗೆ ಮಾಡಲು ನಾನೇನು ದುಡ್ಡು ಪ್ರಿಂಟ್ ಮಾಡಲೇ ಎಂದು ಸಿದ್ದರಾಮಯ್ಯ ಗುತ್ತಿಗೆದಾರರನ್ನು ಪ್ರಶ್ನಿಸಿದರು.
ಹಂತ ಹಂತವಾಗಿ ಬಿಲ್ ಕ್ಲಿಯರ್ ಮಾಡುವ ಭರವಸೆ
ಗುತ್ತಿಗೆದಾರರು ಕೊಟ್ಟ ಮನವಿ ಪತ್ರವನ್ನು ಕೂಲಂಕುಷವಾಗಿ ಪರಿಶೀಲನೆ ಮಾಡುವ ಭರಸವೆ ಕೊಟ್ಟ ಸಿಎಂ ಸಿದ್ದರಾಮಯ್ಯ, ಒಂದೇ ಸಾರಿ ಬಿಲ್ ಕೊಡಲು ಆಗುವುದಿಲ್ಲ. ಹಂತ ಹಂತವಾಗಿ ಬಿಲ್ ಕ್ಲಿಯರ್ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರೂಪಾಯಿ ಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಇದುವರೆಗೆ 1 ರೂ. ಕೂಡ ಕೇಂದ್ರ ಸರ್ಕಾರ ಕೊಟ್ಟಿಲ್ಲ. ನಮಗೆ ಕೊಡಬೇಕಾದ ತೆರಿಗೆಯ ಪಾಲನ್ನು ಕೇಂದ್ರ ಸರ್ಕಾರ ಸರಿಯಾಗಿ ಕೊಡ್ತಿಲ್ಲ. ಹೀಗಾಗಿ ನಮ್ಮ ಸರ್ಕಾರದ ಮೇಲೆ ಗುತ್ತಿಗೆದಾರರು ತಪ್ಪು ತಿಳ್ಕೋಬಾರದು. ಎಲ್ಲವನ್ನೂ ನಾನು, ಡಿಸಿಎಂ ಹಾಗೂ ಸಚಿವರು ಕೂತು ಮಾತನಾಡಿ ಬಗೆಹರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಗುತ್ತಿಗೆದಾರರ ಸಮಾವೇಶದಲ್ಲಿ 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ನಿಮ್ಮ ಆರೋಪದ ಬಗ್ಗೆ ನಮ್ಮ ಸರ್ಕಾರದ ಆಯೋಗ ತನಿಖೆ ನಡೆಸುತ್ತಿದೆ. ಏನಾದರೂ ಮಾಹಿತಿ ಇದ್ದರೆ ಆ ಆಯೋಗದ ಮುಂದೆ ಮಾಹಿತಿ ನೀಡಿ. ಯಾರಾದರೂ ಕಮಿಷನ್ಗೆ ಬೇಡಿಕೆ ಇಟ್ಟರೆ ನಾಗಮೋಹನ್ ದಾಸ್ ಆಯೋಗಕ್ಕೆ ದೂರು ಕೊಡಬೇಕು. ಮುಲಾಜಿಲ್ಲದೆ ದೋಷಾರೋಪಣ ಪಟ್ಟಿ ಗುತ್ತಿಗೆದಾರರು ಸಲ್ಲಿಸಬೇಕು. ನಾವು ಒಟ್ಟಾಗಿ ಭ್ರಷ್ಟಾಚಾರವನ್ನು ಕೊನೆಗಾಣಿಸಬೇಕು, ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಕೇಳಿಬಂದಿದ್ದ ಆರೋಪ
ಕಾಂಗ್ರೆಸ್ ಸರ್ಕಾರ ಬಂದ ಬಳಿಕವೂ ಬಾಕಿ ಬಿಲ್ ಬಿಡುಗಡೆ ಮಾಡಲು 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಇತ್ತೀಚೆಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದರು. ಇದನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡ ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೆ ಪತ್ರಿಕಾಗೋಷ್ಠಿ ನಡೆಸಿದ್ದ ಕೆಂಪಣ್ಣ, ಕಮಿಷನ್ಗೆ ಬೇಡಿಕೆಯಿಡದೆ ಲೋಕೋಪಯೋಗಿ ಇಲಾಖೆಯ 600 ಕೋಟಿ ರೂ. ಮೊತ್ತದ ಬಿಲ್ ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದರು. ಇದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ನಿರಾಳವಾಗಿತ್ತು.
ಇದನ್ನೂ ಓದಿ: ಕಮಿಶನ್ ಬೇಡಿಕೆಯಿಡದೆ ಲೋಕೋಪಯೋಗಿ ಇಲಾಖೆಯ 600 ಕೋಟಿ ರೂ. ಮೊತ್ತದ ಬಿಲ್ ಕ್ಲಿಯರ್ ಮಾಡಲಾಗಿದೆ: ಕೆಂಪಣ್ಣ
ಬಿಜೆಪಿ ಸರ್ಕಾರವಿದ್ದಾಗ ಕೆಂಪಣ್ಣ ಮಾಡಿದ್ದ 40 ಪರ್ಸೆಂಟ್ ಕಮಿಷನ್ ಆರೋಪ ತೀವ್ರ ರಾಜಕೀಯ ಕೋಲಾರಹಲಕ್ಕೆ ಕಾರಣವಾಗಿತ್ತು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಕಾಂಗ್ರೆಸ್, ಆಗಿನ ಆಡಳಿತರೂಢ ಬಿಜೆಪಿ ವಿರುದ್ಧ ಸತತ ಅಭಿಯಾನ ನಡೆಸಿತ್ತು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇತರ ಸಚಿವರ ವಿರುದ್ಧ ‘ಪೇ ಸಿಎಂ’ ಪೋಸ್ಟರ್ ಅಭಿಯಾನವನ್ನೂ ನಡೆಸಿತ್ತು. ಇದು ಬಿಜೆಪಿಗೆ ತೀವ್ರ ಹಿನ್ನಡೆ ಉಂಟು ಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Mon, 4 March 24