ದಾವಣಗೆರೆ ಯುವಕನ ಸಾವು ಲಾಕಪ್ ಡೆತ್ ಅಲ್ಲ, ಆದರೂ ಪೊಲೀಸರ ಅಮಾನತಿಗೆ ಸೂಚಿಸಿದ್ದೇನೆ; ಸಿದ್ದರಾಮಯ್ಯ ಹೀಗೆನ್ನಲು ಕಾರಣವಿದೆ!
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಯುವಕ ಮೃತಪಟ್ಟಿರುವುದು ಲಾಕಪ್ ಡೆತ್ ಪ್ರಕರಣ ಅಲ್ಲ. ಆದಾಗ್ಯೂ, ಪೊಲೀಸ್ ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದ್ದಾರೆ. ಲಾಕಪ್ ಡೆತ್ ಅಲ್ಲದಿದ್ದರೂ ಪೊಲೀಸರ ಅಮಾನತಿಗೆ ಸೂಚನೆ ನೀಡಿದ್ದೇಕೆ? ತಿಳಿಯಲು ಮುಂದೆ ಓದಿ.
ಮೈಸೂರು, ಮೇ 25: ದಾವಣಗೆರೆ ಜಿಲ್ಲೆಯ ಚನ್ನಗಿರಿ (Channagiri) ಪೊಲೀಸ್ ಠಾಣೆಯಲ್ಲಿ ಯುವಕನ ಸಾವು (Youth Death) ಲಾಕಪ್ ಡೆತ್ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮೃತ ಯುವಕನಿಗೆ ಮೂರ್ಛೆ ರೋಗ ಇತ್ತು. ಅದರಿಂದ ಆತ ಮೃತ ಪಟ್ಟಿದ್ದಾನೆ. ಆದರೆ, ಎಫ್ಐಆರ್ ಇಲ್ಲದೆ ಪೊಲೀಸರು ಠಾಣೆಗೆ ಕರೆ ತಂದಿದ್ದು ತಪ್ಪು. ಈ ತಪ್ಪಿಗಾಗಿ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದೇನೆ ಎಂದರು.
ಆರೋಪಿಗೆ ಪಿಟ್ಸ್ ಬಂದಿತ್ತು, ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೂ ಕೂಡ ಪ್ರಕರಣದ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಟಿಪ್ಪು ನಗರ ನಿವಾಸಿಯಾಗಿದ್ದ ಅದೀಲ್ (30) ಎಂಬ ವ್ಯಕ್ತಿಯನ್ನು ಒಸಿ (ಮಟ್ಕಾ) ಆಡಿಸುತ್ತಿದ್ದ ಆರೋಪದಲ್ಲಿ ಶುಕ್ರವಾರ ಪೊಲೀಸರು ಠಾಣೆಗೆ ಕರೆ ತಂದಿದ್ದರು. ಪೊಲೀಸರು ಠಾಣೆಗೆ ಕರೆ ತರುತ್ತಿದ್ದಂತೆ ಆರೋಪಿ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಾಗಿಸಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಇದರಿಂದ ಆಕ್ರೋಶಗೊಂಡ ಮೃತ ಕುಟುಂಬಸ್ಥರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದರು.
ಪ್ರಜ್ವಲ್ ಪ್ರಕರಣ: ಕುಮಾರಸ್ವಾಮಿಗೆ ತಿರುಗೇಟು
ಅತ್ಯಾಚಾರಕ್ಕಿಂತ ಅದರ ವಿಡಿಯೋ ಹಂಚಿದ್ದು ದೊಡ್ಡ ಅಪರಾಧ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಹಾಗೆಂದು ಯಾವ ಕಾನೂನಿನಲ್ಲಿದೆ ಹೇಳಿ ಎಂದರು. ಕುಮಾರಸ್ವಾಮಿ ಯಾವುದಾದರೂ ನಿರ್ದಿಷ್ಟ ಸೆಕ್ಷನ್ ಉಲ್ಲೇಖಿಸಿದ್ದಾರೆಯೇ? ಅದು ಭಾರತೀಯ ದಂಡ ಸಂಹಿತೆಯಲ್ಲಿದೆಯಾ? ಅಥವಾ ಇವರೇ ಬರೆದುಕೊಂಡ ಕಾನೂನಿನಲ್ಲಿ ಇದೆಯಾ ಹೇಳಿ ಎಂದರು.
ಇದನ್ನೂ ಓದಿ: ಚನ್ನಗಿರಿ ಠಾಣೆ ಮೇಲೆ ಕಲ್ಲು ತೂರಾಟ, 11 ಪೊಲೀಸರಿಗೆ ಗಾಯ, 10ಕ್ಕೂ ಹೆಚ್ಚು ವಾಹನ ಜಖಂ
ಹಾಗೆಂದು ವಿಡಿಯೋ ವಿತರಣೆಯನ್ನು ನಾನು ಸಮರ್ಥನೆ ಮಾಡುತ್ತಿಲ್ಲ. ಆದರೆ, ರೇಪ್ಗಿಂತ ವಿಡಿಯೋ ಹಂಚಿದ್ದು ಮಹಾ ಅಫರಾದ ಎನ್ನುವುದು ಸರಿಯಲ್ಲ. ಅದು ಅಪರಾಧ ಎಂದು ಹೇಳುವ ಯಾವ ಸೆಕ್ಷನ್ ಕೂಡ ಕಾನೂನಿನಲ್ಲಿ ಇಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Sat, 25 May 24