AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಜನ ಕೇಂದ್ರ ಮಂತ್ರಿಗಳಿದ್ದರೂ ಬಜೆಟ್​ನಲ್ಲಿ ಕರ್ನಾಟಕಕ್ಕೆ ಏನು ಕೊಟ್ಟಿಲ್ಲ: ಸಿದ್ದರಾಮಯ್ಯ ಆಕ್ರೋಶ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಜುಲೈ 23) 2024-25ನೇ ಸಾಲಿನ ಬಜೆಟ್ ಮಂಡಿಸಿದ್ದು, ಆಂಧ್ರ ಪ್ರದೇಶ ಹಾಗೂ ಬಿಹಾರ ರಾಜ್ಯಗಳಿಗೆ ಬಂಪರ್ ಕೊಡುಗೆಗಳನ್ನು ಘೋಷಣೆ ಮಾಡಲಾಗಿದ್ದು, ಇದಕ್ಕೆ ಇಂಡಿಯಾ ಮೈತ್ರಿಕೂಟ ನಾಯಕರು ಅಸಮಾಧಾನ ಹೊರಹಾಕುದ್ದಾರೆ. ಇನ್ನು ಈ ಬಗ್ಗೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, 48.21 ಲಕ್ಷ ಕೋಟಿ ಗಾತ್ರದ ಕೇಂದ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಇದು 14.1 ಲಕ್ಷ ಕೋಟಿ ಸಾಲದ ಬಜೆಟ್ ಆಗಿದೆ. ಆದ್ರೆ, ಈ ಬಜೆಟ್​ನಲ್ಲಿ ಕರ್ನಾಟಕಕ್ಕೆ ಒಂದು ರೀತಿ ಚೊಂಬು ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.

5 ಜನ ಕೇಂದ್ರ ಮಂತ್ರಿಗಳಿದ್ದರೂ ಬಜೆಟ್​ನಲ್ಲಿ ಕರ್ನಾಟಕಕ್ಕೆ ಏನು ಕೊಟ್ಟಿಲ್ಲ: ಸಿದ್ದರಾಮಯ್ಯ ಆಕ್ರೋಶ
ಸಿಎಂ ಸಿದ್ದರಾಮಯ್ಯ
Anil Kalkere
| Updated By: ರಮೇಶ್ ಬಿ. ಜವಳಗೇರಾ|

Updated on: Jul 23, 2024 | 5:45 PM

Share

ಬೆಂಗಳೂರು, (ಜುಲೈ 23): ಬಜೆಟ್​ನಲ್ಲಿ ಕರ್ನಾಟಕಕ್ಕೆ ಒಂದು ರೀತಿ ಚೊಂಬು ಕೊಟ್ಟಿದ್ದಾರೆ. ಬಿಹಾರ, ಆಂಧ್ರಪ್ರದೇಶ ಬಿಟ್ಟರೆ ಬೇರೆ ರಾಜ್ಯಗಳಿಗೆ ಏನೂ ಇಲ್ಲ. ದೇಶದ ಯಾವುದೇ ರಾಜ್ಯಗಳಿಗೆ ಬಜೆಟ್​ನಲ್ಲಿ ಅನುದಾನ ನೀಡಿಲ್ಲ. ನಿರ್ಮಲಾ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕಕ್ಕೆ ವಿಶೇಷ ಅನುದಾನ ನೀಡುತ್ತಾರೆಂಬ ನಿರೀಕ್ಷೆಯಿತ್ತು. ಆದ್ರೆ, ಕರ್ನಾಟಕಕ್ಕೆ ಯಾವುದೇ ಅನುದಾನ ನೀಡದೆ ನಿರ್ಲಕ್ಷಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಪೆರಿಫೆರಲ್ ರಿಂಗ್ ರಸ್ತೆಗೆ ಕೇಂದ್ರ ಸರ್ಕಾರ ನಯಾಪೈಸೆ ನೀಡಿಲ್ಲ. ನಿರ್ಮಲಾ ಸೀತಾರಾಮನ್ ಮೇಲಿದ್ದ ನಿರೀಕ್ಷೆ ಸಂಪೂರ್ಣ ಸುಳ್ಳಾಗಿದೆ ಎಂದು ಕಿಡಿಕಾರಿದರು.

ಕೇಂದ್ರದ ಬಜೆಟ್​ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರದಲ್ಲಿ ರಾಜ್ಯದ ಐವರು ಸಚಿವರಿದ್ದರೂ ಏನನ್ನೂ ಕೊಟ್ಟಿಲ್ಲ. ರಾಜ್ಯದ ಎಚ್.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಸಚಿವರಾಗಿದ್ದಾರೆ. ಕೈಗಾರಿಕಾ ಕ್ಷೇತ್ರ, ರೈಲ್ವೆ ಇಲಾಖೆಗೂ ಏನನ್ನೂ ಕೊಡಲಿಲ್ಲ. ಬಜೆಟ್ ಮೂಲಕ ರೈತರಿಗೆ ಕೇಂದ್ರ ಸರ್ಕಾರ ಪಂಗನಾಮ ಹಾಕಿದೆ. ಒಟ್ಟಾರೆಯಾಗಿ ಇದು ನಿರಾಸದಾಯಕ, ಜನವಿರೋಧಿ ಬಜೆಟ್. ರೈತರು, ಬಡವರು, ಮಹಿಳೆಯರಿಗೆ ಬಹಳ ಅನ್ಯಾಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Union Budget 2024: ಕೇಂದ್ರ ಬಜೆಟ್​ ಬಗ್ಗೆ ಕರ್ನಾಟಕ ಬಿಜೆಪಿ ನಾಯಕರು ಏನಂದ್ರು?

ನಿರ್ಮಲಾ ಸೀತಾರಾಮ್ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ

ಮೋದಿ ಪ್ರಧಾನಿಯಾಗಿ ಉಳಿಯಬೇಕಾದರೆ ಆಂಧ್ರ ಮತ್ತು ಬಿಹಾರದ ಬೆಂಬಲ ಬೇಕು. ಹೀಗಾಗಿ ಅವರಿಗೆ ವಿಶೇಷ ಅನುದಾನ ನೀಡಿದ್ದಾರೆ. ಪ್ರೀ ಬಜೆಟ್ ನಲ್ಲಿ ಅನೇಕ ವಿಷಯ ಹೇಳಿದ್ದರು, ನಾನು ಹೋಗಲು‌ ಆಗಲಿಲ್ಲ. ಹೀಗಾಗಿ ಆಗ ಕೃಷ್ಣಬೈರೇಗೌಡರನ್ನ ನಾನು ಕಳುಹಿಸಿ ಕೊಟ್ಟಿದೆ. 5400 ಕೋಟಿ‌ ರೂ. ಕೊಡಬೇಕೆಂದು‌ ಶಿಫಾರಸ್ಸು ಮಾಡಿದ್ವಿ. ನಿರ್ಮಲಾ ಸೀತಾರಾಮ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ. ಅವರಿಂದ ನಿರೀಕ್ಷೆ ಮಾಡಿಕೊಂಡಿದ್ವಿ. ಕರ್ನಾಟಕದ ಪರ ಇರುತ್ತಾರೆ, ನ್ಯಾಯ ಒದಗಿಸುತ್ತಾರೆಂಬ ನಿರೀಕ್ಷೆ ಇತ್ತು. ಅದೆಲ್ಲ ನಿರಾಸೆ ಮಾಡಿದ್ದಾರೆ, ಅನ್ಯಾಯ ಮಾಡಿದ್ದಾರೆ. ಫೆರಿಫರಲ್‌ ರಿಂಗ್‌ರಸ್ತೆಗೆ 6 ಸಾವಿರ ಕೋಟಿ ಕೊಡ್ತೀವಿ ಅಂದಿದ್ರು ಕೊಡಲಿಲ್ಲ. ಅಪ್ಪರ್ ಭದ್ರಕ್ಕೆ 5300 ಕೋಟಿ ಕೊಡಲಿಲ್ಲ, ಕೊಡ್ತೀವಿ ಅಂದಿದ್ರು ಕೊಡಲಿಲ್ಲ. ನಗರ ವಸತಿ ಯೋಜನೆಗಳಿ 1.2 ರಿಂದ 3 ಲಕ್ಷ ಮಾಡುತ್ತೀವಿ ಅಂದ್ರು ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫೆಬ್ರವರಿಗಿಂತ ಈಗ ಕಡಿಮೆ ಅನುದಾನ

ಈ ಬಜೆಟ್ ನಲ್ಲಿ‌ ರೈತರಿಗೆ ಏನೂ ಪ್ರಯೋಜನ ಆಗಿಲ್ಲ. ಬಜೆಟ್ ನಲ್ಲಿ ಬಡವರು, ರೈತರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಅಂತ ಹೇಳಿದ್ರು. ಇದೀಗ ಈ ವರ್ಗದ ಜನರಿಗೆ ಅನ್ಯಾಯ ಮಾಡಿದ್ದಾರೆ. ಸ್ವಾಮಿನಾಥನ್ ವರದಿ ಬಗ್ಗೆ ಪ್ರಸ್ತಾಪ ಮಾಡಿಲ್ಲ. ರೈತರು ಬಹಳ ವರ್ಷದಿಂದ ಕಾನೂನು ಮಾಡಲು ಹೇಳಿದ್ರು ಮಾಡಲಿಲ್ಲ. ಕಳೆದ ಫೆಬ್ರವರಿಗಿಂತ ಈಗ ಕಡಿಮೆ ಅನುದಾನ ಕೊಟ್ಟಿದ್ದಾರೆ, ಹಲವು ಕ್ಷೇತ್ರಗಳಿಗೆ ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಶಿಕ್ಷಣಕ್ಕೆ 1.25 ಲಕ್ಷ ಕೋಟಿ ಕೊಟ್ಟಿದ್ದಾರೆ. ಗೃಹ ಖಾತೆಗೆ 1.52 ಲಕ್ಷ ಕೋಟಿ ರೂ.. ಆರೋಗ್ಯ ಕ್ಷೇತ್ರ 89509 ಕೋಟಿ‌. ಐಟಿ-ಬಿಟಿ. ಸಂವಹನ ಕ್ಷೇತ್ರಕ್ಕೆ 1.16 ಲಕ್ಷ ಕೋಟಿ ಕೊಟ್ಟಿದ್ದಾರೆ. SC-ST ಅಭಿವೃದ್ಧಿಗೆ 6,700 ಕೋಟಿ ರೂ. ಅನುದಾನ ಇಟ್ಟಿದ್ದಾರೆ ಎಂದರು.

ಮೋದಿ‌ ಸರ್ಕಾರದ ಮೇಲೆ ಭರವಸೆ ಇಟ್ಟಿಕೊಳ್ಳಲು‌ ಆಗುವುದಿಲ್ಲ. 15ನೇ ಹಣಕಾಸು ಹೇಳಿದ್ದನ್ನೇ ಕೊಟ್ಟಿಲ್ಲ. ಇವರದ್ದು ಬರೀ ನಿರೀಕ್ಷೆ ಅಷ್ಟೆ. ಭದ್ರ ಮೇಲ್ದಂಡೆ ಯೋಜನೆಗೆ ಟೆಕ್ನಿಕಲ್ ಸಮಸ್ಯೆ ಎಂಬ ಜೋಷಿ ಹೇಳಿದ್ದಾರೆ. ಹಾಗಾದ್ರೆ 5300 ಕೋಟಿ ಕೊಡ್ತೀವಿ ಅಂದೋರು ಯಾರು? ಕಾರೀಡಾರ್ ನಿಂದ ಕರ್ನಾಟಕಕ್ಕೆ ಏನೂ ಅನುಕೂಲ‌ ಆಗಲ್ಲ. ಕೋಪರೇಷನ್ ಬರುವುದು. ರಾಜ್ಯ ಸರ್ಕಾರದ ಮೇಲೆ. ಇವರು ರಾಜ್ಯಗಳ ಮೇಲೆ ಸವಾರಿ ಮಾಡುತ್ತಿದ್ದಾರೆ. ಆಂಧ್ರ ಬಿಟ್ಟು ಬೇರೆ ರಾಜ್ಯಕ್ಕೆ ಏನೂ ಕೊಟ್ಟಿಲ್ಲ. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಗೂ ಏನೂ ಕೊಟ್ಟಿಲ್ಲ. ರಾಜಕೀಯವಾಗಿ ಅವರು ಉಳಿಬೇಕಾದ ಕಾರಣಕ್ಕೆ ಆಂಧ್ರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.