ರಾಯಚೂರಿನಲ್ಲಿ ದರ್ವೇಶ್ ಗ್ರೂಪ್ನಿಂದ ಬಹುಕೋಟಿ ವಂಚನೆ ಆರೋಪ! ಹೂಡಿಕೆದಾರ ಆತ್ಮಹತ್ಯೆಗೆ ಯತ್ನ
ಜನ ಮರಳೋ ಜಾತ್ರೆ ಮರಳೋ ಗೊತ್ತಿಲ್ಲ. ರಾಜ್ಯದಲ್ಲಿ ಐಎಂಎ, ಆಂಬಿಡೆಂಟ್ ನಂತಹ ಬಹುಕೋಟಿ ವಂಚನೆ ಪ್ರಕರಣಗಳು ಬಡವರನ್ನ ಬೀದಿಗೆ ತಳ್ಳಿದ್ದವು. ಇದೇ ಕೇಸ್ನಂತೆ ಈಗ ಗಡಿ ಜಿಲ್ಲೆಯಲ್ಲೂ ದರ್ವೇಶ್ ಗ್ರೂಪ್ ಎನ್ನುವ ಕಂಪನಿ ಬಹುಕೋಟಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಎಫ್ಐಆರ್ ದಾಖಲಾಗಿದೆ.
ರಾಯಚೂರು, ಜು.23: ನಗರದ ಹೈದರಾಬಾದ್ ರಸ್ತೆಯಲ್ಲಿರುವ ದರ್ವೇಶ್ ಗ್ರೂಪ್(Darvesh group) ಎನ್ನುವ ಕಂಪನಿ ವಿರುದ್ಧ ಬಹುಕೋಟಿ ವಂಚನೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಬಡ್ಡಿ ಮೂಲಕ ಸಾಲ ತೆಗೆದು ಈ ದರ್ವೇಶ್ ಗ್ರೂಪ್ಗೆ ಅದೆಷ್ಡೋ ಜನ ಹೂಡಿಕೆ ಮಾಡಿದ್ದರು. ಆದ್ರೆ, ಕಳೆದ ಕೆಲ ತಿಂಗಳುಗಳಿಂದ ಸರಿಯಾಗಿ ಬಡ್ಡಿ ನೀಡುತ್ತಿಲ್ಲ ಎಂಬ ಆರೋಪವಿತ್ತು. ಇದೇ ಹಣಕಾಸಿನ ವಿಚಾರವಾಗಿ ನಿನ್ನೆ(ಜು.22) ದರ್ವೇಶ್ ಗ್ರೂಪ್ ಕಚೇರಿಯಲ್ಲಿ ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ. ಕಳೆದ ಕೆಲ ತಿಂಗಳುಗಳಿಂದ ದರ್ವೇಶ್ ಗ್ರೂಪ್ ಹೂಡಿಕೆದಾರರಿಗೆ ಸರಿಯಾಗಿ ಸ್ಪಂಧಿಸುತ್ತಿರಲಿಲ್ಲವಂತೆ. ಹಣ ಹೂಡಿಕೆ ಮಾಡಿಸಿಕೊಳ್ಳೊವಾಗ ಇದ್ದ ಕಾಳಜಿ, ಇತ್ತೀಚೆಗೆ ಕಂಪೆನಿಗೆ ಇರ್ಲಿಲ್ಲ. ಕಂಪನಿಯ ಪ್ರಮುಖರ ಜನರ ಕೈಗೆ ಸಿಗ್ತಿಲ್ಲ. ಇತ್ತ ತಿಂಗಳು ತಿಂಗಳು ಬಂದು ಬೀಳ್ತಿದ್ದ ಬಡ್ಡಿ ಕೂಡ ಬಂದಿಲ್ಲ. ಹೀಗಾಗಿ ನಿನ್ನೆ ದರ್ವೇಶ್ ಗ್ರೂಪ್ ಕಚೇರಿಯಲ್ಲಿ ದೊಡ್ಡ ಗಲಾಟೆಯೇ ನಡೆದುಹೋಗಿದೆ.
ಹೂಡಿಕೆದಾರ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ
ತಮ್ಮ ಮಾತಿಗೆ ಬಗ್ಗದೇ ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದು ಉದ್ರಿಕ್ತಗೊಂಡ ನೂರಾರು ಜನ, ದರ್ವೇಶ್ ಕಂಪನಿಗೆ ನುಗ್ಗಿ ಪೀಠೋಪಕರಣ ಧ್ವಂಸಗೊಳಿಸಿದ್ದಾರೆ. ಏಸಿ, ಗ್ಲಾಸ್ ಹೀಗೆ ವಿವಿಧ ವಸ್ತುಗಳನ್ನ ಛಿದ್ರ ಛಿದ್ರ ಮಾಡಿದ್ದಾರೆ. ಇದೇ ವೇಳೆ ಲಕ್ಷ ಲಕ್ಷ ಸಾಲ ಮಾಡಿ ಹಣ ಹೂಡಿದ್ದ ಸೆಕ್ಯೂರಿಟಿ ಗಾರ್ಡ್ ವೆಂಕಟೇಶ್ ಎಂಬಾತ, ಇದೇ ಕಂಪನಿ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇದನ್ನೂ ಓದಿ:ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆ ಹಣ ವಂಚನೆ ಪ್ರಕರಣ; ಮತ್ತೆ ಆರು ಜನರ ಬಂಧನ
ಆತ್ಮಹತ್ಯೆಗೆ ಯತ್ನಿಸಿರುವ ವೆಂಕಟೇಶ್ ಹಾಗೂ ಆತನ ಸಹೋದರ ಜೊತೆ ಸೇರಿ ಸಾಲ ಮಾಡಿ 9.5 ಲಕ್ಷ ಹೂಡಿಕೆ ಮಾಡಿದ್ದರಂತೆ. ಆದ್ರೆ, ನಿನ್ನೆ ಹಣಕಾಸಿನ ಮಾತುಕತೆ ವೇಳೆ ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನು 2022ರಲ್ಲಿ ಈ ಕಂಪನಿ ಶುರುವಾಗಿದ್ದು, ಪಾರ್ಟನರ್ ಶಿಪ್ ಫರ್ಮ್ ಕಂಪನಿ ಎಂದು ಶುರು ಮಾಡಿ, ಶೇಖಡಾ 10 ಹಾಗೂ 10 ಕ್ಕಿಂತ ಹೆಚ್ವು ಬಡ್ಡಿ ದರ ಎಂದು ಹೇಳಿ ಜನರಿಂದ ಹಣ ಹೂಡಿಕೆ ಮಾಡಿಸಿಕೊಳ್ಳಲಾಗುತ್ತಿತ್ತು. ಮೊಹಮ್ಮದ್ ಹುಸೇನ್ ಸುಜಾ, ಸಯ್ಯದ್ ಮಸ್ಕಿನ್ ಹಾಗೂ ಸಯ್ಯದ್ ಎನ್ನುವವರು ಈ ಕಂಪನಿ ನಡೆಸುತ್ತಿದ್ದರು. ಆಟೋ, ಕ್ಯಾಬ್ ಚಾಲಕರು, ಗಾರೆ ಕೆಲಸದವರು ಹೀಗೆ ಬಡ ವರ್ಗದ ಜನರೇ ಹೆಚ್ಚಾಗಿ ಹೂಡಿಕೆ ಮಾಡಿದ್ದರು. ಕೆಲವೊಬ್ಬರು ಮನೆಯನ್ನ ಅಡವಿಟ್ಟು, ಹಣ ತಂದು ಹೆಚ್ಚಿನ ಬಡ್ಡಿ ಆಸೆಗೆ ಇನ್ವೆಸ್ಟ್ ಮಾಡಿದ್ದು ಉಂಟು.
ಅಂದಾಜು 400-500 ಕೋಟಿ ಹೂಡಿಕೆ
ಹೀಗೆ ಸಾವಿರಾರು ಜನ, ಸುಮಾರು 400 ರಿಂದ 500 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ತಮ್ಮ ಏಜೆಂಟ್ರುಗಳ ಮೂಲಕ ಹಣ ಪಡೆದು ಅವರ ಮೂಲಕವೇ ಗ್ರಾಹಕರಿಗೆ ಬಡ್ಡಿ ನೀಡಲಾಗುತ್ತಿತ್ತು. ಆದ್ರೆ, ಇತ್ತೀಚೆಗೆ ಹೋರಾಟಗಾರರು ಇದೇ ಕಂಪೆನಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಮಧ್ಯೆ ಹೂಡಿಕೆದಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ. ಈ ಘಟನೆ ಬಳಿಕ ಕೆಲ ಹೂಡಿಕೆದಾರರು ಕೂಡ ಸೆಲ್ಫಿ ವಿಡಿಯೋ ಮಾಡಿಕೊಂಡು ಹಣ ವಾಪಸ್ ನೀಡದೇ ಇದ್ದಲ್ಲಿ ನದಿಯ ಬ್ರಿಡ್ಜ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರೈಲ್ವೆ ಟ್ರಾಕ್ ಮೇಲೆ ಕೂತು ಕಂಪನಿಗೆ ವಾರ್ನಿಂಗ್ ಕೊಡ್ತಿದ್ದಾರೆ.
ಘಟನೆ ಬಗ್ಗೆ ರಾಯಚೂರಿನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರ್ವೇಶ್ ಕಂಪೆನಿಯ ಮಾಲೀಕರಾದ ಮೊಹಮ್ಮದ್ ಹುಸೇನ್ ಸುಜಾ, ಸಯ್ಯದ್ ಮಸ್ಕಿನ್ ಹಾಗೂ ಸಯ್ಯದ್ ವಿರುದ್ದ ದೂರು ದಾಖಲಿಸಲಾಗಿದೆ. ಇಷ್ಟೆಲ್ಲಆರೋಪಗಳು ಬಂದರೂ ಕಂಪನಿ ಮಾತ್ರ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಇತ್ತ ಕಚೇರಿ ಪೀಠೋಪಕರಣ ಧ್ವಂಸ ಸಂಬಂಧವೂ ಪ್ರಕರಣ ದಾಖಲಾಗಿದೆ. ಅದೆನೆ ಇರಲಿ ಈಗಲೇ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಬಡವರಿಗೆ ನ್ಯಾಯಕೊಡಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:41 pm, Tue, 23 July 24