ಮಂಡ್ಯ: ಈಗ ಎಲ್ಲೆಲ್ಲೂ ಉಪ ಚುನಾವಣೆಯದ್ದೇ ಮಾತು ಕೃತಿ ಸರ್ವಸ್ವವೂ ಆಗಿದೆ. ಈ ವೇಳೆ ಅನಾಚಾರಕ್ಕೆ ಅವಕಾಶ ನೀಡದಂತೆ ಚುನಾವಣಾ ಸಿಬ್ಬಂದಿ, ಪೊಲೀಸರು ಕಟ್ಟೆಚ್ಚರ ವಹಿಸಿರುತ್ತಾರೆ. ಆದ್ರೆ ಇಂದು ಬೆಳಗ್ಗೆ 9.30ರ ಸುಮಾರಿಗೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರು ಕೆಆರ್ ಪೇಟೆಗೆ ಆಗಮಿಸಿದರು. ಆ ವೇಳೆ ಮುಖ್ಯಮಂತ್ರಿ ಪುತ್ರ ಪ್ರಯಾಣಿಸುತ್ತಿದ್ದ ಕಾರನ್ನ ಪೊಲೀಸರು ಕಾಟಾಚಾರಕ್ಕೆ ಪರಿಶೀಲನೆ ನಡೆಸಿದ್ದಾರೆ. ಗಮನಾರ್ಹವೆಂದ್ರೆ ಪೊಲೀಸರು ಕೆಆರ್ ಪೇಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ಚೆಕ್ ಪೋಸ್ಟ್ ನಿರ್ಮಿಸಿ, ವಾಹನ ತಪಾಸಣೆಗಳಲ್ಲಿ ತೊಡಗಿದ್ದಾರೆ.
ವಿಜಯೇಂದ್ರ ತಮ್ಮ ಬೆಂಬಲಿಗರ ಜೊತೆ ಶ್ರವಣಬೆಳಗೊಳ ರಸ್ತೆ ಮೂಲಕ ನಾಲ್ಕು ವಾಹನಗಳಲ್ಲಿ ಕೆಆರ್ ಪೇಟೆಗೆ ಬಂದರು. ಕೆಆರ್ ಪೇಟೆ ಚುನಾವಣೆ ಉಸ್ತುವಾರಿಗಳಲ್ಲಿ ವಿಜಯೇಂದ್ರ ಸಹ ಒಬ್ಬರು. ವಿಜಯೇಂದ್ರ ಪ್ರಯಾಣಿಸುತ್ತಿದ್ದ ಕಾರು ಸೇರಿದಂತೆ ನಾಲ್ಕು ಕಾರುಗಳನ್ನ ಸರಿಯಾಗಿ ತಪಾಸಣೆ ಮಾಡದೆ ಪೊಲೀಸರು ಹಾಗೆಯೇ ಬಿಟ್ಟುಕಳುಹಿಸಿದ್ದಾರೆ. ಇಷ್ಟಕ್ಕೂ ಕಾರಿನಲ್ಲಿ ನಾಲ್ಕು ಸೂಟ್ ಕೇಸ್ ರೀತಿಯ ಬ್ಯಾಗ್ ಗಳಿದ್ದವು. ಅದನ್ನ ತೆಗೆಸಿ ನೋಡದ ಸಿಬ್ಬಂದಿ, ಕಾರನ್ನು ಹಾಗೆಯೇ ಬಿಟ್ಟಿದ್ದಾರೆ. ಕಾರುಗಳನ್ನ ನಿಲ್ಲಿಸಿ ಚೆಕ್ ಮಾಡುವ ರೀತಿ ಮಾಡಿದರಾದರೂ ಅದು ಸಿಎಂ ಪುತ್ರನ ಕಾರು ಎಂಬುದು ತಿಳಿಯುತ್ತಿದ್ದಂತೆ ಸುಮ್ಮನಾಗಿದ್ದಾರೆ.
ಇದೇ ಪೊಲೀಸರು ಸಾರ್ವಜನಿಕರ ವಾಹನಗಳನ್ನ ಸಂಪೂರ್ಣವಾಗಿ ತಪಾಸಣೆ ನಡೆಸಿ, ಬ್ಯಾಗ್ ಗಳಿದ್ದರೆ ಅವುಗಳನ್ನೂ ಓಪನ್ ಮಾಡಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗಾಗಿ ಪೊಲೀಸರ ಈ ನಡೆ ಅನುಮಾನಕ್ಕೆ ಕಾರಣವಾಗಿದೆ.
Published On - 12:41 pm, Mon, 18 November 19