ನಾಳೆಯ ಮುಷ್ಕರದಲ್ಲಿ ಏನೇ ನಡೆದರೂ ಕೋಡಿಹಳ್ಳಿ ಚಂದ್ರಶೇಖರ ಹೊಣೆ; ಬಿಎಂಟಿಸಿ ಎಂಡಿ ಶಿಖಾಗೆ ದೂರು
KSRTC BMTC Bus Strike: ಬಸ್ ಅಗತ್ಯ ಸೇವೆಯಾಗಿದೆ. ಸೇವೆ ನೀಡೋದು ನಮ್ಮ ಮುಖ್ಯ ಧ್ಯೇಯವಾಗಿದೆ. ಹೀಗಾಗಿ ಮುಷ್ಕರ ವೇಳೆಯಲ್ಲಿ ಅಹಿತಕರ ಘಟನೆ ನಡೆದರೆ ಅದಕ್ಕೆ ಕೋಡಿಹಳ್ಳಿ ಚಂದ್ರಶೇಖರ ಮತ್ತು ಕೆಎಸ್ ಆರ್ಟಿಸಿ ನೌಕರರ ಕೂಟದ ಚಂದ್ರಶೇಖರ್ ಅವರೇ ಹೊಣೆಯಾಗಿಸಿ ಎಂದು ಬಿಎಂಟಿಸಿ ಚಾಲಕ ತ್ಯಾಗರಾಜ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಸಾರಿಗೆ ನೌಕರರ ಮುಷ್ಕರ ಘೋಷಣೆಯ ಬೆನ್ನಲ್ಲೇ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ BMTC ಚಾಲಕ ತ್ಯಾಗರಾಜ್ ಎಂಬುವವರು ಬಿಎಂಟಿಸಿ ಎಂಡಿ ಶಿಖಾ ಅವರಿಗೆ ದೂರು ಸಲ್ಲಿಸಿದ್ದಾರೆ.
ಬಸ್ ಅಗತ್ಯ ಸೇವೆಯಾಗಿದೆ. ಸೇವೆ ನೀಡೋದು ನಮ್ಮ ಮುಖ್ಯ ಧ್ಯೇಯವಾಗಿದೆ. ಹೀಗಾಗಿ ಮುಷ್ಕರ ವೇಳೆಯಲ್ಲಿ ಅಹಿತಕರ ಘಟನೆ ನಡೆದರೆ ಅದಕ್ಕೆ ಕೋಡಿಹಳ್ಳಿ ಚಂದ್ರಶೇಖರ ಮತ್ತು ಕೆಎಸ್ ಆರ್ಟಿಸಿ ನೌಕರರ ಕೂಟದ ಚಂದ್ರಶೇಖರ್ ಅವರೇ ಹೊಣೆಯಾಗಿಸಿ ಎಂದು ಬಿಎಂಟಿಸಿ ಚಾಲಕ ತ್ಯಾಗರಾಜ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಸಿ.ಕಳಸದ್ ಮನವಿ ಇದೇ ವೇಳೆ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಸರ್ವಪ್ರಯತ್ನ ಮಾಡುತ್ತಿದೆ. ಯಾರ ಪ್ರಚೋದನೆಗೂ ಒಳಗಾಗದೆ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ಎಂದು ಕರಪತ್ರ ಪ್ರಕಟಿಸಿ ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಸಿ.ಕಳಸದ ಮನವಿ ಮಾಡುತ್ತಿದ್ದಾರೆ. ರಾಜ್ಯದ ಸಾರಿಗೆ ನೌಕರರು ಮುಷ್ಕರ ಕೈಬಿಡುವಂತೆ ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಸಿ.ಕಳಸದ ಮನವಿ ಮಾಡಿದ್ದಾರೆ.
ಸಾರಿಗೆ ನೌಕರರು ಮುಷ್ಕರ ಮಾಡುವುದು ಕಾನೂನುಬಾಹಿರ. ರಾಜ್ಯದ ಸಾರಿಗೆ ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ. ಆದರೂ ಸರ್ಕಾರದ ಅನುದಾನದಿಂದ ವೇತನ ನೀಡಲಾಗುತ್ತಿದೆ. ಮಾರ್ಚ್ 16ರಂದೇ ಸಾರಿಗೆ ನೌಕರರಿಗೆ ನೋಟಿಸ್ ನೀಡಲಾಗಿತ್ತು. ಅದಾದ ಬಳಿಕ ಹಲವು ಭಾರಿ ಸಂಧಾನಕ್ಕಾಗಿ ಸಭೆ ನಡೆದಿದೆ. ಆದರೂ ಈಗ ಮುಷ್ಕರ ಮಾಡುತ್ತಿರುವುದು ಸರಿಯಲ್ಲ. ಎಸ್ಮಾ ಜಾರಿ ಮಾಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ. ಸಿಎಂ ಯಡಿಯೂರಪ್ಪ ಸಾರಿಗೆ ಸಿಬ್ಬಂದಿಗಳ 8 ಬೇಡಿಕೆಗಳನ್ನು ಈಡೇರಿಸಿದ್ದಾರೆ. ಜತೆಗೆ 200 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದ್ದಾರೆ. ಈಗ ಆರ್ಥಿಕ ಸಂಕಷ್ಟದ ನಡುವೆ ಬೇಡಿಕೆ ಈಡೇರಿಕೆ ಕಷ್ಟವಾಗಲಿದೆ. ನಾಳೆ ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ನೌಕರರಿಗೆ ರಕ್ಷಣೆ ನೀಡುತ್ತೇವೆ. ಹೀಗಾಗಿ ಯಾರಿಗೂ ಭಯ ಬೀಳದೆ ಕರ್ತವ್ಯಕ್ಕೆ ಹಾಜರಾಗಿ ಎಂದು ಅವರು ಸಾರಿಗೆ ಸಿಬ್ಬಂದಿಗಳಲ್ಲಿ ಮನವಿ ಮಾಡಿದ್ದಾರೆ.