ರಾಜ್ಯಪಾಲರ ನಡೆ ವಿರುದ್ದ ಕೈ ಪಡೆ ಕೆಂಡಾಮಂಡಲ: ರಾಷ್ಟ್ರಪತಿಗೆ ದೂರು ನೀಡಲು ಚಿಂತನೆ!
ಹಿಂದೆ ನಡೆದಿದೆ ಎನ್ನಲಾದ ಹಗರಣದ ದಾಖಲೆ, ಆರೋಪಕ್ಕೆ ಸ್ಪಷ್ಟನೆ ಸೇರಿದಂತೆ ಹಲವು ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಮೇಲಿಂದ ಮೇಲೆ ಪತ್ರ ಬರೆಯುತ್ತಿದ್ದಾರೆ. ಒಂದು ರೀತಿಯಲ್ಲಿ ಸರ್ಕಾರಕ್ಕೆ ಮಗ್ಗಲುಮುಳ್ಳಾಗಿರುವ ರಾಜ್ಯಪಾಲರ ವಿರುದ್ಧ ಕೈ ಪಡೆ ಸಮರ ಸಾರುತ್ತಿದೆ. ಕರುನಾಡಲ್ಲಿ ಇದೀಗ ರಾಜ್ಯ ಸರ್ಕಾರ ವರ್ಸಸ್ ರಾಜಭವನ ಅನ್ನುವಂತಾಗಿದೆ.
ಬೆಂಗಳೂರು, (ಸೆಪ್ಟೆಂಬರ್ 23): ಪಶ್ಚಿಮ್ ಬಂಗಾಳ, ತಮಿಳುನಾಡು ಆಯ್ತು ಈಗ ಕರ್ನಾಟಕದಲ್ಲಿ ಗವರ್ನರ್ ವರ್ಸಸ್ ಗವರ್ನಮೆಂಟ್ ಗುದ್ದಾಟ ಶುರುವಾಗಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ, ಖುದ್ದು ರಾಜ್ಯಪಾಲರ ವಿರುದ್ದವೇ ಸಿಎಂ, ಡಿಸಿಎಂ ಆದಿಯಾಗಿ ಸಚಿವರು ಗುಡುಗುವಂತಾಗಿದೆ. ಈಗಾಗಲೇ ಸರ್ಕಾರಕ್ಕೆ ತಲೆ ನೋವಾಗಿ ಕಾಡುತ್ತಿರುವ ರಾಜ್ಯಪಾಲರು, ಸರ್ಕಾರದ ಇಂಚಿಂಚೂ ನಡೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಗಂತೂ ರಾಜಭವನದ ಜೊತೆಗೆ ವರದಿ ಸಂವಹನ ಮಾಡುವುದೇ ದೊಡ್ಡ ಕೆಲಸವಾಗಿದೆ. ಇಡೀ ಸಚಿವ ಸಂಪುಟದ ಪ್ರತಿ ನಿರ್ಣಯಗಳ ಮೇಲೂ ರಾಜ್ಯಪಾಲರ ಹದ್ದಿನ ಕಣ್ಣಿಟ್ಟಿದ್ದಾರೆ. ಹಳೆಯ ವರದಿಗಳ ಮೇಲೂ ಗಮನ ಹರಿಸಿರುವ ರಾಜ್ಯಪಾಲರು, 8 ರಿಂದ 10 ಸಚಿವರ ಇಲಾಖೆಗೆ ಸಂಬಂಧಿಸಿ ಮಾಹಿತಿ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ, ಇದುವರೆಗೆ ರಾಜ್ಯ ಸರ್ಕಾರಕ್ಕೆ 2023 ರಿಂದ ಇಲ್ಲಿ ತನಕ 15 ಕ್ಕೂ ಹೆಚ್ಚು ಬಾರಿ ಪತ್ರ ವ್ಯವಹಾರ ಮಾಡಿದ್ದಾರೆ ಎನ್ನಲಾಗಿದೆ.
ಎಲ್ಲ ಸಂದರ್ಭದಲ್ಲಿ ರಾಜ್ಯ ಸರ್ಕಾರದ ನಡೆ ಮೇಲೆ ಕಣ್ಣು ನೆಟ್ಟಿದ್ದಾರಂತೆ. ಸಿಎಂ ಸಿದ್ದರಾಮಯ್ಯ, ಎಂಬಿ ಪಾಟೀಲ್ ಪ್ರಿಯಾಂಕ್ ಖರ್ಗೆ ಚೆಲುವರಾಯಸ್ವಾಮಿ ಕೆ ಎನ್ ರಾಜಣ್ಣ ಸೇರಿ ಹಲವು ಸಚಿವರು ರಾಜ್ಯಪಾಲರ ರಾಡಾರ್ ನಲ್ಲಿದ್ದು, ಅರ್ಕಾವತಿ ಡಿನೋಟಿಫೈ ವರದಿ ಬಗ್ಗೆಯೂ ಮುಂದೆ ರಾಜ್ಯಪಾಲರು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.. ಹೀಗಾಗಿ ರಾಜ್ಯಪಾಲರ ನಡೆ ವಿರುದ್ದ ರಾಷ್ಟ್ರಪತಿಗಳಿಗೆ ದೂರು ನೀಡುವುದಕ್ಕೂ ಕಾಂಗ್ರೆಸ್ ಪಕ್ಷದೊಳಗೆ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಮುಡಾ ಹಗರಣ: ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಭವಿಷ್ಯ ನಾಳೆ ನಿರ್ಧಾರ, ಎಲ್ಲರ ಚಿತ್ತ ಹೈಕೋರ್ಟ್ನತ್ತ
ಇನ್ನು ದಿನೇ ದಿನೇ ರಾಜ್ಯಪಾಲರ ನಡೆ ವಿರುದ್ದ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕ್ತಿದ್ದಾರೆ. ರಾಜ್ಯಪಾಲರು ಒಂದು ರೀತಿ, ವಿಪಕ್ಷಗಳಿಂದ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರ್ತಿದ್ದಾರೆ. ಇವತ್ತು ಕೂಡ ಇಂಗ್ಲಿಷ್ ನಲ್ಲಿ ಸಹಿ ಹಾಕಿದ್ದ ವಿಚಾರಕ್ಕೂ ರಿಪೋರ್ಟ್ ಕೇಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.
ಇದಿಷ್ಟೇ ಅಲ್ಲ, ಸರ್ಕಾರದ ಸಚಿವರು ಕೂಡ ಗೌವರ್ನರ್ ವಿರುದ್ದ ಕೆಂಡ ಕಾರುತ್ತಿದ್ದಾರೆ. ಪದೇ ಪದೇ ಪತ್ರ ವ್ಯವಹಾರ ಮಾಡುತ್ತಿರೋದಕ್ಕೆ ಪಾಟೀಲ್ ಸಿಡಿಮಿಡಿಗೊಂಡಿದ್ದಾರೆ. ಇನ್ನು, ರಾಜ್ಯಪಾಲರ ಮೇಲೆ ಆರೋಪ ಮಾಡುತ್ತಿರೋ ಕಾಂಗ್ರೆಸ್ ನಾಯಕರ ವಿರುದ್ದ ಸಿಟಿ ರವಿ ಕೆರಳಿದ್ದಾರೆ. ದೂರುಗಳ ಕುರಿತು ವರದಿ ಕೊಡಿ ಅಂದ್ರೆ ತಪ್ಪಾ ಅಂತ ಪ್ರಶ್ನಿಸಿದ್ದಾರೆ..
ಅದೇನೇ ಹೇಳಿ, ಹಾವು ಮುಂಗುಸಿಯಂತೆ ರಾಜ್ಯ ಸರ್ಕಾರ ಹಾಗೂ ರಾಜಭವನ ಕಾದಾಟ ಮುಂದುವರಿದಿದೆ. ನಿತ್ಯವೂ ಒಂದಿಲ್ಲೊಂದು ಬೆಳವಣಿಗೆ ನಡೆಯುತ್ತಿದ್ದು, ಮುಂದೆ ಈ ಕದನ ಅದೆಲ್ಲಿಗೆ ಹೋಗಿ ಮುಟ್ಟುತ್ತೋ ಕಾದು ನೋಡಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ