ದೆಹಲಿಯಲ್ಲಿ ಮುಡಾ ಕದನ: ರಾಜ್ಯಪಾಲರ ನಿರ್ಧಾರದ ವಿರುದ್ಧ ಹೋರಾಟಕ್ಕೆ ಎಐಸಿಸಿ ಕರೆ, ಇಲ್ಲಿದೆ ಸಭೆ ಇನ್​​ಸೈಡ್ ವಿವರ

| Updated By: ರಮೇಶ್ ಬಿ. ಜವಳಗೇರಾ

Updated on: Aug 23, 2024 | 10:11 PM

ಮುಡಾ ಬೆಂಕಿ.. ರಾಜ್ಯ ರಾಜಕಾರಣದಲ್ಲಿ ಧಗಧಗಿಸ್ತಿರೋ ಜ್ವಾಲೆ.. ಕ್ಷಣ ಕ್ಷಣಕ್ಕೂ ವ್ಯಾಪಿಸ್ತಿರೋ ಕಿಚ್ಚು..ಇದೀಗ ಮುಡಾ ಕದನವನ್ನ ಗಂಭೀರವಾಗಿ ಪರಿಗಣಿಸಿರೋ ರಾಜ್ಯ ಕಾಂಗ್ರೆಸ್, ರಾಷ್ಟ್ರ ಮಟ್ಟದಲ್ಲೂ ರಾಜ್ಯಪಾಲರ ವಿರುದ್ಧ ಹೋರಾಡಲು ತೊಡೆ ತಟ್ಟಿ ನಿಂತಿದೆ. ಹೀಗಾಗಿ ಮುಡಾ ಹಗರಣವನ್ನ ಹೈಕಮಾಂಡ್ ಅಂಗಳಕ್ಕೆ ಕೊಂಡೊಯ್ದಿದೆ. ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿ ಸಮರ ಸಾರಿದೆ. ಹಾಗಾದ್ರೆ, ಸಭೆಯಲ್ಲಿ ಹೈಕಮಾಂಡ್​, ರಾಜ್ಯ ನಾಯಕರಿಗೆ ಏನೇನು ಹೇಳಿದೆ ಎನ್ನುವ ಇನ್‌ಸೈಡ್ ಮಾಹಿತಿ ಇಲ್ಲಿದೆ.

ದೆಹಲಿಯಲ್ಲಿ ಮುಡಾ ಕದನ: ರಾಜ್ಯಪಾಲರ ನಿರ್ಧಾರದ ವಿರುದ್ಧ ಹೋರಾಟಕ್ಕೆ ಎಐಸಿಸಿ ಕರೆ, ಇಲ್ಲಿದೆ ಸಭೆ ಇನ್​​ಸೈಡ್ ವಿವರ
ಕಾಂಗ್ರೆಸ್ ನಾಯಕರ ಸಭೆ
Follow us on

ನವದೆಹಲಿ/ಬೆಂಗಳೂರು, (ಆಗಸ್ಟ್​ 23): ಮುಡಾ ಹಗರಣ. ಸಿಎಂ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನ ನೀಡಲಾಗಿದೆ ಅನ್ನೋ ಆರೋಪದ ದಿನದಿಂದ ದಿನಕ್ಕೆ ಧಗಧಗಿಸುತ್ತಿದೆ. ಅದರಲ್ಲೂ ರಾಜ್ಯಪಾಲರು, ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತರ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಸದ್ಯ ಹೈಕೋರ್ಟ್ ಸಿಎಂಗೆ ತಾತ್ಕಾಲಿಕ ರಿಲೀಫ್ ನೀಡಿದ್ದು, ಮುಂದಿನ ವಿಚಾರಣೆಯನ್ನ ಆಗಸ್ಟ್ 29ಕ್ಕೆ ನಿಗದಿ ಪಡಿಸಿದೆ. ಹಾಗಂತ ಕಾಂಗ್ರೆಸ್ ನಾಯಕರು ಸುಮ್ನೆ ಕೂತಿಲ್ಲ. ಸುಮ್ನೆ ಕೂರುವುದಿಲ್ಲ ಎಂದು ರಾಜ್ಯಪಾಲರ ನಡೆ ವಿರುದ್ಧ ಸಮರ ಸಾರಿದ್ದಾರೆ. ಕಾಂಗ್ರೆಸ್ ಹೋರಾಟಕ್ಕೆ ಹೈಕಮಾಂಡ್ ಬಲವೂ ಸಿಕ್ಕಿದೆ.

ರಾಜ್ಯಪಾಲರ ವಿರುದ್ಧ ಸಮರಕ್ಕೆ ನಿಂತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜೊತೆ ಪ್ರಕರಣದ ಬಗ್ಗೆ ಚರ್ಚಿಸಿದರು. ಬರೀ ಚರ್ಚೆ ನಡೆಸಿಲ್ಲ, ದಾಖಲೆ ಸಮೇತ ಚರ್ಚೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಪ್ಲ್ಯಾನ್ ಮಾಡಿದ್ದಾರೆ. ಹಾಗಾದ್ರೆ, ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ನೀಡಿದ ಸಲಹೆ ಏನು? ಕಾಂಗ್ರೆಸ್‌ನ ಮುಂದಿನ ಹೋರಾಟ ಹೇಗಿರುತ್ತೆ? ರಾಷ್ಟ್ರಪತಿಗಳಿಗೆ ದೂರು ಕೊಡುತ್ತಾರಾ? ಸಭೆಯಲ್ಲಿ ಆಗಿದ್ದೇನು ಎನ್ನುವ ಇನ್‌ಸೈಡ್ ಮಾಹಿತಿ ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ಬೆನ್ನಿಗೆ ನಿಂತ ಹೈಕಮಾಂಡ್, ಯಾರು ಏನು ಹೇಳಿದ್ರು? ಇಲ್ಲಿದೆ ವಿವರ

ಸಭೆಯ ಇನ್​ಸೈಡ್​ ಮಾಹಿತಿ

ಎಐಸಿಸಿ ಕಚೇರಿಯಲ್ಲಿ ಮುಡಾ ಹಗರಣ ಮತ್ತು ರಾಜ್ಯಪಾಲರ ಪ್ರಾಸಿಕ್ಯೂಷನ್ ನಿರ್ಧಾರದ ಬಗ್ಗೆ ಕಾಂಗ್ರೆಸ್ ನಾಯಕರು ಮಹತ್ವದ ಚರ್ಚೆ ನಡೆಸಿದರು. ಮುಂದಿನ ಹೋರಾಟದ ಬಗ್ಗೆ ಮಾತುಕತೆ ನಡೆಸಲಾಯ್ತು. ಬಿಜೆಪಿ ಏನೇ ಆರೋಪ ಮಾಡಿದರೂ ತಿರುಗೇಟು ನೀಡಿ, ಕಾನೂನು ಹೋರಾಟದ ಮೂಲಕವೇ ಉತ್ತರ ಕೊಡಿ ಎಂದು ಹೈಕಮಾಂಡ್ ಖಡಕ್ ಸೂಚನೆ ಕೊಟ್ಟಿದೆ. ಸುಪ್ರೀಂಕೋರ್ಟ್ ಆದರೂ ಪರವಾಗಿಲ್ಲ ಕಾನೂನು ಹೋರಾಟ ಮುಂದುವರೆಸಿ ಎಂದು ಅಭಯ ನೀಡಿದ್ದಾರೆ. ಅಷ್ಟೇ ಅಲ್ಲ, ಗ್ಯಾರಂಟಿಯನ್ನೇ ಅಸ್ತ್ರಮಾಡಿಕೊಂಡು, ಗ್ಯಾರಂಟಿ ಸಹಿಸದೇ ಸಿಎಂ ವಿರುದ್ಧ ಬಿಜೆಪಿ ಆರೋಪಿಸುತ್ತಿದೆ ಎಂದು ಹೇಳಿಕೆಗಳನ್ನ ನೀಡಿ ಎಂದು ರಾಜ್ಯ ನಾಯಕರಿಗೆ ಸಲಹೆ ನೀಡಿದೆ.

ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ವಿರುದ್ಧ ಮೋದಿ, ಶಾ ಷಡ್ಯಂತ್ರ ಮಾಡುತ್ತಿದ್ದಾರೆ, ರಾಜ್ಯಪಾಲರ ಮೂಲಕ ಸರ್ಕಾರವನ್ನ ಅಸ್ಥಿರಗೊಳಿಸಲು ಹೊರಟಿದ್ದಾರೆ. ಹೀಗಂತಾ ಬಿಜೆಪಿ-ಜೆಡಿಎಸ್ ನಾಯಕರಿಗೆ ತಿರುಗೇಟು ನೀಡುವಂತೆ ಹೈಕಮಾಂಡ್ ನಾಯಕರು ಹೇಳಿದ್ದಾರೆ. ಹೆಜ್ಜೆ ಹೆಜ್ಜೆ ರಾಜ್ಯಪಾಲರ ನಡೆ ಖಂಡಿಸಿ ಹೇಳಿಕೆಗಳನ್ನ ನೀಡಿ ಎಂದು ಹೋರಾಟಕ್ಕೆ ಎಐಸಿಸಿ ಕರೆ ನೀಡಿದೆ. ಜೊತೆಗೆ ಯಾವುದೇ ಕಾರಣಕ್ಕೂ ಯಾವುದೇ ನಾಯಕರು ಸಿಎಂ ವಿರುದ್ಧ ಮಾತನಾಡುವಂತಿಲ್ಲ. ಎಲ್ಲಾ ನಾಯಕರು ಸಿಎಂ ಸಿದ್ದರಾಮಯ್ಯರನ್ನ ಸಮರ್ಥಿಸಿಕೊಳ್ಳಬೇಕು. ಯಾವುದೇ ಗೊಂದಲ ಇರಬಾರದು. ಸರ್ಕಾರ ಮತ್ತು ಪಕ್ಷದಲ್ಲಿ ಗೊಂದಲವಿಲ್ಲದೇ ಒಗ್ಗಟ್ಟಾಗಿ ಹೋರಾಡಿ ಅಂತಾ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಂದೇಶ ರವಾನಿಸಿದೆ.

ಸರಾಜ್ಯಪಾಲರು ಸೆಲೆಕ್ಟಿವ್ ಆಗಿ ಪ್ರಾಸಿಕ್ಯೂಷನ್‌ಗೆ ನೀಡಿದ್ದಾರೆ ಅನ್ನೋದು ಕಾಂಗ್ರೆಸ್ ನಾಯಕರ ವಾದ. ಹೀಗಾಗಿ ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ರಾಜ್ಯಪಾಲರ ನಡೆ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ರಾಷ್ಟ್ರಪತಿಗಳ ಮುಂದೆ ಪರೇಡ್‌ಗೆ ಶಾಸಕರು ಸಲಹೆ ನೀಡಿದ್ರು. ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ ಎಂದು ಒತ್ತಾಯಿಸೋಣ ಹೇಳಿದ್ದರು. ಈ ಬಗ್ಗೆಯೂ ದೆಹಲಿಯ ಎಐಸಿಸಿ ಸಭೆಯಲ್ಲಿ ಚರ್ಚೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಣದೀಪ್ ಸುರ್ಜೇವಾಲ, ರಾಷ್ಟ್ರಪತಿಗಳಿಗೆ ದೂರು ನೀಡುವ ಬಗ್ಗೆ ನಮ್ಮ ಮುಂದೆ ಆಯ್ಕೆ ಇದೆ. ಈ ಬಗ್ಗೆ ಮುಂದೆ ತಿಳಿಸೋದಾಗಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.