
ಬೆಳಗಾವಿ, (ಡಿಸೆಂಬರ್ 08): ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ವಿರುದ್ದ ಕಾಂಗ್ರೆಸ್ ಎಂಎಲ್ಸಿ ನಾಗರಾಜ್ ಯಾದವ್ (Nagaraj Yadav) ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಭ್ರಷ್ಟಾಚಾರ, ಅಕ್ರಮ ನೇಮಕಾತಿ, ಫೋನ್ ಟ್ಯಾಪಿಂಗ್ ಸೇರಿದಂತೆ ಹಲವು ಇತರೆ ಆರೋಪ ಮಾಡಿದ್ದಾರೆ. ಹೀಗೆ ಹಲವು ಆರೋಪ ಎದುರಿಸುತ್ತಿರುವ ಹೊರಟ್ಟಿಯವರ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಬೇಕು ಎಂದು ಯಾದವ್ ಆಗ್ರಹಿಸಿದ್ದಾರೆ.
ಬಸವರಾಜ್ ಹೊರಟ್ಟಿ ಹಾಗೂ ನಾಗರಾಜ್ ಯಾದವ್ ಮುನಿಸು ಅಷ್ಟಕ್ಕೇ ನಿಂತಿಲ್ಲ. ವಿಧಾನ ಪರಿಷತ್ ಕಲಾಪದ ವೇಳೆಯೂ ಪರೋಕ್ಷವಾಗಿ ನಾಗರಾಜ್ ಯಾದವ್ ಅವರು ಹೊರಟ್ಟಿ ವಿರುದ್ದ ಆಕ್ಷೇಪ ಎತ್ತಿದ್ದಾರೆ. ಪ್ರಶ್ನೋತ್ತರ ಕಲಾಪದ ವೇಳೆ ನಾಗರಾಜ್ ಯಾದವ್ ಮತ್ತು ಸಭಾಪತಿ ಹೊರಟ್ಟಿ ನಡುವೆ ಮಾತು ತಾರಕಕ್ಕೇರಿದೆ. ಇದರ ತೀವ್ರತೆ ಅರಿತುಕೊಂಡ ಕಾಂಗ್ರೆಸ್ ಹಿರಿಯ ನಾಯಕರು ನಾಗರಾಜ್ ಯಾದವರನ್ನೇ ಸಮಾಧಾನಪಡಿಸಿದ್ದಾರೆ.
ಇನ್ನು ನಾಗರಾಜ್ ಯಾದವ್ ಅವರ ಸಾಲು ಸಾಲು ಆರೋಪಕ್ಕೆ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯಿಸಿದ್ದು. ತಮ್ಮ ವಿರುದ್ದದ ಆರೋಪಗಳಿಗೆ ದಾಖಲೆ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಹೊರಟ್ಟಿ, ದಾಖಲೆ ಬಿಡುಗಡೆ ಮಾಡದೆಯೇ ಕೇವಲ ಆರೋಪ ಮಾಡುವವರು ಹೇಡಿಗಳು ಎಂದು ಚಾಟಿಬೀಸಿದ್ದಾರೆ.
ಹೌದು…ನಾಗರಾಜ್ ಯಾದವ್ ಅವರು ಸದನ ಆರಂಭದಿಂದಲೇ ಹೊರಟ್ಟಿ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.
ಸಭಾಪತಿ ಎಲ್ಲ ಪಕ್ಷದ ಪರ ಇರಬೇಕು. ಆದರೆ ಬಸವರಾಜ್ ಹೊರಟ್ಟಿ ಅವರು ಆಡಳಿತ ಪಕ್ಷಕ್ಕೆ ಒಂದು, ವಿಪಕ್ಷಗಳಿಗೆ ಮತ್ತೊಂದು ಎಂಬ ರೀತಿ ಮಾಡುತ್ತಿದ್ದಾರೆ. ಬಿಜೆಪಿಯವರನ್ನು ಓಲೈಕೆ ಮಾಡಲು ನಮಗೆ ಮಾತನಾಡಲು ಅವಕಾಶ ಕೊಡ್ತಿಲ್ಲ. ಆ ಮೂಲಕ ಹೊರಟ್ಟಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸದನಲ್ಲಿ ಗುಡುಗಿದರು.
ಇಷ್ಟಕ್ಕೆ ಸುಮ್ಮನಾಗದ ನಾಗರಾಜ್ ಯಾದವ್, ತಮ್ಮ ಕೈ ಕೆಳಗೆ ಕೆಲಸ ಮಾಡುವ ನೌಕರರ ಫೋನ್ಕಾಲ್ ಲಿಸ್ಟ್ಗಳನ್ನು ಅವರು ತೆಗೆದುಕೊಂಡಿದ್ದು, ಈ ಬಗ್ಗೆ ತನಿಖೆ ನಡೆದರೆ ಸತ್ಯ ಹೊರಬರಲಿದೆ. ಜೊತೆಗೆ ನೇಮಕಾತಿಗಳಲ್ಲಿಯೂ ಹೊರಟ್ಟಿ ಅವ್ಯವಹಾರ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಸಿ.ಟಿ. ರವಿ ಅವಾಚ್ಯ ಶಬ್ದ ಬಳಕೆ ಮಾಡಿದ್ದ ಬಗ್ಗೆ ಬಗ್ಗೆ ದೂರು ಕೊಟ್ಟಾಗ ನಾನು ಆ ಮಾತು ಕೇಳಿಸಿಕೊಂಡಿಲ್ಲ ಅಂದಿದ್ದರು. ನೈತಿಕತೆ ಕಳೆದುಕೊಂಡ ಮೇಲೆ ಅವರು ರಾಜೀನಾಮೆ ಕೊಟ್ಟು ಹೋಗುವುದು ಸೂಕ್ತ ಎಂದು ವಾಗ್ದಾಳಿ ನಡೆಸಿದ್ದರು. ಹೀಗೆ ನಾಗರಾಜ್ ಯಾದವ್ ಸಾಲು ಸಾಲು ಆರೋಪ ಮಾಡುವ ಮೂಲಕ ಹೊರಟ್ಟಿಯವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸುವ ತಂತ್ರವೇ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಸದ್ಯ ಹೊರಟ್ಟಿ ವಿರುದ್ದ ಕಲಹಕ್ಕೆ ಬಿದ್ದಿರೋ ಯಾದವ್ ಪಕ್ಷದ ಅಂಗಳದಲ್ಲೂ ವಿಷಯ ಚರ್ಚೆ ಮಾಡಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಇರುವಾಗ ಪರಿಷತ್ ನಲ್ಲಿ ಸಂಖ್ಯಾಬಲವು ಹೆಚ್ಚಿರುವಾಗ ಬಿಜೆಪಿ ಪಕ್ಷದ ಸಭಾಪತಿ ಮುಂದುವರಿಯುವುದು ಬೇಡ ಎಂದು ಯಾದವ್ ಆಗ್ರಹಿಸಿದ್ದಾರೆ. ಇದೇ ಕಾರಣಕ್ಕೋಸ್ಕರ ಮುಂದಿನ ದಿನಗಳಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆದರೂ ಆಶ್ಚರ್ಯವಿಲ್ಲ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.