ದೇಶಕ್ಕೆ ಮಾರಕವಾಗುವ ತೀರ್ಪುಗಳು ಬರುತ್ತಿವೆ: ನ್ಯಾಯಾಲಯಗಳ ಬಗ್ಗೆ ಯತೀಂದ್ರ ವಿವಾದಾತ್ಮಕ ಹೇಳಿಕೆ

| Updated By: Ganapathi Sharma

Updated on: Nov 29, 2024 | 12:16 PM

ಕಾಂಗ್ರೆಸ್ ಎಂಎಲ್​ಸಿ ಯತೀಂದ್ರ ದೇಶದ ನ್ಯಾಯಾಲಯಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ನಂತರ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಅದಾನಿ ಮತ್ತು ಬಾಬ್ರಿ ಮಸೀದಿ ಪ್ರಕರಣಗಳ ತೀರ್ಪುಗಳನ್ನು ಉಲ್ಲೇಖಿಸಿ ಅವುಗಳನ್ನೂ ಟೀಕಿಸಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ದೇಶಕ್ಕೆ ಮಾರಕವಾಗುವ ತೀರ್ಪುಗಳು ಬರುತ್ತಿವೆ: ನ್ಯಾಯಾಲಯಗಳ ಬಗ್ಗೆ ಯತೀಂದ್ರ ವಿವಾದಾತ್ಮಕ ಹೇಳಿಕೆ
ಯತೀಂದ್ರ ಸಿದ್ದರಾಮಯ್ಯ
Follow us on

ಮೈಸೂರು, ನವೆಂಬರ್ 29: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ಎಂಎಲ್​ಸಿ ಯತೀಂದ್ರ ದೇಶದ ನ್ಯಾಯಾಲಯಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಬಳಿಕ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನ್ಯಾಯಾಲಯಗಳ ಮತ್ತು ತೀರ್ಪಿನ ಕುರಿತು ತಾವು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮುಡಾ ಹಗರಣ ಸಂಬಂಧ ತನಿಖೆ ನಡೆಯುತ್ತಿರುವ ಹೊತ್ತಿನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಯಾವುದೇ ನಿರ್ದಿಷ್ಟ ಪ್ರಕರಣದ ತೀರ್ಪಿನ ಬಗ್ಗೆ ನಾನು ಮಾತನಾಡಿಲ್ಲ. ಜನರ ಭಾವನೆ ಏನಿದೆ ಅನ್ನುವುದರ ಬಗ್ಗೆ ನಾನು ಮಾತಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಯತೀಂದ್ರ ಹೇಳಿದ್ದೇನು?

ಇತ್ತೀಚೆಗೆ ದೇಶಕ್ಕೆ ಮಾರಕ ಆಗುವ ರೀತಿ ತೀರ್ಪು ಬರುತ್ತಿದೆ. ದೇಶಕ್ಕೆ ಒಳ್ಳೆಯ ರೀತಿ ತೀರ್ಪು ಬಂದಿಲ್ಲ ಎಂದ ಎಂದು ಯತೀಂದ್ರ ಹೇಳಿದ್ದಾರೆ. ಉದ್ಯಮಿ ಅದಾನಿ ವಿಚಾರ, ಬಾಬ್ರಿ ಮಸೀದಿ ಧ್ವಂಸದ ವಿಚಾರದಲ್ಲಿ ದೇಶದ ಹಿತಾಸಕ್ತಿ ಪರ ತೀರ್ಪು ಬಂದಿಲ್ಲ ಎಂದು ಅವರು ಹೇಳಿದ್ದಾರೆ.

‘ಮುಡಾ: ಸಿದ್ದರಾಮಯ್ಯ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ’

ಮುಡಾದಲ್ಲಿ ಕಾನೂನುಬಾಹಿರವಾಗಿ ಬದಲಿ ಭೂಮಿ ಪಡೆದ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಯತೀಂದ್ರ, ನನ್ನ ತಂದೆ (ಸಿದ್ದರಾಮಯ್ಯ) ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ. ನನ್ನ ತಂದೆ ಸಿದ್ದರಾಮಯ್ಯ, ತಾಯಿ ಪಾರ್ವತಿ, ಮಾವ ಮಲ್ಲಿಕಾರ್ಜುನ ಮೂವರ ವಿರುದ್ಧವೂ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ. ಇದು‌ ತನಿಖಾ ಸಂಸ್ಥೆಗೂ ಗೊತ್ತಿದೆ ಎಂದು ಯತೀಂದ್ರ ಹೇಳಿದ್ದಾರೆ.

ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಮುಡಾ ಕ್ಲೀನ್ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಮುಡಾವನ್ನು ಕ್ಲೀನ್ ಮಾಡಲು ಆಯೋಗ ರಚನೆ ಮಾಡಿದ್ದೇವೆ. ಮುಡಾವನ್ನು ಖಂಡಿತಾ ನಾವೇ ಕ್ಲೀನ್ ಮಾಡುತ್ತೇವೆ ಎಂದು ಯತೀಂದ್ರ ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ

ಸುಳ್ಳು ಆರೋಪ ಮಾಡಿ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಬಿಜೆಪಿಯವರು ಪ್ರಜಾಪ್ರಭುತ್ವ ಕೊಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಮುಖ್ಯ ಟಾರ್ಗೆಟ್ ಅಧಿಕಾರಕ್ಕೆ ಬರುವುದು ಎಂದು ಯತೀಂದ್ರ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಮಂಡ್ಯ: ಬಾರ್​ಗೆ ಪರವಾನಗಿ ನೀಡಲು ಲಂಚ ಕೇಳಿದ ಆರೋಪ, ಎಫ್​ಐಆರ್ ದಾಖಲಾದರೆ ಚಲುವರಾಯಸ್ವಾಮಿಗೂ ಸಂಕಷ್ಟ

ಬಿಜೆಪಿಯವರು ಈಗ ಸಿಎಂ ಸಿದ್ದರಾಮಯ್ಯ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಹೆಸರಿಗೆ ಕಪ್ಪು ಮಸಿ ಬಳಿಯಲು ಯತ್ನ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಮುಗಿಸಲು ಅಡ್ಡಿಯಾಗಿರುವುದು ಸಿದ್ದರಾಮಯ್ಯ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯನವರನ್ನೇ ಟಾರ್ಗೆಟ್ ಮಾಡಲಾಗಿದೆ. ಉಪಚುನಾವಣೆ ಬಳಿಕ ವಿರೋಧ ಪಕ್ಷಗಳು ಉತ್ಸಾಹ ಕಳೆದುಕೊಂಡಿವೆ. ಅಧಿಕಾರ ಪಡೆಯಲು ಎಂತಹ ಕೆಳಮಟ್ಟಕ್ಕೆ ಬೇಕಾದ್ರೂ ಇಳಿಯುತ್ತಾರೆ. ಇಡಿ, ಸಿಬಿಐ ಮೂಲಕ ಬಿಜೆಪಿಯವರು ಪ್ರಯತ್ನ ಮುಂದುವರಿಸುತ್ತಾರೆ ಎಂದು ಯತೀಂದ್ರ ಕಿಡಿ ಕಾರಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:59 am, Fri, 29 November 24