ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ: 50 ಸಾವಿರಕ್ಕೂ ಹೆಚ್ಚು ಮೆಟ್ರೋ ಟಿಕೆಟ್ ಖರೀದಿಸಿದ ಕಾಂಗ್ರೆಸ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 15, 2022 | 2:40 PM

75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪಾದಯಾತ್ರೆಗೆ ಕಾಂಗ್ರೆಸ್ ಭರದ ಸಿದ್ದತೆ ನಡೆಸಿದ್ದು, ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ಭರ್ಜರಿ ತಯಾರಿ ಮಾಡಲಾಗಿದೆ.

ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ: 50 ಸಾವಿರಕ್ಕೂ ಹೆಚ್ಚು ಮೆಟ್ರೋ ಟಿಕೆಟ್ ಖರೀದಿಸಿದ ಕಾಂಗ್ರೆಸ್
ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನಡಿಗೆ, ನಮ್ಮ ಮೆಟ್ರೋ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಇಂದು ನಗರದಲ್ಲಿ ಕಾಂಗ್ರೆಸ್ ನಡಿಗೆ (Congress walk) ನಡೆಯಲಿರುವ ಹಿನ್ನಲೆ ನಮ್ಮ ಮೆಟ್ರೋ ನಿಗಮದಿಂದ ಸುಮಾರು 50ಸಾವಿರಕ್ಕೂ ಹೆಚ್ಚು ಟಿಕೆಟ್​ನ್ನು ಕಾಂಗ್ರೆಸ್ ಖರೀದಿ ಮಾಡಿದೆ. ಕಾಂಗ್ರೆಸ್ ನಡಿಗೆ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಕಡೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಲಿದ್ದು, ಬರುವ ಕಾರ್ಯಕರ್ತರು ಕಾರ್ಯಕ್ರಮಕ್ಕೆ ತೆರಳಲು ಕೆಪಿಸಿಸಿ ಮೆಟ್ರೋ ಟಿಕೆಟ್ ಖರೀದಿಸಿದೆ. ಕೆಂಗೇರಿ ಮೆಟ್ರೋ ಸ್ಟೇಷನ್​ನಿಂದ, ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್​ವರೆಗೆ ಸುಮಾರು 20 ಸಾವಿರ ಮೆಟ್ರೋ ಪೇಪರ್ ಟಿಕೆಟ್ ಖರೀದಿ ಮಾಡಲಾಗಿದ್ದು, ಒಂದು ಪೇಪರ್ ಟಿಕೆಟ್​​ನ ಬೆಲೆ 30 ರೂ. ಇದೆ.

75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪಾದಯಾತ್ರೆಗೆ ಕಾಂಗ್ರೆಸ್ ಭರದ ಸಿದ್ದತೆ

75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಪಾದಯಾತ್ರೆಗೆ ಕಾಂಗ್ರೆಸ್ ಭರದ ಸಿದ್ದತೆ ನಡೆಸಿದ್ದು, ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ಭರ್ಜರಿ ತಯಾರಿ ಮಾಡಲಾಗಿದೆ. ಸುಮಾರು 1.5 ಲಕ್ಷಕ್ಕೂ ಹೆಚ್ಚು ಮಂದಿ ಫ್ರೀಡಂ ಮಾರ್ಚ್​ನಲ್ಲಿ ಹೆಜ್ಜೆ ಹಾಕುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಈಗಾಗಲೇ 75 ಸಾವಿರಕ್ಕೂ ಹೆಚ್ಚು ಜನರಿಂದ ಆನ್ ಲೈನ್ ರಿಜಿಸ್ಟ್ರೇಷನ್ ಮಾಡಲಾಗಿದೆ. ಫ್ರೀಡಂ ಮಾರ್ಚ್ ವ್ಯವಸ್ಥೆಗಾಗಿ 11 ಉಪಸಮಿತಿಗಳನ್ನು ಮಾಡಿ, ಒಂದೊಂದು ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸಾರಿಗೆ, ಆಹಾರ, ಮಾಧ್ಯಮ ಸೇರಿದಂತೆ ವಿವಿಧ ಉಪಸಮಿತಿ ರಚನೆ ಮಾಡಲಾಗಿದೆ. ಫ್ರೀಡಂ ಮಾರ್ಚ್ ನಲ್ಲಿ ಹೆಜ್ಜೆ ಹಾಕುವ ಪ್ರತಿ ವ್ಯಕ್ತಿಗೆ ಟಿಶರ್ಟ್, ಕ್ಯಾಪ್, ಹಾಗೂ ಕಿಟ್ ವಿತರಣೆ ಮಾಡಲಾಗುತ್ತದೆ.

ಇದನ್ನೂ ಓದಿ: Independence Day 2022: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ! ಇಲ್ಲಿದೆ ಫೋಟೋ

ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಕನಕಪುರ, ಹೊಸೂರು ಭಾಗದಿಂದ ಬೆಂಗಳೂರಿಗೆ ಪ್ರವೇಶ ಪಡೆಯುವ ಮಾರ್ಗಗಳಾಗಿದ್ದು, ತುಮಕೂರು ರಸ್ತೆ ಮೂಲಕ 21 ಜಿಲ್ಲೆಗಳಿಂದ ಬರುವವರಿಗೆ ಸಿದ್ದಗಂಗಾ ಮಠದಲ್ಲಿ ಹಿಂದಿನ ರಾತ್ರಿ ಬಂದು ತಂಗುವ ಸಿದ್ಧತೆ ಮಾಡಲಾಗಿದೆ. ತುಮಕೂರು ರಸ್ತೆಯಿಂದ ಬರುವವರಿಗೆ ಅಂತಾರಾಷ್ಟ್ರೀಯ ಪ್ರದರ್ಶನ ಮೈದಾನದವರೆಗೂ ಅವರು ತಮ್ಮ ವಾಹನ ತರಬಹುದು. ಅಲ್ಲಿಂದ ಮೆಟ್ರೋ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಆಗಮಿಸಬಹುದಾಗಿದೆ.

ಕಾಂಗ್ರೆಸ್ ಫ್ರೀಡಂ ಮಾರ್ಚ್ ಸಾಗುವ ಮಾರ್ಗ

ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಧ್ಯಾಹ್ನ 2 ಗಂಟೆಗೆ ಪಾದಯಾತ್ರೆ ಆರಂಭವಾಗಲಿದ್ದು, ಕೆ.ಆರ್ ವೃತ್ತ, ಹಡ್ಸನ್ ಸರ್ಕಲ್, ಜೆಸಿ ರಸ್ತೆ, ಮಿನರ್ವ ವೃತ್ತ, ವಿವಿಪುರಂ ವೃತ್ತ ಮಾರ್ಗವಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದ ಮೂಲಕ  ಫ್ರೀಡಂ ಮಾರ್ಚ್ ತಲುಪಲಿದೆ. ನಂತರ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪಾದಯತ್ರೆ ಮಾರ್ಗದಲ್ಲಿ ಸ್ವಾತಂತ್ರ್ಯ ಹೋರಾಟದ ಚಿತ್ರಣವನ್ನು ಬಿಂಬಿಸುವ ಸ್ಥಬ್ದ ಚಿತ್ರಗಳ ಪ್ರದರ್ಶನ ಮಾಡಲಾಗುವುದು. ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರ ಚಿತ್ರವನ್ನು  ಕಾಂಗ್ರೆಸ್ ಪ್ರದರ್ಶಿಸಲಿದೆ. ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ ಹಾಗೂ ಹೋರಾಟ ಹಾಗೂ ಬಲಿದಾನದ ಬಗ್ಗೆ ತಿಳಿಯುವಂತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ನಿರೀಕ್ಷೆ ಹೆಚ್ಚಿಸಿದ ‘19.20.21’ ಚಿತ್ರದ ಪೋಸ್ಟರ್​; ನೈಜ ಘಟನೆ ಆಧರಿಸಿ ತಯಾರಾಗ್ತಿದೆ ಮಂಸೋರೆ ಸಿನಿಮಾ

ಮಂಗಳೂರು, ಬೆಳಗಾವಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಕಲಾ ತಂಡಗಳು ಪಾದಯಾತ್ರೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಗೌರವ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಪಾದಯಾತ್ರೆ ಮಾರ್ಗ ಪೂರ್ತಿ ಸ್ವಯಂ ಸೇವಕರು, ಪ್ರತಿ ಕಿ.ಮೀಗೆ ಒಂದರಂತೆ 6 ಆಂಬುಲೆನ್ಸ್, ವೈದ್ಯರ ತಂಡ, ತಂಪು ಪಾನೀಯ ವ್ಯವಸ್ಥೆ ಮಾಡಲಾಗಿದೆ. ಸಂಜೆ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಖ್ಯಾತ ಗಾಯಕ ಹರಿಹರನ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಯಾವುದೇ ರಾಜಕೀಯ ಭಾಷಣಗಳು ಇಲ್ಲದಂತೆ ಕಾಂಗ್ರೆಸ್ ನೋಡಿಕೊಂಡಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 12:07 pm, Mon, 15 August 22