ನಿರೀಕ್ಷೆ ಹೆಚ್ಚಿಸಿದ ‘19.20.21’ ಚಿತ್ರದ ಪೋಸ್ಟರ್; ನೈಜ ಘಟನೆ ಆಧರಿಸಿ ತಯಾರಾಗ್ತಿದೆ ಮಂಸೋರೆ ಸಿನಿಮಾ
19.20.21 Kannada Movie: ‘19.20.21’ ಸಿನಿಮಾದ ಪೋಸ್ಟರ್ನಲ್ಲಿ ಇರುವ ಚಿತ್ರಣವೇ ಭಯ ಹುಟ್ಟಿಸುವಂತಿದೆ. ಈ ಪೋಸ್ಟರ್ ಮೂಲಕ ತಮ್ಮ ಸಿನಿಮಾದ ಕಥಾವಸ್ತು ಏನು ಎಂಬುದರ ಬಗ್ಗೆ ನಿರ್ದೇಶಕ ಮಂಸೋರೆ ಸುಳಿವು ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಮಂಸೋರೆ (Director Mansore) ಅವರು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಪ್ರತಿ ಸಿನಿಮಾದಲ್ಲಿಯೂ ಅವರು ಭಿನ್ನವಾದ ಕಥಾವಸ್ತುವನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತಾರೆ. ಮೊದಲ ಸಿನಿಮಾ ‘ಹರಿವು’ ಆಗಿರಲಿ ಅಥವಾ ಈಗ ನಿರ್ದೇಶನ ಮಾಡುತ್ತಿರುವ ‘19.20.21’ ಚಿತ್ರವಾಗಿರಲಿ… ಎಲ್ಲದರಲ್ಲೂ ಅವರು ಸಾಮಾಜಿಕ ಕಳಿಕಳಿಯನ್ನು ತೋರುವ ಪ್ರಯತ್ನ ಮಾಡಿದ್ದಾರೆ. ರಿಯಲ್ ಲೈಫ್ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ‘19.20.21’ ಸಿನಿಮಾ (19.20.21 Movie) ಸಿದ್ಧವಾಗುತ್ತಿದೆ. 75ನೇ ವರ್ಷದ ಸ್ವಾತಂತ್ರೋತ್ಸವದ (75th Independence Day) ಪ್ರಯುಕ್ತ ಈ ಸಿನಿಮಾದಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಥೀಮ್ ಏನು ಎಂಬುದನ್ನು ವಿವರಿಸುವ ರೀತಿಯಲ್ಲಿ ಈ ಪೋಸ್ಟರ್ ಮೂಡಿಬಂದಿದೆ. ಪ್ರೇಕ್ಷಕರ ಮನದಲ್ಲಿ ಕೌತುಕ ಮೂಡಿಸುವಲ್ಲಿ ‘19.20.21’ ಚಿತ್ರದ ಪೋಸ್ಟರ್ ಯಶಸ್ವಿ ಆಗಿದೆ.
ವ್ಯಕ್ತಿಯೊಬ್ಬರ ಬಾಯಿಗೆ ಬಟ್ಟೆ ಕಟ್ಟಲಾಗಿದೆ. ಬೆನ್ನಿನಲ್ಲಿ ರಕ್ತ ಸುರಿಯುತ್ತಿದೆ. ಪೋಸ್ಟರ್ನಲ್ಲಿ ಇರುವ ಈ ಚಿತ್ರಣವೇ ಭಯ ಹುಟ್ಟಿಸುವಂತಿದೆ. ‘2018ರಿಂದ 2022ರ ತನಕ UAPA ಕಾಯ್ದೆ ಅಡಿಯಲ್ಲಿ ಬಂಧನಕ್ಕೆ ಒಳಗಾದ 4690 ಜನರಲ್ಲಿ ಕೇವಲ 149 ಮಂದಿ ಮಾತ್ರ ಅಪರಾಧಿಗಳು’ ಎಂಬ ಮಾಹಿತಿಯನ್ನು ಈ ಪೋಸ್ಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಆ ಮೂಲಕ ತಮ್ಮ ಸಿನಿಮಾದ ಕಥಾವಸ್ತು ಏನು ಎಂಬುದರ ಬಗ್ಗೆ ನಿರ್ದೇಶಕ ಮಂಸೋರೆ ಸುಳಿವು ನೀಡಿದ್ದಾರೆ.
ಪರಭಾಷೆಯಲ್ಲಿ ‘ಜನ ಗಣ ಮನ’, ‘ವಿಸಾರಣೈ’, ‘ಜೈ ಭೀಮ್’ ಮುಂತಾದ ಸಿನಿಮಾಗಳು ಗಮನ ಸೆಳೆದಿದ್ದವು. ಅದೇ ಮಾದರಿಯಲ್ಲಿ ಮತ್ತೊಂದು ನೈಜ ಘಟನೆಯನ್ನು ‘19.20.21’ ಸಿನಿಮಾ ಜನರ ಮುಂದಿಡುವ ಸೂಚನೆ ಸಿಕ್ಕಿದೆ. ಮಂಸೋರೆ ಅವರ ‘ಆ್ಯಕ್ಟ್-1978’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ದೇವರಾಜ್ ಅವರೇ ‘ಡಿ ಕ್ರಿಯೇಷನ್ಸ್’ ಮೂಲಕ ‘19.20.21’ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.
ಬಾಲಾಜಿ ಮನೋಹರ್, ಎಂ.ಡಿ. ಪಲ್ಲವಿ, ಶೃಂಗಾ, ಸಂಪತ್ ಮೈತ್ರೇಯ, ಅವಿನಾಶ್, ಕೃಷ್ಣ ಹೆಬ್ಬಾಳೆ ಮುಂತಾದ ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬಿಂದುಮಾಲಿನಿ ಸಂಗೀತ ನಿರ್ದೇಶನ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಶಿವು ಬಿಕೆ ಕುಮಾರ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ನಿರ್ದೇಶಕ ಮಂಸೋರೆ ಅವರ ಜೊತೆಗೂಡಿ ವೀರೇಂದ್ರ ಮಲ್ಲಣ್ಣ ಅವರು ಚಿತ್ರಕಥೆ ಬರೆದಿದ್ದಾರೆ. ಮಂಸೋರೆ ಮತ್ತು ಅವಿನಾಶ್ ಜಿ. ಅವರ ಸಂಭಾಷಣೆ ಈ ಚಿತ್ರಕ್ಕಿದೆ.
ನಿಜವಾದ ‘ಸ್ವಾತಂತ್ರ್ಯ’ವೆಂದರೆ, ಆ ದೇಶದ ಪ್ರತಿಯೊಬ್ಬ ನಾಗರಿಕನ ಬದುಕು, ಜೀವನ ವಿಧಾನ, ನಡವಳಿಕೆ ಅಥವಾ ರಾಜಕೀಯ ದೃಷ್ಟಿಕೋನಗಳ ಮೇಲೆ ಅಧಿಕಾರದಿಂದ ಹೇರಲಾದ ‘ದಬ್ಬಾಳಿಕೆ-ದೌರ್ಜನ್ಯದ’ ನಿರ್ಬಂಧಗಳಿಂದ ಸಮಾಜದೊಳಗೆ ‘ಮುಕ್ತ’ವಾಗಿರುವ ಸ್ಥಿತಿ.#Film19_20_21#nineteentwentytwentyone pic.twitter.com/RfCObi0kct
— mansore (@mansore25) August 15, 2022
‘ನಿಜವಾದ ಸ್ವಾತಂತ್ರ್ಯ ಎಂದರೆ, ಆ ದೇಶದ ಪ್ರತಿಯೊಬ್ಬ ನಾಗರಿಕನ ಬದುಕು, ಜೀವನ ವಿಧಾನ, ನಡವಳಿಕೆ ಅಥವಾ ರಾಜಕೀಯ ದೃಷ್ಟಿಕೋನಗಳ ಮೇಲೆ ಅಧಿಕಾರದಿಂದ ಹೇರಲಾದ ದಬ್ಬಾಳಿಕೆ-ದೌರ್ಜನ್ಯದ ನಿರ್ಬಂಧಗಳಿಂದ ಸಮಾಜದೊಳಗೆ ಮುಕ್ತವಾಗಿರುವ ಸ್ಥಿತಿ’ ಎಂದು ಮಂಸೋರೆ ಪೋಸ್ಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.