ಬೆಳಗಾವಿ, ಏಪ್ರಿಲ್ 14: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ವಿವಾದಾತ್ಮಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ (Sanjay Patil) ವಿರುದ್ಧ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. ಈ ಕುರಿತಾಗಿ ಸಂಜಯ್ ಪಾಟೀಲ್‌ಗೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಈ ವಿಚಾರವಾಗಿ ನಿನ್ನೆ ಕಾಂಗ್ರೆಸ್ ಕಾರ್ಯಕರ್ತೆಯರು ಬೆಳಗಾವಿಯ ಆದರ್ಶ ನಗರದಲ್ಲಿರುವ ಸಂಜಯ್ ಪಾಟೀಲ್ ಮನೆ ಎದುರು ಪ್ರತಿಭಟನೆ ಮಾಡಿದ್ದರು.
ಈ ವಿವಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯದ ಮಹಿಳೆಯರನ್ನ ನಾನು ಪ್ರತಿನಿಧಿಸುತ್ತೇನೆ. ನಾಲಿಗೆ ಮೇಲೆ ಹಿಡಿತ ಇರಬೇಕು. ವೇದಿಕೆ ಮೇಲೆ ಇದ್ದವರು ಯಾಕೆ ತಡೆಯಲ್ಲ. ಸಂಜಯ್ ಪಾಟೀಲ್ ಮೂಲಕ ಮಾತನಾಡಿಸಿದ್ದಾರಾ? ನನಗೆ ಅಲ್ಲ ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ; ಸಂಜಯ್ ಪಾಟೀಲ್ ಮನೆ ಎದುರು ‘ಕೈ’ ಕಾರ್ಯಕರ್ತೆಯರಿಂದ ಪ್ರತಿಭಟನೆ
ನಾನು ಲಿಂಗಾಯತ ಸಮಾಜದ ಹೆಣ್ಣು ಮಗಳು. ಲಿಂಗಾಯತ ಸಮಾಜಕ್ಕೆ ಮಾಡಿದ ಅಪಮಾನ. ಇಡೀ ರಾಜ್ಯದ ಮಹಿಳೆಯರಿಗೆ ಧಿಕ್ಕರಿಸಲು ಕರೆ ಕೊಡುತ್ತೇನೆ. ಮಹಿಳೆಯ ಆತ್ಮಗೌರವಕ್ಕೆ ಧಕ್ಕೆ ಆಗಿದೆ. ಮಹಿಳೆಯರ ಸಬಲೀಕರಣ ವಿರೋಧಿಗಳು ಬಿಜೆಪಿಯವರು. ಗ್ಯಾರಂಟಿ ಯೋಜನೆಯ ಬಗ್ಗೆಯೂ ವಿರೋಧ ಮಾಡುತ್ತಾರೆ.
ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಸಂಜಯ್ ಪಾಟೀಲ್, ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಅತೀ ಹೆಚ್ಚು ಮಹಿಳೆಯರು ಸಮಾವೇಶದಲ್ಲಿ ಭಾಗಿಯಾಗಿದ್ದೀರಿ, ಇದರಿಂದ ಅವರಿಗೆ ಇಂದು ರಾತ್ರಿ ನಿದ್ದೆ ಬರುವುದಿಲ್ಲ. ಅದರಲ್ಲೂ ಇಂದು ರಮೇಶ್ ಜಾರಕಿಹೊಳಿ ಕೂಡ ಪ್ರಚಾರಕ್ಕೆ ಬಂದಿದ್ದರಿಂದ ಮಾತ್ರೆ ಜೊತೆಗೆ ಒಂದು ಪೆಗ್ ಎಕ್ಸ್ಟ್ರಾ ಹಾಕಿಕೊಳ್ಳಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಸಂಜಯ್ ಪಾಟೀಲ್ರ ವಿವಾದಾತ್ಮಕ ಹೇಳಿಕೆ ಬಗ್ಗೆ ನಿನ್ನೆ ವಿಡಿಯೋ ಮೂಲಕ ಉತ್ತರಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬಿಜೆಪಿಯವರು ಕೇವಲ ಬಾಯಿ ಮಾತಿನಲ್ಲಿ ರಾಮ ಎಂದರೆ, ಬೇಟಿ ಬಚಾವೋ, ಬೇಟಿ ಪಡಾವೋ ಎಂದರೆ ಸಾಲುವುದಿಲ್ಲ. ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸುವುದು ಹಿಂದೂ ಸಂಸ್ಕೃತಿ. ಸಂಜಯ್ ಪಾಟೀಲ್ ಇಂತಹ ಹೇಳಿಕೆ ನೀಡುವ ಮೂಲಕ ದೇಶದ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಅವರ ಹೇಳಿಕೆ ಖಂಡನೀಯವಾದದ್ದು ಎಂದಿದ್ದರು.
ಸಂಜಯ್ ಪಾಟೀಲ್ ಹೇಳಿಕೆ ವಿಚಾರವಾಗಿ ಬೆಳಗಾವಿಯ ಯಮಕನಮರಡಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಯಾರು ಬೇಕಾದರೂ ಹೇಳಲಿ ವೈಯಕ್ತಿಕವಾಗಿ ಅವರಿಗೆ ಬಿಟ್ಟಿದ್ದು. ಅಂತವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:12 pm, Sun, 14 April 24