ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಕೊರೊನಾ ವಾರಿಯರ್ ಸಾವು; ಬಾಗೇಪಲ್ಲಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಇನ್ನಿಲ್ಲ
ಮಧ್ಯರಾತ್ರಿ ಶ್ರೀನಿವಾಸ್ಗೆ ಉಸಿರಾಟ ತೊಂದರೆ ಉಂಟಾಗಿದ್ದು, ಚಿಂತಾಮಣಿ ತಾಲೂಕು ಆಸ್ಪತ್ರೆಗೆ ಕರೆತರಲಾಗಿತ್ತು. ನಂತರ ಈ ಆಸ್ಪತ್ರೆಯಿಂದ ಹೊಸಕೋಟೆಯ ಎಂ.ವಿ.ಜೆ.ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲೇ ಶ್ರೀನಿವಾಸ್ ಕೊನೆ ಉಸಿರೆಳೆದಿದ್ದಾರೆ.
ಚಿಕ್ಕಬಳ್ಳಾಪುರ: ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಕೊರೊನಾ ವಾರಿಯರ್ ಸಾವಿಗೀಡಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀನಿವಾಸ್ ಮೃತಪಟ್ಟಿದ್ದಾರೆ. ಮಧ್ಯರಾತ್ರಿ ಶ್ರೀನಿವಾಸ್ಗೆ ಉಸಿರಾಟ ತೊಂದರೆ ಉಂಟಾಗಿದ್ದು, ಚಿಂತಾಮಣಿ ತಾಲೂಕು ಆಸ್ಪತ್ರೆಗೆ ಕರೆತರಲಾಗಿತ್ತು. ನಂತರ ಈ ಆಸ್ಪತ್ರೆಯಿಂದ ಹೊಸಕೋಟೆಯ ಎಂ.ವಿ.ಜೆ.ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲೇ ಶ್ರೀನಿವಾಸ್ ಕೊನೆ ಉಸಿರೆಳೆದಿದ್ದಾರೆ.
ಸರಳ ಸಜ್ಜನಿಕೆ ಸ್ವಾಭಾವದಿಂದ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದ್ದ ಶ್ರೀನಿವಾಸ್ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ಬೆಳಿಗ್ಗೆಯಿಂದ ಸಂಜೆವರೆಗೂ ಲಾಕ್ಡೌನ್ ಬಂದೋಬಸ್ತ್ ಕಾರ್ಯದಲ್ಲಿ ನಿರತರಾಗಿದ್ದ ಹೆಡ್ ಕಾನ್ಸ್ಟೇಬಲ್ ನಿನ್ನೆ ಮಧ್ಯರಾತ್ರಿ ಹೊತ್ತಿಗೆ ಚಿರನಿದ್ರೆಗೆ ಜಾರಿದ್ದಾರೆ.
ಕೊರೊನಾ ಸೋಂಕಿನಿಂದ ಸರ್ಕಾರಿ ಶಾಲೆ ಶಿಕ್ಷಕ ಸಾವು ಬಾಗಲಕೋಟೆ ತಾಲೂಕಿನ ವೀರಾಪುರದ ಪುನರ್ವಸತಿ ಕೇಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ವಿ.ಕಡಿವಾಲ(49) ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಶಿಕ್ಷಕ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕೆರಕಲಮಟ್ಟಿ ಗ್ರಾಮದವರು. ಏಳು ದಿನದ ಹಿಂದೆ ಕೆ.ವಿ.ಕಡಿವಾಲ ಅವರಿಗೆ ಕೊರೊನಾ ಸೊಂಕು ದೃಢಪಟ್ಟಿತ್ತು. ಮೊದಲು ಹೋಮ್ ಐಸೊಲೇಶನ್ನಲ್ಲಿದ್ದ ಅವರು ಬಳಿಕ ಮೂರು ದಿನದ ಹಿಂದೆ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ಶಿಕ್ಷಕ ಮೃತಪಟ್ಟಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ಖಾಸಗಿ ಕ್ಲಿನಿಕ್ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಹೆರಿಗೆ ಸಂದರ್ಭದಲ್ಲಿ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಮೃತ ದಿವ್ಯಾ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಮೃತ ದಿವ್ಯ (28)ರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಗಂಡು ಮಗವಿಗೆ ಜನ್ಮ ನೀಡಿದ್ದ ದಿವ್ಯಾರನ್ನು ಮನೆಗೆ ಕರೆದುಕೊಂಡು ಬರಲಾಗಿದೆ.
ಇದಾದ ನಂತರ ಮನೆಗೆ ಬಂದ ಮೇಲೆ ದಿವ್ಯಾಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಕರುಳಿಗೆ ಹಾನಿಯಾಗಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಹೆರಿಗೆ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ದಿವ್ಯ ಮೃತಪಟ್ಟಿದ್ದಾರೆ ಎಂದು ಸದ್ಯ ಪೋಷಕರು ಆರೋಪ ಮಾಡಿದ್ದು, ಖಾಸಗಿ ಕ್ಲಿನಿಕ್ ವಿರುದ್ಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:
ಕೊರೊನಾ ಸಂಬಂಧಿತ ಉಸಿರಾಟದ ಸಮಸ್ಯೆಯಿಂದ ಅಸುನೀಗಿದ ಬೆಂಗಳೂರಿನ ಕೊರೊನಾ ವಾರಿಯರ್
Published On - 5:45 pm, Sat, 1 May 21