ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡರೂ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ ಇಲ್ಲ; ಧಾರವಾಡ ಜಿಲ್ಲಾಡಳಿತಕ್ಕೆ ಹೆಚ್ಚಿದ ಆತಂಕ
ಉಳಿದ ಜಿಲ್ಲೆಗೆ ಹೋಲಿಕೆ ಮಾಡಿದರೆ ಧಾರವಾಡ ಜಿಲ್ಲೆಯಲ್ಲಿ ಹೆಚ್ಚು ಐಸಿಯು ಕೇಸುಗಳಿವೆ. ಎಲ್ಲ ಜಿಲ್ಲೆಯಲ್ಲಿ ಈ ಪ್ರಕರಣಗಳು ಎರಡು ಅಂಕಿಯಲ್ಲಿದ್ದರೆ ನಮ್ಮ ಜಿಲ್ಲೆಯಲ್ಲಿ ಅದು ಮೂರು ಅಂಕಿಗಳಲ್ಲಿದೆ. ಅಲ್ಲದೇ ಎರಡು ವಾರಗಳ ಹಿಂದೆ ಐಸಿಯುನಲ್ಲಿ ದಾಖಲಾದವರ ಪೈಕಿ ಕೆಲಸವರು ಇದೀಗ ಮೃತಪಡುತ್ತಿರುವುದರಿಂದ ಈ ಸಂಖ್ಯೆಯಲ್ಲಿ ಇನ್ನು ಕೂಡ ವ್ಯತ್ಯಾಸವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.
ಧಾರವಾಡ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗುತ್ತಿದೆ. ಅದಕ್ಕೆ ಧಾರವಾಡ ಜಿಲ್ಲೆ ಹೊರತಾಗಿಲ್ಲ. ಕಳೆದ ತಿಂಗಳು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದರು. ಆದರೆ ಇದೀಗ ಆ ಪ್ರಮಾಣ ಶೇಕಡಾ 25 ಕ್ಕೆ ಇಳಿದಿದೆ. ಆದರೆ ಧಾರವಾಡದಲ್ಲಿ ಆತಂಕ ಮಾತ್ರ ದೂರವಾಗಿಲ್ಲ. ಇದಕ್ಕೆ ಕಾರಣ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡು ಬಂದರೂ, ಸಾವಿನ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಧಾರವಾಡದಲ್ಲಿ ಸಾವಿಗೀಡಾಗುತ್ತಿರುವವರ ಸಂಖ್ಯೆ ಇನ್ನು ಹಾಗೆಯೇ ಇದೆ.
ಕಳೆದೊಂದು ವಾರದಿಂದ ಧಾರವಾಡ ಜಿಲ್ಲೆಯಲ್ಲಿ 250 ರಿಂದ 300 ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಕಳೆದ ತಿಂಗಳು ಪೂರ್ತಿ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್, ವೆಂಟಿಲೇಟರ್ ಕೊರತೆಯುಂಟಾಗಿ ಸೋಂಕಿತರು ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದರು. ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಬೆಡ್ಗಳು ತುಂಬಿ ಹೋಗಿದ್ದವು. ಆದರೆ ಇದೀಗ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಇದರಿಂದಾಗಿ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ. ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದರೂ ಕೊವಿಡ್ನಿಂದ ಮೃತರಾದವರ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರುತ್ತಿಲ್ಲ. ಜೂನ್ 1 ರಿಂದ ಒಂದು ವಾರದ ಅಂಕಿ-ಅಂಶಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗಿ ತಿಳಿದು ಬರುತ್ತದೆ.
ದಿನಾಂಕ ಸೋಂಕಿತರ ಸಂಖ್ಯೆ ಸಾವು
ಜೂನ್ 01 267 09 ಜೂನ್ 02 243 05 ಜೂನ್ 03 221 04 ಜೂನ್ 04 235 04 ಜೂನ್ 05 247 08 ಜೂನ್ 06 262 09 ಜೂನ್ 07 313 08 ———————————————- ಒಟ್ಟು 1788 47
ಕೊವಿಡ್ ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಗರಿಷ್ಠ ಸಂಖ್ಯೆ 384 ಆಗಿತ್ತು. ಆದರೆ ಎರಡನೇ ಅಲೆಯಲ್ಲಿ ಈ ಸಂಖ್ಯೆ ಕೆಲವೇ ದಿನಗಳಲ್ಲಿ ದಾಟಿಯಾಗಿತ್ತು. ಎರಡನೇ ಅಲೆಯ ಆರಂಭದ ದಿನಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸಾವಿನ ಸಂಖ್ಯೆ ತೀರಾನೇ ಕಡಿಮೆ ಇತ್ತು. ಆದರೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾವಿನ ಪ್ರಮಾಣ ಹೆಚ್ಚಾಗತೊಡಗಿತ್ತು. ಅಲ್ಲದೇ ಸಾವಿನ ಶೇಕಡಾವಾರು ಸಂಖ್ಯೆ ಕೂಡ ಹೆಚ್ಚಾಗುತ್ತಾ ಸಾಗಿತು. ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ತೀರಾನೇ ಕಡಿಮೆಯಾಗಿದ್ದರೂ ಸಾವಿನ ಪ್ರಮಾಣ ಮಾತ್ರ ಕಡಿಮೆಯಾಗುತ್ತಲೇ ಇಲ್ಲ.
ಈ ಬಗ್ಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರನ್ನು ಕೇಳಿದರೆ, ಉಳಿದ ಜಿಲ್ಲೆಗೆ ಹೋಲಿಕೆ ಮಾಡಿದರೆ ಧಾರವಾಡ ಜಿಲ್ಲೆಯಲ್ಲಿ ಹೆಚ್ಚು ಐಸಿಯು ಕೇಸುಗಳಿವೆ. ಎಲ್ಲ ಜಿಲ್ಲೆಯಲ್ಲಿ ಈ ಪ್ರಕರಣಗಳು ಎರಡು ಅಂಕಿಯಲ್ಲಿದ್ದರೆ ನಮ್ಮ ಜಿಲ್ಲೆಯಲ್ಲಿ ಅದು ಮೂರು ಅಂಕಿಗಳಲ್ಲಿದೆ. ಅಲ್ಲದೇ ಎರಡು ವಾರಗಳ ಹಿಂದೆ ಐಸಿಯುನಲ್ಲಿ ದಾಖಲಾದವರ ಪೈಕಿ ಕೆಲಸವರು ಇದೀಗ ಮೃತಪಡುತ್ತಿರುವುದರಿಂದ ಈ ಸಂಖ್ಯೆಯಲ್ಲಿ ಇನ್ನು ಕೂಡ ವ್ಯತ್ಯಾಸವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಮೊದಲು ನಿತ್ಯವೂ 3500 ರಿಂದ 4000 ಟೆಸ್ಟಿಂಗ್ ಆಗುತ್ತಿದ್ದವು. ಇದೀಗ ಸಾವಿರದಿಂದ 1500 ಟೆಸ್ಟ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇದೀಗ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಕಂಡು ಬಾರದೇ ಇರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ ಎನ್ನುವುದು ಮಾತ್ರ ನಿಜ. ಆದಷ್ಟು ಬೇಗ ಸಾವಿನ ಸಂಖ್ಯೆಯಲ್ಲೂ ಇಳಿಕೆ ಕಾಣಲಿ ಎನ್ನುವುದು ನಮ್ಮ ಆಶಯ.
ಇದನ್ನೂ ಓದಿ:
ಧಾರವಾಡದಲ್ಲಿ ಮದುವೆಗೆ ನಿಷೇಧ; ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಮಹತ್ವದ ನಿರ್ಧಾರ
ಕೊರೊನಾ ಸಾವಿನ ಸಂಖ್ಯೆಯಲ್ಲಿ 3ನೇ ಸ್ಥಾನಕ್ಕೆ ಏರಿದ ಭಾರತ; ಮೊದಲೆರಡು ಸ್ಥಾನ ಯಾವ ದೇಶಗಳಿಗೆ?