ಕಾರ್ಪೊರೇಷನ್ ಬ್ಯಾಂಕ್ ATMನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ಪ್ರಕರಣ: ಆರೋಪಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲುಶಿಕ್ಷೆ
2013ರಲ್ಲಿ ನಗರದ ಕಾರ್ಪೊರೇಷನ್ ಬ್ಯಾಂಕ್ ATMನಲ್ಲಿ ಜ್ಯೋತಿ ಉದಯ್ ಎಂಬ ಬ್ಯಾಂಕ್ ಮ್ಯಾನೇಜರ್ ಮೇಲೆ ಭೀಕರವಾಗಿ ಹಲ್ಲೆಗೈದಿದ್ದ ಆರೋಪಿ ಮಧುಕರ್ ರೆಡ್ಡಿಗೆ ಜೈಲುಶಿಕ್ಷೆಯಾಗಿದೆ.
ಬೆಂಗಳೂರು: 2013ರಲ್ಲಿ ನಗರದ ಕಾರ್ಪೊರೇಷನ್ ಬ್ಯಾಂಕ್ ATMನಲ್ಲಿ ಜ್ಯೋತಿ ಉದಯ್ ಎಂಬ ಬ್ಯಾಂಕ್ ಮ್ಯಾನೇಜರ್ ಮೇಲೆ ಭೀಕರವಾಗಿ ಹಲ್ಲೆಗೈದಿದ್ದ ಆರೋಪಿ ಮಧುಕರ್ ರೆಡ್ಡಿಗೆ ಜೈಲುಶಿಕ್ಷೆಯಾಗಿದೆ.
ಅಪರಾಧಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲುಶಿಕ್ಷೆ ಪ್ರಕಟವಾಗಿದೆ. ನಗರದ 65ನೇ ಸಿಸಿಹೆಚ್ ಕೋರ್ಟ್‌ನಿಂದ ಶಿಕ್ಷೆ ಪ್ರಕಟವಾಗಿದೆ. ದರೋಡೆ ಆರೋಪದಡಿ 10 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್ ಸಾಕ್ಷ್ಯ ನಾಶ ಮಾಡಿದ್ದಕ್ಕೆ 2 ವರ್ಷ ಶಿಕ್ಷೆ ಸಹ ವಿಧಿಸಿದೆ. ಆದರೆ, ಎರಡೂ ಶಿಕ್ಷೆಯನ್ನು ಜೊತೆಯಲ್ಲೇ ಅನುಭವಿಸಬೇಕಾಗಿರುವುದರಿಂದ ಮಧುಕರ್ ರೆಡ್ಡಿ ಗರಿಷ್ಟ 10 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಬೇಕು.
ಅಂದ ಹಾಗೆ, ಮಧುಕರ್ ರೆಡ್ಡಿ ಈಗಾಗಲೇ 3 ವರ್ಷ ಜೈಲಿನಲ್ಲಿ ಕಳೆದಿದ್ದಾನೆ. ಹಾಗಾಗಿ, ಆತ ಉಳಿದ 7 ವರ್ಷ ಜೈಲಿನಲ್ಲಿ ಕಳೆಯಬೇಕಿದೆ.
ಆರೋಪಿ ಮಧುಕರ್ ರೆಡ್ಡಿ 2013ರ ನ.19ರಂದು ನಗರದ ಕಾರ್ಪೊರೇಷನ್ ಬ್ಯಾಂಕ್ ATMನಲ್ಲಿ ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ಮಾಡಿದ್ದ. ಇದೀಗ, ಘಟನೆ ನಡೆದು 8 ವರ್ಷಗಳ ನಂತರ ಅಪರಾಧಿಗೆ ಜೈಲು ಶಿಕ್ಷೆಯಾಗಿದೆ.
‘ನಾನು ಆ ATM ಕಡೆ ಈಗಲೂ ಹೋಗುತ್ತಿಲ್ಲ’ ಇನ್ನು, ಆರೋಪಿ ಮಧುಕರ್ ರೆಡ್ಡಿಗೆ ಶಿಕ್ಷೆಯಾದ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿದ ಬ್ಯಾಂಕ್ ಮ್ಯಾನೇಜರ್ ಜ್ಯೋತಿ ಉದಯ್ ಅವರು ಇವತ್ತು ನನಗೆ ತುಂಬಾ ಖುಷಿಯಾಗ್ತಿದೆ. ಕೊನೆಗೂ ಆತನಿಗೆ ಶಿಕ್ಷೆಯಾಗಿದೆ. ಆದರೆ, ಅಪರಾಧಿ ಮಧುಕರ್ ರೆಡ್ಡಿಗೆ ಇನ್ನೂ ಕಠಿಣ ಶಿಕ್ಷೆ ಆಗಬೇಕಿತ್ತು. ನ್ಯಾಯಾಲಯದ ತೀರ್ಪನ್ನು ನಾನು ಗೌರವಿಸುತ್ತೇನೆ. ಆದರೆ, ಇನ್ನೂ ಕಠಿಣ ಶಿಕ್ಷೆ ಆಗಬಹುದು ಎಂಬ ನಿರೀಕ್ಷೆ ಇತ್ತು ಎಂದು ಹೇಳಿದರು.
ಜೊತೆಗೆ, ಈ ರೀತಿ ಯಾರು ಮಾಡಬಾರದು. ನಾನು ಆ ATM ಕಡೆ ಈಗಲೂ ಹೋಗುತ್ತಿಲ್ಲ ಎಂದು ಹೇಳಿದರು. ಜೊತೆಗೆ, ಮಹಿಳೆಯರು ATMಗೆ ಹೋಗುವಾಗ ತುಂಬಾ ಹುಷಾರಾಗಿರಿ ಎಂಬ ಸಲಹೆ ಸಹ ನೀಡಿದ್ದಾರೆ.
ಕಾರ್ಪೊರೇಷನ್ ಬ್ಯಾಂಕ್ ATMನಲ್ಲಿ ಜ್ಯೋತಿ ಮೇಲೆ ಮಚ್ಚು ಬೀಸಿದ್ದವ ಅಪರಾಧಿ- ಕೋರ್ಟ್ ತೀರ್ಪು: ಶಿಕ್ಷೆ ಏನು?
Published On - 4:36 pm, Tue, 2 February 21